ಸಾರಾಂಶ
ಕನ್ನಡಪ್ರಭ ವಾರ್ತೆ ಕನಕಪುರ
ನಮ್ಮ ಪಕ್ಷ ಎಲ್ಲಾ ಜಾತಿ, ಜನಾಂಗದವರನ್ನು ಒಟ್ಟಿಗೆ ಕರೆದುಕೊಂಡು ಹೋಗುತ್ತಿದ್ದು ಎಲ್ಲಾ ಜನಾಂಗಕ್ಕೂ ಸಾಮಾಜಿಕ ನ್ಯಾಯ ಒದಗಿಸುವ ದೃಷ್ಟಿಯಿಂದ ಇಂದು ಸರ್ಕಾರದ ವಿವಿಧ ಇಲಾಖೆಗಳಿಗೆ ನಾಮ ನಿರ್ದೇಶನ ಮಾಡಿ ಜವಾಬ್ದಾರಿ ನೀಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.ನಗರದ ಹೊರವಲಯದಲ್ಲಿ ಆಯೋಜಿಸಿದ್ದ ತಾಲೂಕು ಕಾಂಗ್ರೆಸ್ ಪಕ್ಷದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಕ್ಷ ಎಲ್ಲರಿಗೂ ಅಧಿಕಾರ ಕೊಡುತ್ತಿದ್ದು ಹಿಂದೆ ಟಿಎಪಿಸಿಎಂಎಸ್ ಚುನಾವಣೆಗೆ ನಡೆಯುತ್ತಿತ್ತು. ಆಗ ನಾನು ಹಾಗೂ ದಿವಂಗತ ಕಂಠಿಯವರು ಸ್ಪರ್ಧೆ ಮಾಡಿದ್ದೆವು. ಸಾಕಷ್ಟು ಗಲಾಟೆ ಆಗ್ತಿತ್ತು. ಹೋರಾಟ ಮಾಡಿ ಇಬ್ಬರು ಗೆದ್ದಿದ್ದೆವು. ಹಂತಹಂತವಾಗಿ ಒಂದೊಂದೆ ಮೆಟ್ಟಿಲು ಏರುತ್ತಾ ಕೆಪಿಸಿಸಿ ಅಧ್ಯಕ್ಷನಾದೆ, ಮಂತ್ರಯಾದೆ, ಇದೀಗ ಉಪಮುಖ್ಯಮಂತ್ರಿ ಆಗಿದ್ದೇನೆ. ಯಾರು ಏನು ಬೇಕಾದರೂ ಆಗಬಹುದು. ಪಕ್ಷ ಎಲ್ಲರಿಗೂ ಸ್ಥಾನಮಾನ, ಅಧಿಕಾರ ಕೊಟ್ಟಿದೆ. ಸುರೇಶ್‌ರನ್ನು ಬಗರ್ ಹುಕುಂ ಸಾಗುವಳಿಯ ಅಧ್ಯಕ್ಷನನ್ನಾಗಿ ಮಾಡಿದ್ದೇವೆ. ಜನರ ಸಮಸ್ಯೆ ಬಗೆಹರಿಸಲು ನೇಮಿಸಿದ್ದೇವೆ. ಹಾಗೆಯೇ ನಿಮಗೆ ಕೊಟ್ಟಿರುವ ಜವಾಬ್ದಾರಿಯನ್ನು ನೀವು ಪ್ರಾಮಾಣಿಕವಾಗಿ, ನಿಷ್ಠೆಯಿಂದ ನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು. ಯೋಗೇಶ್ವರ್ ಚನ್ನಪಟ್ಟಣದಲ್ಲಿ ಗೆದ್ದಿದ್ದಾರೆ. ರಾಜಕಾರಣದಲ್ಲಿ ಯಾರು ಮಿತ್ರರಲ್ಲ, ಯಾರೂ ಶತ್ರುಗಳಲ್ಲ, ಒಟ್ಟಾಗಿ ಕೆಲಸ ಮಾಡಿಕೊಂಡು ಹೋಗಬೇಕು. ಜಿಲ್ಲೆಯ ಎಲ್ಲಾ ಶಾಸಕರು ಕನಿಷ್ಠ 100 ನಿವೇಶನಗಳನ್ನು ಬಡವರಿಗೆ ಹಂಚುವ ಮೂಲಕ ಅಭಿವೃದ್ಧಿ ಕೆಲಸ ಮಾಡಿ ಕೇಂದ್ರ ಮಂತ್ರಿಗಳಾದ ಕುಮಾರಸ್ವಾಮಿಗೆ ತೋರಿಸಿ ಜಿಲ್ಲೆಯಲ್ಲಿ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕು ಎಂದು ಹೇಳಿದರು.
