ಸರ್ಕಾರಿ ಯೋಜನೆ ಸಕಾಲದಲ್ಲಿ ತಲುಪಲಿ: ಮಾರ್ಕಾಂಡೇಯ

| Published : Oct 03 2024, 01:28 AM IST

ಸರ್ಕಾರಿ ಯೋಜನೆ ಸಕಾಲದಲ್ಲಿ ತಲುಪಲಿ: ಮಾರ್ಕಾಂಡೇಯ
Share this Article
  • FB
  • TW
  • Linkdin
  • Email

ಸಾರಾಂಶ

ಗಡಿಭಾಗದ ಶಾಲೆಗಳಿಗೆ ಮೊಟ್ಟೆಗಳನ್ನು ಕೊಂಡೊಯ್ಯುವ ಕೆಲ ಸಂದರ್ಭದಲ್ಲಿ ಮೊಟ್ಟೆಗಳು ಒಡೆದು ಹಾಳಾಗುವುದನ್ನು ಶಿಕ್ಷಕರು ಸರಿದೂಗಿಸಲು ಒದ್ದಾಡುವಂತಾಗಿದೆ.

ಕೂಡ್ಲಿಗಿ: ತಾಲೂಕು ಮಟ್ಟದಲ್ಲಿ ಇಲಾಖಾವಾರು ಇರುವ ಸರ್ಕಾರಿ ಯೋಜನೆಗಳು, ಕಾಮಗಾರಿಗಳು ವಿಳಂಬವಾಗದಂತೆ ಕಾರ್ಯಗತಗೊಳಿಸಬೇಕು ಎಂದು ತಾಪಂ ಆಡಳಿತಾಧಿಕಾರಿ ಹಾಗೂ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಮಾರ್ಕಂಡೇಯ ತಿಳಿಸಿದರು.

ಅವರು ಪಟ್ಟಣದ ತಾಪಂ ಕಚೇರಿ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪೋಷಣ್ ಯೋಜನೆ ಸಹಾಯಕ ನಿರ್ದೇಶಕ ಕೆ.ಜಿ. ಆಂಜನೇಯ ಮಾತನಾಡಿ, ವಿದ್ಯಾರ್ಥಿಗಳಿಗೆ ವಿತರಿಸುವ ಮೊಟ್ಟೆಗಳನ್ನು ಶಾಲೆಯ ಬಳಿಗೇ ವಿತರಣೆ ಮಾಡುವಂಥ ವ್ಯವಸ್ಥೆಯಾದರೆ ಒಳ್ಳೆಯದು ಎಂದು ತಾಲೂಕಿನ ಬಹುತೇಕ ಶಾಲೆಗಳ ಮುಖ್ಯಶಿಕ್ಷಕರು ನಾನಾ ಮೀಟಿಂಗ್‌ಗಳಲ್ಲಿ ಹೇಳುತ್ತಿದ್ದಾರೆ. ಗಡಿಭಾಗದ ಶಾಲೆಗಳಿಗೆ ಮೊಟ್ಟೆಗಳನ್ನು ಕೊಂಡೊಯ್ಯುವ ಕೆಲ ಸಂದರ್ಭದಲ್ಲಿ ಮೊಟ್ಟೆಗಳು ಒಡೆದು ಹಾಳಾಗುವುದನ್ನು ಶಿಕ್ಷಕರು ಸರಿದೂಗಿಸಲು ಒದ್ದಾಡುವಂತಾಗಿದೆ ಎಂದು ಸಭೆಯಲ್ಲಿ ಪ್ರಸ್ತಾಪಿಸಿದರು. ಆಗ ಆಡಳಿತಾಧಿಕಾರಿಯು ಈ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.

