ಅರಣ್ಯ ಇಲಾಖೆ ಸರ್ವೆಗೆ ಗ್ರಾಮಸ್ಥರಿಂದ ತೀವ್ರ ವಿರೋಧ

| Published : May 02 2025, 12:09 AM IST

ಸಾರಾಂಶ

ನರಸಿಂಹರಾಜಪುರ, ತಾಲೂಕಿನ ಬಾಳೆ ಗ್ರಾಮ ಪಂಚಾಯ್ತಿಯ ಅಳೇಹಳ್ಳಿ ಗ್ರಾಮಕ್ಕೆ ಗುರುವಾರ ಸರ್ವೆ ಮಾಡಲು ಬಂದ ಅರಣ್ಯ ಇಲಾಖೆ ಸರ್ವೇ ತಂಡದವರು ಗ್ರಾಮಸ್ಥರಿಂದ ತೀವ್ರ ವಿರೋಧ ಎದುರಿಸಬೇಕಾಯಿತು.

- ಮಾಹಿತಿ ನೀಡಿಲ್ಲವೆಂದು ಗ್ರಾಮಸ್ಥರ ಆಕ್ರೋಶ । ಅಳೇಹಳ್ಳಿ ಗ್ರಾಮದಲ್ಲಿ ಗಡಿ ಗುರುತು ಮಾಡಲು ಬಂದ ಅರಣ್ಯ ಇಲಾಖೆ ಸರ್ವೇ ತಂಡ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ತಾಲೂಕಿನ ಬಾಳೆ ಗ್ರಾಮ ಪಂಚಾಯ್ತಿಯ ಅಳೇಹಳ್ಳಿ ಗ್ರಾಮಕ್ಕೆ ಗುರುವಾರ ಸರ್ವೆ ಮಾಡಲು ಬಂದ ಅರಣ್ಯ ಇಲಾಖೆ ಸರ್ವೇ ತಂಡದವರು ಗ್ರಾಮಸ್ಥರಿಂದ ತೀವ್ರ ವಿರೋಧ ಎದುರಿಸಬೇಕಾಯಿತು.

ಬೆಳಿಗ್ಗೆ 10 ಗಂಟೆ ಸುಮಾರಿಗೆ ಅಳೇಹಳ್ಳಿ ಗ್ರಾಮಕ್ಕೆ ಚಿಕ್ಕಮಗಳೂರು ಅರಣ್ಯ ಇಲಾಖೆ ಸರ್ವೆ ತಂಡದವರು ಸರ್ವೆ ಪ್ರಾರಂಭಿಸಲು ಸಿದ್ಧತೆ ನಡೆಸಿದರು. ಈ ಸುದ್ದಿ ಹರಡುತ್ತಿದ್ದಂತೆ ಮಲೆನಾಡು ರೈತ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಎಂ.ಎನ್. ನಾಗೇಶ್, ಅಳೇಹಳ್ಳಿ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ರವೀಂದ್ರ, ಗ್ರಾಮದ ಮುಖಂಡರಾದ ರತನ್ ಗೌಡ, ಶ್ರೀಕಾಂತ್, ರೇವಣ್ಣ, ಕಟ್ಟೇಗೌಡ ಸೇರಿದಂತೆ ನೂರಾರು ರೈತರು ಆಗಮಿಸಿದ್ದರು.

ಅರಣ್ಯ ಇಲಾಖೆಯಿಂದ ಸರ್ವೆ ಮಾಡುವಾಗ ಗ್ರಾಮ ಪಂಚಾಯಿತಿ, ಗ್ರಾಮ ಅರಣ್ಯ ಸಮಿತಿ ಹಾಗೂ ಸ್ಥಳೀಯ ರೈತರಿಗೆ ಯಾಕೆ ತಿಳಿಸಲಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಡಿಎಫ್.ಒ, ಆರ್.ಎಫ್.ಓ ಹಾಗೂ ಫಾರೆಸ್ಟ್ ಸೆಟ್ಲಮೆಂಟ್ ಆಫೀಸರ್ ಆಗಮಿಸಬೇಕು. ಅಲ್ಲಿವರೆಗೆ ಯಾವುದೇ ಕಾರಣಕ್ಕೂ ಸರ್ವೆ ಮಾಡಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಸರ್ವೆ ತಂಡದವರಿಗೂ, ಗ್ರಾಮಸ್ಥರಿಗೂ ತೀವ್ರ ವಾಗ್ವಾದ ಉಂಟಾಯಿತು.