ಈಗ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಮಾಡ್ತಿದ್ದೀವಿ. ಇದಕ್ಕೆ ಅನುಮತಿ ಕೊಡದಂತೆ ಕುಮಾರಸ್ವಾಮಿ ಅಡ್ಡಗಾಲು ಹಾಕ್ತಿದ್ದಾರೆ. ಕೇಂದ್ರ ಸರ್ಕಾರ ಇದಕ್ಕೆ ಅನುಮತಿ ನೀಡದಂತೆ ಒತ್ತಡ ಹಾಕ್ತಿದ್ದಾರೆ. ಆದರೆ ಯಾರು ಏನೇ ಒತ್ತಡ ಹೇರಿದರೂ ನಾನು ಬೆಂಗಳೂರು ದಕ್ಷಿಣ ಮಾಡೇ ಮಾಡ್ತೀನಿ. ನಾವೆಲ್ಲ ಬೆಂಗಳೂರು ಜಿಲ್ಲೆಯವರು. ರಾಜ್ಯಕ್ಕೆ ಮಾದರಿ ಜಿಲ್ಲೆ ಮಾಡುವ ನನ್ನ ಕನಸನ್ನು ನನಸು ಮಾಡುತ್ತೇನೆ. ಸಿಎಸ್ಆರ್ ಫಂಡ್‌ನಲ್ಲಿ ಪಬ್ಲಿಕ್ ಶಾಲೆ ಆರಂಭ ಮಾಡುತ್ತಿದ್ದೇವೆ ಎಂದು ಹೇಳಿದರು. ಎಲ್ಲಾ ಕ್ಷೇತ್ರಗಳಿಗೂ ನೀರಾವರಿ ಯೋಜನೆಗಳನ್ನು ತಂದು ಎಲ್ಲಾ ಕೆರೆಗಳನ್ನು ತುಂಬಿಸಿ ಜನರಿಗೆ ಉತ್ತಮ ಬದುಕು ಕಲ್ಪಿಸಿಕೊಡುವುದು ನಮ್ಮ ಉದ್ದೇಶ ಮತ್ತು ಗುರಿ. ನಾವು ಇಷ್ಟೆಲ್ಲಾ ಅಭಿವೃದ್ಧಿ ಕೆಲಸ ಮಾಡಿದರೂ ಡಿ.ಕೆ.ಸುರೇಶ್ ಯಾಕೆ ಸೋತರು ಎಂಬುದು ಯೋಚಿಸಬೇಕಾಗಿದೆ. ಇದಕ್ಕೆ ಸ್ಥಳೀಯ ಮುಖಂಡರಲ್ಲಿ ಒಗ್ಗಟ್ಟು ಇಲ್ಲದಿರೋದು ಒಂದು ಕಾರಣವಾಗಿರಬಹುದು ಎಂದು ಅಸಮಾಧಾನ ಹೊರ ಹಾಕಿದರು.ಈ ಹಿಂದೆ ಯೋಗೇಶ್ವರ್ ಹಾಗೂ ನಾನು ಹಿಂದೆ ಹೊಡೆದಾಡೋದೊಂದು ಬಾಕಿಯಿತ್ತು. ಈಗ ಅಭಿವೃದ್ಧಿಗಾಗಿ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ನಾನು ಅದಕ್ಕಾಗಿ ಚನ್ನಪಟ್ಟಣಕ್ಕೆ ಹೋಗಿ ಕೆಲಸ ಮಾಡಿ ಗೆಲ್ಲಿಸಿದೆ. ಯಾವುದೇ ಷರತ್ತು ಇಲ್ಲದೇ ನನ್ನ ಮನೆ ಬಳಿ ಬಂದು ಯೋಗೇಶ್ವರ್ ಕಾಂಗ್ರೆಸ್ ಸೇರಿದರು. ಕೊನೆತನಕ ಕಾಂಗ್ರೆಸ್‌ನಲ್ಲೇ ಇರ್ತಿನಿ ಅಂತ ಯೋಗೇಶ್ವರ್ ಪ್ರತಿಜ್ಞೆ ಮಾಡಿದ್ದಾರೆ. ಅದು ಭಯದಿಂದಲೂ, ಪ್ರೀತಿಯಿಂದಲೂ ನಮ್ಮ ಜೊತೆ ಬಂದಿದ್ದಾರೆ. ನಮ್ಮ ಹಸ್ತವೇ ಗ್ಯಾರಂಟಿ, ಭವಿಷ್ಯ ಇರೋದೇ ಕಾಂಗ್ರೆಸ್ ಪಕ್ಷದಲ್ಲಿ. ಹಾಗಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ಮುಂದೆ ಬೆಂಗಳೂರು ದಕ್ಷಿಣ, ರಾಜರಾಜೇಶ್ವರಿ ಎರಡೂ ಗೆಲ್ಲಲಿದ್ದೇವೆ. ನೂತನ ಪದಾಧಿಕಾರಿಗಳು ತಮಗೆ ಕೊಟ್ಟ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಶಾಸಕರಾದ ಯೋಗೇಶ್ವರ್, ಬಾಲಕೃಷ್ಣ, ಇಕ್ಬಾಲ್ ಹುಸೇನ್, ಕುಣಿಗಲ್ ರಂಗನಾಥ್, ಆನೇಕಲ್ ಶಿವಣ್ಣ, ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ಎಸ್.ರವಿ, ಸುಧಾಮದಾಸ್, ರಾಮೋಜಿಗೌಡ, ಮಾಜಿ ಸಂಸದ ಡಿ ಕೆ ಸುರೇಶ್, ಮಾಜಿ ಶಾಸಕರಾದ ಅಶ್ವಥ್, ರಾಜು ಸಿ.ಎಂ. ಲಿಂಗಪ್ಪ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಆರ್.ಕೃಷ್ಣಮೂರ್ತಿ, ನಗರಸಭಾ ಅಧ್ಯಕ್ಷೆ ಲಕ್ಷಿದೇವಮ್ಮ, ಮುಖಂಡರಾದ ವಿಜಯ್ ದೇವ್ ಮತ್ತಿತರರು ಉಪಸ್ಥಿತರಿದ್ದರು.