ಸಾರಾಂಶ
ಯಲ್ಲಾಪುರ:
ಅಧಿಕಾರಿಗಳು ಬಿಗುಮಾನ ಬಿಟ್ಟು ಜನರೊಂದಿಗೆ ಉತ್ತಮ ಸಂವಹನ ಸಾಧಿಸಿ, ಸಾಧ್ಯವಿದ್ದಷ್ಟು ನೆರವು ನೀಡಲು ಗ್ರಾಮವಾಸ್ತವ್ಯ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಹಸೀಲ್ದಾರ್ ಎಂ. ಗುರುರಾಜ ಹೇಳಿದರು.ತಾಲೂಕಿನ ಕುಂದರಗಿ ಗ್ರಾಪಂ ವ್ಯಾಪ್ತಿಯ ಮಾವಿನಕಟ್ಟೆಯ ಭರತನಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಕಂದಾಯ ಇಲಾಖೆ ಮತ್ತು ತಾಲೂಕಾಡಳಿತದ ಸಹಯೋಗದಲ್ಲಿ ಶುಕ್ರವಾರ ನಡೆದ ಗ್ರಾಮವಾಸ್ತವ್ಯ ಮತ್ತು ಪಿಂಚಣಿ ದಿನ ಉದ್ಘಾಟಿಸಿ ಮಾತನಾಡಿದರು.
ಕಂದಾಯ ಇಲಾಖೆ ಅಧಿಕಾರಿಗಳು ಈ ಹಿಂದೇ ಕುದುರೆ ಮೇಲೆ ಸಂಚರಿಸಿ, ಜನರ ಬೇಕು-ಬೇಡಗಳನ್ನು ಗಮನಿಸುವ ಪರಿಸ್ಥಿತಿ ಇತ್ತು. ಬದಲಾದ ಈ ಕಾಲದಲ್ಲಿ ಅಧಿಕಾರಿಗಳು ವಾಹನದಲ್ಲಿ ತೆರಳಿ ಸಮಸ್ಯೆಗಳನ್ನು ನೇರವಾಗಿ ಬಗೆಹರಿಸುವ ಪರಿಸ್ಥಿತಿ ಬಂದಿದೆ ಎಂದರು.ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ೨೦೦೦ದಷ್ಟು ವಿದ್ಯಾರ್ಥಿಗಳ ಆಧಾರ್ ಕಾರ್ಡ್ ತಾಂತ್ರಿಕ ಕಾರಣದಿಂದಾಗಿ ಉನ್ನತೀಕರಣಗೊಳ್ಳದೇ, ಸಮಸ್ಯೆಯಾಗಿದೆ. ಕೃಷಿ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಯ ಎಲ್ಲ ಅಧಿಕಾರಿಗಳು ಸಾರ್ವಜನಿಕರೊಂದಿಗೆ ನಿರಂತರ ಸಂಪರ್ಕ ಮತ್ತು ಸಂಬಂಧವನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ತಹಸೀಲ್ದಾರ್ ಸೂಚಿಸಿದರು.ಎಲ್ಲ ಯೋಜನೆಗಳ ಕುರಿತು ವ್ಯಾಪಕ ಜಾಗೃತಿ ಮತ್ತು ಪ್ರಚಾರ ಕಾರ್ಯಕ್ರಮ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ತಾಪಂ ಇಒ ಜಗದೀಶ ಕಮ್ಮಾರ ಮಾತನಾಡಿ, ಒಗ್ಗೂಡುವಿಕೆ ಮೂಲಕವೇ ಎಲ್ಲ ಯೋಜನೆಗಳ ನಿಗದಿತ ಕಾಮಗಾರಿ ಕೈಗೊಳ್ಳುವಂತೆ ಸರ್ಕಾರದ ನಿರ್ದೇಶನವಿದೆ ಮತ್ತು ನರೇಗಾದಡಿ ವೈಯಕ್ತಿಕ ಕಾಮಗಾರಿಗೆ ಈ ಬಾರಿ ಅವಕಾಶ ಕಲ್ಪಿಸಲಾಗಿದೆ ಎಂದರು.