ಸರ್ಕಾರದ ಯೋಜನೆಗಳು ಫಲಾನುಭವಿಗೆ ತಲುಪಲಿ

| Published : Nov 19 2023, 01:30 AM IST

ಸಾರಾಂಶ

ಯಾವ ರಾಜಕಾರಣಿಗಳಾಗಲಿ, ಪಕ್ಷಗಳಾಗಲಿ ಕಾಮಗಾರಿಗಳಿಗೆ, ಯೋಜನೆಗಳಿಗೆ ಸ್ವಂತದ ಹಣವನ್ನು ನೀಡುವುದಿಲ್ಲ. ಬದಲಾಗಿ ಸರಕಾರದಿಂದಲೆ ಎಲ್ಲ ಸೌಕರ್ಯಗಳನ್ನು ನೀಡುತ್ತಾರೆ. ಯಾವ ಪಕ್ಷಗಳೇ ಆಡಳಿತಕ್ಕೆ ಬಂದರೂ ಜನರ ಕಷ್ಟಗಳಿಗೆ ಸ್ಪಂದಿಸುವುದೇ ಅವರ ಉದೇಶವಾಗಿರುತ್ತದೆ ಎಂದು ಕಾರ್ಮಿಕ ಸವಿವ ಸಂತೋಷ ಲಾಡ್ ಹೇಳಿದರು.

ಕನ್ನಡಪ್ರಭ ವಾರ್ತೆ ಅಳ್ನಾವರ

ಯಾವ ರಾಜಕಾರಣಿಗಳಾಗಲಿ, ಪಕ್ಷಗಳಾಗಲಿ ಕಾಮಗಾರಿಗಳಿಗೆ, ಯೋಜನೆಗಳಿಗೆ ಸ್ವಂತದ ಹಣವನ್ನು ನೀಡುವುದಿಲ್ಲ. ಬದಲಾಗಿ ಸರಕಾರದಿಂದಲೆ ಎಲ್ಲ ಸೌಕರ್ಯಗಳನ್ನು ನೀಡುತ್ತಾರೆ. ಯಾವ ಪಕ್ಷಗಳೇ ಆಡಳಿತಕ್ಕೆ ಬಂದರೂ ಜನರ ಕಷ್ಟಗಳಿಗೆ ಸ್ಪಂದಿಸುವುದೇ ಅವರ ಉದೇಶವಾಗಿರುತ್ತದೆ ಎಂದು ಕಾರ್ಮಿಕ ಸವಿವ ಸಂತೋಷ ಲಾಡ್ ಹೇಳಿದರು.

ಅಳ್ನಾವರ ತಾಲೂಕಿನ ಬೆಣಚಿ, ಕಡಬಗಟ್ಟಿ ಮತ್ತು ಅರವಟಗಿ ಗ್ರಾಮ ಪಂಚಾಯಿತಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು.

ಪ್ರತಿಯೊಂದು ಕೆಲಸಕ್ಕೂ ಸರ್ಕಾರದ ಮೇಲೆ ಅವಲಂಬಿತವಾಗುವ ಮನೊಭಾವ ಜನರಲ್ಲಿ ದೂರಾಗಬೇಕು. ಈಗಿರುವ ಆಡಳಿತ ವ್ಯವಸ್ಥೆಯಲ್ಲಿ ಅರ್ಜಿ ಕೊಟ್ಟ ಮಾತ್ರಕ್ಕೆ ಕೆಲಸಗಳಾಗುವಂತಿದ್ದರೆ ನಮ್ಮ ದೇಶ ಸಿಂಗಾಪುರ ಮಾಡಬಹುದಿತ್ತು. ಇಂತಹ ಆಡಳಿತ ವ್ಯವಸ್ಥೆಯಲ್ಲಿ ಜನರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಸಾರ್ವಜನಿಕ ಸಭೆಗಳನ್ನು ಆಯೋಜಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.

