ಸಾರಾಂಶ
ತಿಪಟೂರು: ಗ್ರಾಮ ಪಂಚಾಯಿತಿಗಳು ಮಕ್ಕಳ ಸ್ನೇಹಿ ಗ್ರಂಥಾಲಯಗಳಾಗಬೇಕು ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ತಿಳಿಸಿದರು.
ತಿಪಟೂರು: ಗ್ರಾಮ ಪಂಚಾಯಿತಿಗಳು ಮಕ್ಕಳ ಸ್ನೇಹಿ ಗ್ರಂಥಾಲಯಗಳಾಗಬೇಕು ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ತಿಳಿಸಿದರು.
ನಗರದ ತಾಪಂ ಸಭಾಂಗಣದಲ್ಲಿ ತಾಲೂಕಿನ 26 ಗ್ರಾಪಂನ ಗ್ರಂಥಾಪಾಲಕರಿಗೆ ಎರಡು ದಿನಗಳ ಮಕ್ಕಳ ಸ್ನೇಹಿ ಗ್ರಂಥಾಲಯದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಂಥಾಲಯಗಳಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಜವಾಬ್ದಾರಿ ನಮ್ಮದು. ಗ್ರಂಥಾಲಯದ ಮೂಲಕ ಸಾಕ್ಷರತೆಯ ಅರಿವು ಮೂಡಿಸುವ ಕೆಲಸ ನಿಮ್ಮದಾಗಿದ್ದು, ಪ್ರತಿ ಶನಿವಾರ ಸ್ಥಳೀಯ ಶಾಲೆ ಮಕ್ಕಳು ಕಡ್ಡಾಯವಾಗಿ ಗ್ರಂಥಾಲಯಕ್ಕೆ ಭೇಟಿ ನೀಡುವಂತೆ ತಿಳಿಸಲಾಗಿದೆ ಎಂದು ಹೇಳಿದರು.ಗ್ರಂಥಾಲಯ ಮೇಲ್ವಿಚಾರಕರ ತಾಲೂಕು ಘಟಕದ ಅಧ್ಯಕ್ಷ ಶಂಕರಪ್ಪ ಬಳ್ಳೆಕಟ್ಟೆ ಮಾತನಾಡಿ, ರಾಷ್ಟ್ರಮಟ್ಟದಲ್ಲಿ ಕರ್ನಾಟಕದ ಗ್ರಾಮೀಣ ಗ್ರಂಥಾಲಯಗಳು ಉತ್ತಮ ಸೇವೆ ಸಲ್ಲಿಸಿ ಪ್ರಶಸ್ತಿ ಪುರಸ್ಕೃತವಾಗಿರುವುದು ಹೆಮ್ಮೆಯ ಸಂಗತಿ. ಅದನ್ನು ಮುಂದುವರಿಸುವ ನಿಟ್ಟಿನಲ್ಲಿ ನಾವು ಇನ್ನೂ ಹೆಚ್ಚಿನ ಶ್ರಮ ಹಾಗೂ ಕರ್ತವ್ಯ ನಿರ್ವಹಿಸಬೇಕಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿ ಮೋಹನ್ ಕುಮಾರ್ ೨೬ ಗ್ರಾಮ ಪಂಚಾಯಿತಿಯ ಗ್ರಂಥಾಪಾಲಕರಿಗೆ ತರಬೇತಿ ನೀಡಿದರು. ಶಿಕ್ಷಣ ಫೌಂಡೇಷನ್ ವಲಯ ಸಂಯೋಜಕ ಸಂತೋಷ್, ಜಿಲ್ಲಾ ಸಂಯೋಜಕ ಹರೀಶ್, ತಾಪಂ ಅಧಿಕಾರಿ ಹರೀಶ್, ಎನ್.ಆರ್.ಎಂ.ಎಲ್ ಸಂಯೋಜಕಿ ಚಂದ್ರಕಲಾ, ಮೈತ್ರಾ ಸೇರಿ ತಾಲೂಕಿನ ಗ್ರಂಥಾಲಯದ ಮೇಲ್ವಿಚಾರಕರು ಹಾಜರಿದ್ದರು.