ಸೇವಾ ಸಹಕಾರಿ ಸಂಘದ ಅಧ್ಯಕ್ಷ ಹೇರಂಭ ಹೆಗಡೆ ಮಾತನಾಡಿ, ಇಂತಹ ಸರ್ಕಾರಿ ಕಾರ್ಯಕ್ರಮಗಳನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಕುಂದರಗಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರಮ್ಯಶ್ರೀ ಮಾತನಾಡಿ, ಆರೋಗ್ಯ ಇಲಾಖೆ ನೀಡುವ ಆಯುಷ್ಮಾನ್ ಭಾರತ್ ಕಾರ್ಡಿನ ಪ್ರಯೋಜನ ಮತ್ತು ರೇಬೀಸ್, ಕ್ಷಯ ರೋಗಗಳ ಕುರಿತಾದ ರೋಗಗಳ ಕುರಿತು ವಹಿಸಬೇಕಾದ ಎಚ್ಚರಿಕೆ ವಿವರಿಸಿದರು.ಬಿಇಒ ಎನ್.ಆರ್. ಹೆಗಡೆ, ತಾಲೂಕಿನಲ್ಲಿ ಖಾಲಿ ಇರುವ ೧೪೧ ಶಿಕ್ಷಕರ ಹುದ್ದೆಯನ್ನು ಅತಿಥಿ ಶಿಕ್ಷಕರ ಮೂಲಕ ತುಂಬಲಾಗಿದೆ ಎಂದರು. ಸಭೆಯಲ್ಲಿ ಉಪಸ್ಥಿತರಿದ್ದ ರೈತರು ಪ್ರಸ್ತುತ ವ್ಯಾಪಕವಾಗಿ ಹರಡುತ್ತಿರುವ ಅಡಕೆ ಎಲೆಚುಕ್ಕೆ ರೋಗದ ಕುರಿತಂತೆ ಸಂಬಂಧಿತ ಇಲಾಖೆಯವರು ಇನ್ನಾದರೂ ಮುತುವರ್ಜಿ ವಹಿಸಿ ನೆರವು ನೀಡುವಂತೆ ಆಗ್ರಹಿಸಿದರು.
ಉಚಗೇರಿ ಮತ್ತು ಬೆಳ್ಳಂಬಿಯಲ್ಲಿ ಅಂಗನವಾಡಿಗೆ ಕಟ್ಟಡವಿಲ್ಲದೆ ಮಕ್ಕಳಿಗೆ ತೊಂದರೆಯಾಗಿದೆ ಎಂದು ಅನೇಕರು ಗಮನ ಸೆಳೆದರು. ಕೃಷಿ ಇಲಾಖೆಯ ಮಂಚಿಕೇರಿ ರೈತ ಸಂಪರ್ಕ ಕೇಂದ್ರದ ಆರ್.ಎಫ್. ಅಳವಂಡಿ, ತೋಟಗಾರಿಕೆ ಇಲಾಖೆಯ ಹೀನಾ ಶೇಕ್, ಸಿಡಿಪಿಒ ರಫೀಕಾ ಹೊಳ್ಳೂರು, ಆರೋಗ್ಯ ಇಲಾಖೆಯ ತಾಲೂಕು ಶಿಕ್ಷಣಾಧಿಕಾರಿ ಎಸ್.ಟಿ. ಭಟ್ಟ, ಮಂಚಿಕೇರಿ ವಲಯಾರಣ್ಯಾಧಿಕಾರಿ ಅಮಿತ್ ಚವ್ಹಾಣ್, ಗ್ರೇಡ್-೨ ತಹಸೀಲ್ದಾರ್ ಸಿ.ಜಿ. ನಾಯ್ಕ, ಗ್ರಾಪಂ ಅಧ್ಯಕ್ಷ ಯಮುನಾ ಸಿದ್ದಿ, ಉಪಾಧ್ಯಕ್ಷ ಸೌಮ್ಯಾ ನಾಯ್ಕ ಮತ್ತು ಸದಸ್ಯರು, ಹೆಸ್ಕಾಂ ಎಇಇ ವಿನಾಯಕ ಪೇಟ್ಕರ್, ಲೋಕೋಪಯೋಗಿ ಇಲಾಖೆಯ ಚೇತನ್ ತಂತಮ್ಮ ಇಲಾಖೆಯ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸಿದರು.ತಾಲೂಕು ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ್, ಜಿಪಂ ಅಭಿಯಂತರ ಅಶೋಕ ಬಂಟ ಉಪಸ್ಥಿತರಿದ್ದರು. ಇದೇ ವೇಳೆ ಕುಂದರಗಿ ಫಿರ್ಕಾ ವ್ಯಾಪ್ತಿಯ ೧೫ ವಿವಿಧ ಪಿಂಚಣಿ ಯೋಜನೆಯ ಅರ್ಹ ಫಲಾನುಭವಿಗಳಿಗೆ ಮಂಜೂರಿ ಪತ್ರವನ್ನು ವಿತರಿಸಲಾಯಿತು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))