ಸರ್ಕಾರಗಳು ಕಾರ್ಮಿಕರ ಕಷ್ಟಕ್ಕೆ ಸ್ಪಂದಿಸಲಿ

| Published : May 02 2025, 12:09 AM IST

ಸಾರಾಂಶ

ಎಐಟಿಯುಸಿ ಕಚೇರಿ ಮುಂಭಾಗ ನಡೆದ ಕಾರ್ಮಿಕರ ದಿನಾಚರಣೆಯನ್ನು ಗಂಜರ ಬಾರಿಸುವ ಮೂಲಕ ಸಾತಿ ಸುಂದರೇಶ್ ಉದ್ಘಾಟಿಸಿದರು.

ಸಾತಿ ಸುಂದರೇಶ್ ಕರೆ । ಜಿಲ್ಲಾ ಕಾರ್ಮಿಕರ ಸಾಮೂಹಿಕ ಸಂಘಟನೆಗಳ ಆಶ್ರಯದಲ್ಲಿ ಕಾರ್ಮಿಕರ ದಿನಾಚರಣೆ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಕಾರ್ಮಿಕರನ್ನು ಸಂಕಷ್ಟಕ್ಕೆ ದೂಡಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಕಾರ್ಮಿಕರು ಧ್ವನಿಯಾಗಬೇಕು ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಕರೆ ನೀಡಿದರು.

ನಗರದ ಎಐಟಿಯುಸಿ ಕಚೇರಿ ಮುಂಭಾಗ ಭಾರತ ಕಮ್ಯುನಿಸ್ಟ್ ಪಕ್ಷ ಹಾಗೂ ಜಿಲ್ಲಾ ಕಾರ್ಮಿಕರ ಸಾಮೂಹಿಕ ಸಂಘಟನೆಗಳ ಆಶ್ರಯದಲ್ಲಿ ನಡೆದ ಕಾರ್ಮಿಕರ ದಿನಾಚರಣೆಯನ್ನು ಗಂಜರ ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

1886ರಲ್ಲಿ ಅಮೇರಿಕಾದ ಚಿಕಾಗೋದಲ್ಲಿ ಕಾರ್ಮಿಕರು 8 ಗಂಟೆ ಕೆಲಸ, 8 ಗಂಟೆ ವಿಶ್ರಾಂತಿ, 8 ಗಂಟೆಗಳ ಕಾಲ ಮನೋರಂಜನೆ ಇರಬೇಕೆಂದು ಹೋರಾಟ ಆರಂಭಿಸಿದಾಗ ಏಳು ಪೊಲೀಸರು, ನಾಲ್ಕು ಮಂದಿ ನಾಗರೀಕರು ಬಲಿಯಾಗುತ್ತಾರೆ. ಕೆಲವು ಕಾರ್ಮಿಕ ಮುಖಂಡರು ಗಲ್ಲಿಗೇರುತ್ತಾರೆ. ಅಂದಿನಿಂದ ಪ್ರತಿ ವರ್ಷವೂ ಕಾರ್ಮಿಕ ದಿನಾಚರಣೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಇಂದಿನ ಕಾರ್ಮಿಕರ ಸ್ಥಿತಿಗತಿ ಕುರಿತು ಚರ್ಚಿಸಬೇಕಾಗಿದೆ. ಸರ್ಕಾರ ಮತ್ತು ಸಿರಿವಂತರು ಸೇರಿಕೊಂಡು ಕಾರ್ಮಿಕರನ್ನು ಶೋಷಣೆ ಮಾಡುತ್ತಿರುವುದರ ವಿರುದ್ಧ ಕಾರ್ಮಿಕರು ಒಗ್ಗಟ್ಟಾಗಿ ಹೋರಾಟ ಮಾಡಬೇಕಿದೆ ಎಂದು ಹೇಳಿದರು.

ಕೆಲಸಕ್ಕೆ ತಕ್ಕಂತೆ ಕಾರ್ಮಿಕರಿಗೆ ವೇತನ ಸಿಗುತ್ತಿಲ್ಲ. ರಾಜ್ಯದಲ್ಲಿ 27ಲಕ್ಷ ಕಾರ್ಮಿಕ ಕುಟುಂಬಗಳಿಗೆ ಸೂರಿಲ್ಲ. ಸರ್ಕಾರ ಜಾತಿ ಗಣತಿಯೊಂದೆ ನಡೆಸಬಾರದು. ಶಿಕ್ಷಣ ಮತ್ತು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿರುವವರ ಮಾಹಿತಿ ಪಡೆದು ವರದಿ ಸಿದ್ಧಪಡಿಸಬೇಕು.

ಶಿಕ್ಷಣ ಖಾಸಗೀಕರಣವಾಗುತ್ತಿರುವುದರಿಂದ ಕಾರ್ಮಿಕರ ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಭೂಮಿ ಮತ್ತು ವಸತಿಗಾಗಿ ಹೋರಾಟ ಶುರುವಾಗಿದೆ. ದಿನಕ್ಕೆ 8 ಗಂಟೆ ಬದಲಿಗೆ 12 ಗಂಟೆಗಳ ಕಾಲ ಕೆಲಸ ಮಾಡುವಂತೆ ಕೇಂದ್ರ ಸರ್ಕಾರ ಕಾನೂನು ಜಾರಿಗೆ ತಂದಿರುವುದರ ವಿರುದ್ಧ ನಮ್ಮ ಹೋರಾಟವಿದೆ. ಕಾರ್ಮಿಕರು ಮತ್ತು ರೈತರ ಹಿತ ಕಾಪಾಡಬೇಕಾಗಿದೆ ಎಂದು ಹೇಳಿದರು.