ಕೆಲವೊಂದು ಆಡಳಿತಾತ್ಮಕ ಮತ್ತು ಹಣಕಾಸಿನ ಸಂಪನ್ಮೂಲಗಳ ಕ್ರೋಢೀಕರಣ ಕಾರಣಗಳಿಂದ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿದ್ದು, ಆಧ್ಯತೆಯ ಮೇರೆಗೆ ಅವಶ್ಯಕ ಕೆಲಸಗಳಿಗೆ ಗಮನ ನೀಡಲಾಗುತ್ತಿದೆ ಎಂದು ಸಚಿವ ಲಾಡ್‌ ಹೇಳಿದರು.

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಕಾರ್ಯಕ್ರಮಕ್ಕಾಗಿ ೫೬ ಸಾವಿರ ಕೋಟಿ ವೆಚ್ಚ ಮಾಡಲಾಗುತ್ತಿದ್ದು, ಇದರಿಂದ ಪ್ರತಿಯೊಂದು ಬಡ ಕುಟುಂಬಕ್ಕೂ ಸರ್ಕಾರದ ನೆರವು ಸಿಗಲಿದೆ. ಜನರು ತಮ್ಮ ಸಮಸ್ಯೆಗಳನ್ನು ನೇರವಾಗಿ ಹೇಳುವ ಮೂಲಕ ಪರಿಹಾರ ಕಂಡುಕೊಳ್ಳಬಹುದಾಗಿದೆ. ಗ್ರಾಮೀಣ ಶಾಲೆಗಳಲ್ಲಿ ಬಾಲಕಿಯರ ಪ್ರತ್ಯೇಕ ಶೌಚಾಲಯ, ನೀರು ಮತ್ತು ಇನ್ನೀತರ ಮೂಲಭೂತ ಸೌಕರ್ಯಗಳಿಗೆ ಅನುದಾನ ಒದಗಿಸುವ ಭರವಸೆ ನೀಡಿ, ಹೊಲಗಳ ರಸ್ತೆ, ಚರಂಡಿಗಳ ನಿರ್ಮಾಣಕ್ಕೆ ನರೇಗಾ ಯೋಜನೆಯಡಿ ಕ್ರೀಯಾ ಯೋಜನೆ ತಯಾರಿಸುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದರು.

ಬೆಣಚಿ ಗ್ರಾಮ ಪಂಚಾಯತ್‌ ಸದಸ್ಯ ಸಂದೀಪ ಪಾಟೀಲ ಮಾತನಾಡಿ, ಕಬ್ಬಿಗೆ ಹೆಚ್ಚುವರಿ ದರ ಕೊಡಿಸುವದು, ಪಿಎಂ ಕಿಸಾನ್‌ ಸಮ್ಮಾನ ಯೋಜನೆಯಡಿ ಹಿಂದೆ ರಾಜ್ಯ ಸರ್ಕಾರ ನೀಡುತ್ತಿದ್ದ ಪಾಲನ್ನು ಪುನರಾರಂಭಿಸುವಂತೆ ಮನವಿ ಮಾಡಿದರು.

ಗೃಹ ಲಕ್ಷ್ಮೀ:

ತಾಲೂಕಿನಲ್ಲಿ ನಡೆದ ಕುಂದು ಕೊರತೆ ಸಭೆಯಲ್ಲಿ ಗೃಹ ಲಕ್ಷ್ಮೀ ಯೋಜನೆಯಡಿ ಹಣ ಬಾರದಿರುವ ವಿಷಯವೇ ಸಚಿವರ ಎದುರು ಪ್ರಮುಖವಾಗಿ ಚರ್ಚೆಯಾಯಿತು. ಈ ಕುರಿತು ಸಚಿವ ಲಾಡ್‌ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳಿಗೆ ಶೀಘ್ರವಾಗಿ ಕುಟುಂಬದ ಸಮೀಕ್ಷೆ ಕೈಕೊಂಡು ಫಲಾನುಭವಿಗಳಿಗೆ ಯೋಜನೆಯ ಹಣ ತಲುಪಿಸುವ ಬಗ್ಗೆ ಸೂಚಿಸಿದರು.

