ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರ ಬಗ್ಗೆ ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಅವರ ಟೀಕೆಗೆ ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ತೀವ್ರ ಖಂಡನೆ ವ್ಯಕ್ತಪಡಿಸಿದೆ.ಮಹಾಸಭಾದ ಜಿಲ್ಲಾಧ್ಯಕ್ಷ ಸಂದೀಪ್ ಕುಮಾರ್ ಮಂಜ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪೇಜಾವರ ಶ್ರೀಗಳ ವಿರುದ್ಧ ನಾಲಿಗೆ ಹರಿಬಿಡಲು ಬಿ.ಕೆ.ಹರಿಪ್ರಸಾದ್ ಅವರಿಗೆ ಎಳ್ಳಷ್ಟು ಯೋಗ್ಯತೆ ಇಲ್ಲ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಪೇಜಾವರ ಶ್ರೀಯವರ ವಿದ್ವತ್ತು, ಧರ್ಮನಿಷ್ಠೆ, ಸಮಾಜದ ಬಗ್ಗೆ ಇರುವ ಕಳಕಳಿ, ಗೋಸೇವೆ ಅನನ್ಯವಾದುದು. ಅವರು ಯಾವತ್ತೂ ಒಂದು ಜಾತಿಯ ಪರ ನಿಲ್ಲದೆ, ಸಮಸ್ತ ಹಿಂದೂ ಸಮಾಜದ ಮತ್ತು ನಾಡಿನ ಒಳಿತಿಗಾಗಿ ಧ್ವನಿ ಎತ್ತಿರುವವರು. ಜಾತಿ ಭೇದ ಇಲ್ಲದೇ ನೂರಾರು ಬಡವರಿಗೆ ಮನೆ ಕಟ್ಟಿಸಿ ಕೊಟ್ಟಿದ್ದಾರೆ. ಸಮಾಜಮುಖಿ ಕೆಲಸಗಳು, ಕಾಂಗ್ರೆಸ್‌ನಲ್ಲಿ ಮೂಲೆಗುಂಪಾಗಿರುವ ಹರಿಪ್ರಸಾದ್ ಅಂಥವರಿಗೆ ಹೇಗೆ ತಿಳಿಯಬೇಕು? ಎಂದವರು ಪ್ರಶ್ನಿಸಿದರು.ಉಡುಪಿ ಯತಿಗಳು ಯಾವ ರಾಜಕೀಯ ಪಕ್ಷದ ಪರವಾಗಿರದೆ, ಯಾರ ಪರವಾಗಿಯೂ ರಾಜಕೀಯ ಲಾಬಿ ಮಾಡಿದವರಲ್ಲ, ರಸ್ತೆಗಿಳಿದು ಹೋರಾಟ ಮಾಡಿದವರಲ್ಲ. ಇಡೀ ಹಿಂದೂ, ಸನಾತನ ಧರ್ಮಕ್ಕೆ ಅವರು ಮಾರ್ಗದರ್ಶನ ಮಾಡುತ್ತಿದ್ದಾರೆ. ಅವರ ವ್ಯಕ್ತಿತ್ವಕ್ಕೆ ಗಣ್ಯಾತೀಗಣ್ಯರು ಕೂಡ ಕಾಲಿಗೆ ಬಿದ್ದು ನಮಸ್ಕಾರ ಮಾಡುತ್ತಾರೆ. ಅಂತಹ ಯತಿಗಳನ್ನು ಕಾವಿ ಕಳಚಿಟ್ಟು ಬನ್ನಿ ಎಂದು ಟೀಕಿಸುವ ಯೋಗ್ಯತೆ ಬಿ.ಕೆ. ಹರಿಪ್ರಸಾದ್‌ರಿಗೆ ಇಲ್ಲ. ಪ್ರಜಾಪ್ರಭುತ್ವದಲ್ಲಿ ಮಾತನಾಡುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಆದರೆ ಅವಹೇಳನ ಮಾಡುವ ಅಧಿಕಾರ ಇಲ್ಲ, ಆದ್ದರಿಂದ ಹರಿಪ್ರಸಾದ್ ಅವರ ಅವಹೇಳನಕಾರಿ ಮಾತು ಅಕ್ಷಮ್ಯವಾಗಿದೆ. ಆದರೂ ಅವರು ಇಡೀ ನಾಡಿನ ಜನತೆಯ ಮುಂದೆ ಬೇಷರತ್ ಕ್ಷಮೆ ಕೇಳಬೇಕು, ಇಲ್ಲದಿದ್ದಲ್ಲಿ ನಾಡಿನಾದ್ಯಂತ ಹೋರಾಟ ನಡೆಸಬೇಕಾಗುತ್ತದೆ ಎಂದವರು ಎಚ್ಚರಿಕೆ ನೀಡಿದರು.ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ್ ರಾವ್ ಕುಂಭಾಶಿ, ಉಪಾದ್ಯಕ್ಷ ಶ್ರೀನಿವಾಸ ಬಲ್ಲಾಳ್ ಕರಂಬಳ್ಳಿ, ಜಿಲ್ಲಾ ಸಂಚಾಲಕ ಶ್ರೀಕಾಂತ್ ಉಪಾದ್ಯ, ಜೊತೆ ಕಾರ್ಯದರ್ಶಿ ನಾಗರಾಜ ಉಪಾಧ್ಯ, ಪ್ರಮುಖರಾದ ಮಂಜುನಾಥ ಉಪಾಧ್ಯಾಯ, ರಾಮದಾಸ ಉಡುಪ ಉಪಸ್ಥಿತರಿದ್ದರು.