ಎಐಟಿಯುಸಿ ಜಿಲ್ಲಾ ಮಂಡಳಿ ಅಧ್ಯಕ್ಷ ಬಿ.ಬಸವರಾಜ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಜಗಳದಿಂದ ಕಾರ್ಮಿಕರು, ಜನಸಾಮಾನ್ಯರು ಬಡವಾಗುತ್ತಿದ್ದಾರೆ. ಕಾರ್ಮಿಕರ ಕಾಯಿದೆಗಳನ್ನು ಸರ್ಕಾರ ತಿದ್ದುಪಡಿ ಮಾಡಿದೆ. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆಯಿಲ್ಲ. ದಿನಕ್ಕೆ 12 ಗಂಟೆ ಕೆಲಸ ಎನ್ನುವುದು ಎಷ್ಟು ಸರಿ ಎನ್ನುವ ಬಗ್ಗೆ ಆಲೋಚನೆ ಮಾಡಬೇಕು. ಸೂರಿಗಾಗಿ ಸಮರ ಆರಂಭವಾಗಿದೆ ಎಂದರು.

ರೈತ ಮುಖಂಡ ಬಸ್ತಿಹಳ್ಳಿ ಜಿ.ಸುರೇಶ್‍ಬಾಬು ಮಾತನಾಡಿ, ರೈತರು, ಕಾರ್ಮಿಕರು ಒಂದಾದಾಗ ಮಾತ್ರ ದೇಶದಲ್ಲಿ ಅಧಿಕಾರ ಹಿಡಿಯಬಹುದು. ಕೇಂದ್ರ ಸರ್ಕಾರ ರೈತ ವಿರೋಧಿ ಕಾಯಿದೆಗಳನ್ನು ಜಾರಿಗೆ ತರುತ್ತಿರುವುದರ ವಿರುದ್ಧ ಹೋರಾಟ ನಿರಂತರವಾಗಿರಬೇಕು ಎಂದು ಹೇಳಿದರು.

ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ.ಸುರೇಶ್‍ಬಾಬು ಮಾತನಾಡಿ, ವಸತಿಗಾಗಿ 1,500 ಅರ್ಜಿಗಳು ಬಂದಿವೆ. 6 ಪಂಚಾಯಿತಿಗಳಲ್ಲಿ ಪಿಡಿಒಗಳಿಗೆ ಅರ್ಜಿ ಕೊಡಲಾಗಿದೆ. ಪ್ರತಿ ಹಳ್ಳಿಗಳಲ್ಲಿಯೂ ನಿವೇಶನ ರಹಿತರ ಸರ್ವೇ ನಡೆಸಿ ಪಟ್ಟಿ ಕೊಡುವಂತೆ ಸಿಎಂ ಸಿದ್ದರಾಮಯ್ಯನವರು ಜಿಲ್ಲಾ ಪಂಚಾಯಿತಿ ಸಿಇಒ ಗಳಿಗೆ ಸೂಚಿಸಿರುವುದು ನಮ್ಮ ಹೋರಾಟಕ್ಕೆ ಸಿಕ್ಕ ಜಯವಾಗಿದೆ.ರಾಜೀವ್‍ಗಾಂಧಿ ವಸತಿ ನಿಗಮಗಳಲ್ಲಿ ಅರ್ಜಿಗಳನ್ನು ಕೊಡಿಸುತ್ತಿದ್ದೇವೆ. ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಕೊಡಿಸುವುದು ನಮ್ಮ ಹೋರಾಟದ ಮುಖ್ಯ ಉದ್ದೇಶ. ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಚುನಾವಣೆಗಳಲ್ಲಿ ಕಮ್ಯುನಿಸ್ಟ್ ನ ಪ್ರಾಮಾಣಿಕ ಕಾರ್ಯಕರ್ತರನ್ನು ಕಣಕ್ಕಿಳಿಸಲಾಗುವುದು. ಅಂಗನವಾಡಿ ಕಾರ್ಯಕರ್ತೆಯರು ಚುನಾವಣೆಗೆ ಸಜ್ಜಾಗಬೇಕು. ಹಳ್ಳಿಗಳಲ್ಲಿ ಕಾರ್ಮಿಕರ ಸಂಘಟನೆಗಳ ಹೆಸರಿನಲ್ಲಿ ನಿವೇಶನ ಮನೆ ಕೊಡಿಸುವುದಾಗಿ ಯಾರಾದರೂ ಹಣ ವಸೂಲಿಗೆ ಇಳಿದರೆ ಪೊಲೀಸರಿಗೆ ದೂರು ಕೊಡಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಟಿ.ಆರ್.ಉಮಾಪತಿ, ಜಿಲ್ಲಾ ಗೌರವಾಧ್ಯಕ್ಷ ಸಿ.ವೈ.ಶಿವರುದ್ರಪ್ಪ, ಸಿಪಿಐ ಜಿಲ್ಲಾ ಸಹ ಕಾರ್ಯದರ್ಶಿ ದೊಡ್ಡ ಉಳ್ಳಾರ್ತಿ ಕರಿಯಣ್ಣ, ಜಿಲ್ಲಾ ಸಹ ಕಾರ್ಯದರ್ಶಿ ಬಿ.ಎಚ್.

ಹನುಮಂತಪ್ಪ, ಭಾಗ್ಯಮ್ಮ, ಜಾಫರ್, ಪರ್ವಿನ್, ಜಯದೇವಮೂರ್ತಿ, ಕುಮಾರಣ್ಣ, ರೈತ ಮುಖಂಡ ಧನಂಜಯ ಹಂಪಯ್ಯನಮಾಳಿಗೆ, ಸತ್ಯಕೀರ್ತಿ ಸೇರಿ ನೂರಾರು ಕಮ್ಯುನಿಸ್ಟ್ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.