ಜಲ ಜೀವನ ಮೀಷನ್‌:

ಯೋಜನೆಯಡಿ ಕೈಗೊಂಡ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಕೇಳಿಬಂದ ದೂರುಗಳ ಬಗ್ಗೆ ಎರಡು ವಾರದೊಳಗಾಗಿ ಕುಲಂಕಷವಾಗಿ ಗುಣಮಟ್ಟವನ್ನು ಪರಿಶೀಲನೆ ಮಾಡಿ ವರದಿ ಸಲ್ಲಿಸುವಂತೆ ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಬೆಣಚಿ ಗ್ರಾಮದಲ್ಲಿ ನಡೆಯುತ್ತಿದೆ ಎನ್ನಲಾದ ಅಕ್ರಮ ಸಾರಾಯಿ ಮಾರಾಟವನ್ನು ತಡೆಗಟ್ಟಲು ತಿಳಿಸಿದ ಲಾಡ್‌ ಸಾರ್ವಜನಿಕರು ಸಹ ತಮ್ಮ ಜವಾಬ್ದಾರಿ ಅರಿತು ಇಂತಹ ಅಕ್ರಮ ಚಟುವಟಿಕೆಗಳ ಬಗ್ಗೆ ನಿಗಾ ವಹಿಸಿ ಮಾಹಿತಿ ನೀಡುವಂತೆ ಹೇಳಿದರು.

ಬೆಣಚಿಯಲ್ಲಿ ಅನಾಥ ಮತ್ತು ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಸಚಿವ ಲಾಡ್‌ ಆರ್ಥಿಕ ಸಹಾಯ ನೀಡುವ ವಾಗ್ದಾನ ಮಾಡಿದರು.

ತಹಸೀಲ್ದಾರ್‌ ಬಸವರಾಜ ಬೆಣ್ಣೆಶಿರೂರ, ತಾಪಂ ಇಒ ಪ್ರಶಾಂತ ತುರಕಾಣಿ, ಸಂತೋಷಕುಮಾರ ತಳಕಲ್, ಸಿಪಿಐ ಸಮೀರ ಮುಲ್ಲಾ, ಬೆಣಚಿ ಗ್ರಾಪಂ ಅಧ್ಯಕ್ಷೆ ಗಂಗವ್ವ ಮುಷ್ಟಗಿ, ಅಲ್ಲಾಭಕ್ಷ ಬಡಗಿ, ಕಡಬಗಟ್ಟಿಯಲ್ಲಿ ರಾಜಶೇಖರ ಬೇಕ್ವಾಡಕರ, ಮಹಾದೇವಿ ಹಬ್ಬಣ್ಣವರ, ದಸ್ತಗೀರ ಹುಣಸಿಕಟ್ಟಿ, ಅರವಟಗಿಯಲ್ಲಿ ಅಶೋಕ ಜೊಡಟ್ಟಿ, ಉಮೇಶ ಬೂಮಣ್ಣವರ, ಸುರೇಶಗೌಡ ಕರಿಗೌಡರ, ಶ್ರೀಕಾಂತ ಗಾಯಕವಾಡ, ಲೋಕೋಪಯೋಗಿ ಇಲಾಖೆಯ ಉತ್ತಮ ಗದಗಕರ, ನೀರಾವರಿ ಇಲಾಖೆಯ ಆರ್.ಎಸ್. ಪಾಟೀಲ, ಕಾರ್ಮಿಕ ಇಲಾಖೆಯ ಭುವನೇಶ್ವರಿ ಕೋಟಿಮಠ, ಪಿಡಿಒಗಳಾದ ನಾಗರಾಜ ಪುಡಕಲಕಟ್ಟಿ, ಷಣ್ಮುಖ ಸುಳಗೇಕರ, ಮಹಾಂತೇಶ ಕುರಾಡಿ ಸಚಿವರಿಗೆ ಮಾಹಿತಿ ನೀಡಿದರು. ಮತ್ತಿತರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.