ಶಾಲೆ ಬಿಟ್ಟ ಮಕ್ಕಳ ಸರ್ವೆ ಕಾರ್ಯ ಎಷ್ಟಾಗಿದೆ ಎಂದು ಶಿಕ್ಷಣ ಇಲಾಖೆಗೆ ಪ್ರಶ್ನಿಸಿದಾಗ, ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಎಸ್.ಜಗದೀಶ್ ಮಾತನಾಡಿ, ಈ ಕಾರ್ಯವು ಆಯಾ ಗ್ರಾಪಂಗೆ ವಹಿಸಲಾಗಿದೆ. ಈ ಬಗ್ಗೆ ಮಾಹಿತಿ ಪಡೆಯಲಾಗುವುದು ಎಂದು ತಿಳಿಸಿದರು. ಅರಣ್ಯ ಭೂಮಿ ಸಾಗುವಳಿ ಮಾಡಿರುವ ಎಸ್ಸಿ, ಎಸ್ಟಿ ರೈತರ ಎಫ್.ಆರ್.ಎ ಅರ್ಜಿಗಳು ಎಷ್ಟು ಮತ್ತು ಯಾಕೆ ತಿರಸ್ಕೃತವಾಗಿವೆ? ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಹಮ್ಮದ್ ಬಾಷಾ ಅವರನ್ನು ಆಡಳಿತಾಧಿಕಾರಿ ಪ್ರಶ್ನಿಸಿದರು. ಕೂಡ್ಲಿಗಿ ತಾಲೂಕಲ್ಲಿ 330 ಅರ್ಜಿಗಳು ಗ್ರಾಮ ಅರಣ್ಯ ಸಮಿತಿಯಿಂದಲೇ ತಿರಸ್ಕೃತವಾಗಿವೆ ಎಂದು ತಿಳಿಸಿದರು.ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಎಇಇ ಮಲ್ಲಿಕಾರ್ಜುನ ಮಾತನಾಡಿ, ಈಗ 3 ಕೆರೆಗಳ ನಿರ್ವಹಣೆ ಕಾಮಗಾರಿ ಇದ್ದು, ಶಾಸಕರ ಗಮನಕ್ಕೆ ತಂದು ಕಾಮಗಾರಿ ಮುಗಿಸಲಾಗುವುದು. ಕೂಡ್ಲಿಗಿ ಮತ್ತು ಹಿರೇಹೆಗ್ಡಾಳ್ ಗ್ರಾಮದ ಬಿಸಿಎಂ ವಸತಿ ನಿಲಯಗಳ ಕಾಂಪೌಂಡ್ ನಿರ್ಮಾಣಕ್ಕೆ ಎಸ್ಟಿಮೇಟ್ ಕೊಡಲಾಗಿದೆ ಎಂದು ತಿಳಿಸಿದರು.

ಆಗ, ಬಿಸಿಎಂ ತಾಲೂಕು ಕಲ್ಯಾಣಾಧಿಕಾರಿಗೆ ಮೇಲಧಿಕಾರಿಗಳ ಗಮನಕ್ಕೆ ತಂದು ಬೇಗ ಕಾರ್ಯರೂಪಕ್ಕೆ ತರಬೇಕೆಂದು ಸೂಚಿಸಿದರು. ಈ ವರ್ಷ ಕಾಲ ಕಾಲಕ್ಕೆ ಉತ್ತಮ ಮಳೆಯಾಗಿದ್ದು, ಮೆಕ್ಕೆಜೋಳ ಸೇರಿ ಹಲವು ಬೆಳೆಗಳ ಇಳುವರಿ ಬಂದಿದೆ. ಕೆಲವು ಕಡೆ ಶೇಂಗಾ ಬೆಳೆಗೆ ಮಳೆ ಕೊರತೆ ಕಾಡಿದ್ದರೂ ಈಗ ಮಳೆಯಾಗಿರುವುದು ಅನುಕೂಲವಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ವಾಮದೇವ ಕೊಳ್ಳಿ ತಿಳಿಸಿದರು.

ತಾಪಂ ಇಒ ನರಸಪ್ಪ, ವಿಷಯ ನಿರ್ವಾಹಕರಾದ ವೆಂಕಟೇಶ್, ಪ್ರಕಾಶ್ ಸೇರಿ ತಾಲೂಕು ಮಟ್ಟದ ಅಧಿಕಾರಿಗಳು, ಪಿಡಿಒಗಳು ಇದ್ದರು.

ಕಾಮಗಾರಿ ಗುಣಮಟ್ಟ ಕಾಪಾಡಿ: ಕೆಕೆಆರ್‌ಡಿಬಿ ಯೋಜನೆಯಡಿ ತಾಲೂಕಿನಲ್ಲಿ 14 ಅಂಗನವಾಡಿ ಕಟ್ಟಡಗಳ ಕಾಮಗಾರಿ ಪ್ರಗತಿಯಲ್ಲಿವೆ ಎಂದು ನಿರ್ಮಿತಿ ಕೇಂದ್ರದ ಜೆಇ ಮಧುಸೂದನ್ ತಿಳಿಸಿದರು.

ಆಗ ತಾಪಂ ಆಡಳಿತಾಧಿಕಾರಿ ಮಾರ್ಕಂಡೇಯ ಪ್ರತಿಕ್ರಿಯಿಸಿ, ನಿರ್ಮಿತಿ ಕೇಂದ್ರದಿಂದ ಕೈಗೊಳ್ಳುವ ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡಬೇಕು ಎಂದು ಸೂಚಿಸಿದರು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ತಾಪಂ ಇಒ ನರಸಪ್ಪ ಅವರಿಗೆ ಸೂಚಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಮಾಲಂಬಿಗೆ, ಅಂಗನವಾಡಿ ಕಟ್ಟಡಗಳು ನಿರ್ಮಾಣವಾಗುವುದನ್ನು ನೋಡಿದ್ದೀರಾ? ಎಂದು ಕೇಳಿದರಲ್ಲದೆ, ಈ ಕುರಿತು ಪರಿಶೀಲಿಸಬೇಕು ಎಂದು ತಿಳಿಸಿದರು.