ಕೆಲವು ಸಮಯದ ನಂತರ ಚಿಕ್ಕಅಗ್ರಹಾರ ವಲಯ ಅರಣ್ಯಾಧಿಕಾರಿ ಆದರ್ಶ ಆಗಮಿಸಿ ರೈತರೊಂದಿಗೆ ಚರ್ಚೆ ನಡೆಸಿದರು. ಸೆಕ್ಷನ್-4 ರ ಗಡಿ ಗುರುತು ಮಾಡಲಾಗುತ್ತದೆ ಎಂದು ವಿವರಣೆ ನೀಡಿದರು. ಆದರೆ,ರೈತರಿಗೆ ಸಮಾಧಾನವಾಗದೆ ಇರುವುದರಿಂದ ಸರ್ವೆ ಕಾರ್ಯ ಮಾಡಲು ಬಿಡುವುದಿಲ್ಲ ಎಂದರು. ನಂತರ ಶಾಸಕ ಟಿ.ಡಿ. ರಾಜೇಗೌಡ ದೂರವಾಣಿಯಲ್ಲಿ ಗ್ರಾಮಸ್ಥರೊಂದಿಗೆ ಮಾತನಾಡಿ, ಯಾವುದೇ ಕಾರಣಕ್ಕೂ ತಾಲೂಕಿನಲ್ಲಿ ಸ್ಥಳೀಯರ ಗಮನಕ್ಕೆ ತರದೆ ಸರ್ವೆ ಮಾಡ ಬಾರದು ಎಂದು ಅರಣ್ಯ ಇಲಾಖೆಗೆ ಸೂಚನೆ ನೀಡಿದ್ದೇನೆ. ಫಾರೆಸ್ಟ್ ಸೆಂಟ್ಲಮೆಂಟ್ ಆಫೀಸರ್ ಆಗಮಿಸಿ ತಹಸೀಲ್ದಾರ್, ಡಿ.ಎಫ್.ಓ ರೈತರ ಸಭೆ ಕರೆದು ಚರ್ಚೆ ನಡೆಸಿದ ನಂತರ ಸರ್ವೆ ಕಾರ್ಯ ಮಾಡಬೇಕು ಎಂದು ಸೂಚಿಸಿದ್ದೇನೆ ಎಂದರು. ಈ ಸಂದರ್ಭದಲ್ಲಿ ಉಪ ವಲಯ ಅರಣ್ಯಾಧಿಕಾರಿ ನಂದೀಶ, ರಂಗನಾಥ ಇದ್ದರು.

-- ಬಾಕ್ಸ್ --

2018 ರಲ್ಲಿ ಅರಣ್ಯ ಕಾಯ್ದೆ ಪ್ರಕಾರ ಸೆಕ್ಷನ್ -4 ಡಿಕ್ಲೇರ್ ಆಗಿದ್ದ ಜಮೀನಿನ ಬೌಂಡರಿ ಗುರುತು ಮಾಡಲು ಸರ್ವೆ ಕಾರ್ಯ ಮಾಡುತ್ತಿದ್ದೇವೆ. ರೈತರ ಜಮೀನಿನ ಸರ್ವೆ ಕಾರ್ಯ ಅಲ್ಲ. ಈ ಬೌಂಡರಿ ಒಳಗೆ ರೈತರ ಜಮೀನುಗಳಿದ್ದರೆ ಅದನ್ನು ಫಾರೆಸ್ಟ್ ಸೆಟ್ಲಮೆಂಟ್ ಆಫೀಸರ್ ಗೆ ಅರ್ಜಿ ಸಲ್ಲಿಸಬಹುದು ಎಂದು ಸುದ್ದಿಗಾರರಿಗೆ ಮಾಹಿತಿ ನೀಡಿದರು.

- ಆದರ್ಶ

ವಲಯ ಅರಣ್ಯಾಧಿಕಾರಿ, ಚಿಕ್ಕಅಗ್ರಹಾರ

-- ಬಾಕ್ಸ್--

ಗ್ರಾಮಸ್ಥರಿಗೆ , ಗ್ರಾಮ ಪಂಚಾಯಿತಿಗೆ ಹಾಗೂ ಗ್ರಾಮ ಅರಣ್ಯ ಸಮಿತಿ ಗಮನಕ್ಕೆ ತರದೆ ಸರ್ವೆ ಕಾರ್ಯ ಮಾಡಲು ಬಿಡುವುದಿಲ್ಲ. ಈಗಾಗಲೇ ಒತ್ತುನರಿ ಜಮೀನನ್ನು ಬಿಡಬೇಕು ಎಂದು ಪಾರೆಸ್ಟ್ ಸೆಟಲ್ ಮೆಂಟ್ ಆಪೀಸರ್ ಗೆ ಅರ್ಜಿ ಸಲ್ಲಿಸಲಾಗಿದೆ. ಅವರು ಬಂದು ವೀಕ್ಷಣೆ ಮಾಡಬೇಕಾಗಿದೆ. ಅಲ್ಲದೆ ರೈತರ ಜಮೀನು, ರಸ್ತೆ, ಶಾಲೆ, ಸರ್ಕಾರಿ ಕಟ್ಟಡ ಬಿಟ್ಟು ಸರ್ವೆ ಕಾರ್ಯ ಮಾಡಬೇಕು. ಅಲ್ಲಿಯವರೆಗೆ ಸರ್ವೆ ಕಾರ್ಯ ಮಾಡಲು ಬಿಡುವುದಿಲ್ಲ ಎಂದರು.

- ಎಂ.ಎನ್.ನಾಗೇಶ್

ಅಧ್ಯಕ್ಷ, ಮಲೆನಾಡು ರೈತ ಹಿತ ರಕ್ಷಣಾ ಸಮಿತಿ, ಶೃಂಗೇರಿ