ಕಾಂಗ್ರೆಸ್ ಸೇರ್ಪಡೆ ಬಗ್ಗೆ ಹೆಬ್ಬಾರ್‌ ನಿಲುವು ಸ್ಪಷ್ಟಪಡಿಸಲಿ: ರೂಪಾಲಿ

| Published : Apr 03 2024, 01:35 AM IST

ಕಾಂಗ್ರೆಸ್ ಸೇರ್ಪಡೆ ಬಗ್ಗೆ ಹೆಬ್ಬಾರ್‌ ನಿಲುವು ಸ್ಪಷ್ಟಪಡಿಸಲಿ: ರೂಪಾಲಿ
Share this Article
  • FB
  • TW
  • Linkdin
  • Email

ಸಾರಾಂಶ

ಶಿವರಾಮ ಹೆಬ್ಬಾರ ಅವರನ್ನು ಬಿಜೆಪಿಗೆ ಕರೆತಂದು ಸಚಿವ ಸ್ಥಾನ, ಗೌರವ, ಸೂಕ್ತ ಸ್ಥಾನವನ್ನು ನೀಡಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ತಿಳಿಸಿದರು.

ಶಿರಸಿ: ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್‌ ಎಲ್ಲಿಯೂ ಕಾಂಗ್ರೆಸ್‌ ಸೇರ್ಪಡೆ ಬಗ್ಗೆ ಹೇಳಿಲ್ಲ. ಆದರೆ ಆ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ ಹೆಬ್ಬಾರ್‌ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಆಗ್ರಹಿಸಿದರು.

ನಗರದಲ್ಲಿ ಮಾಧ್ಯಮದವರ ಜತೆ ಮಾತನಾಡಿ, ಶಿವರಾಮ ಹೆಬ್ಬಾರ ಅವರನ್ನು ಬಿಜೆಪಿಗೆ ಕರೆತಂದು ಸಚಿವ ಸ್ಥಾನ, ಗೌರವ, ಸೂಕ್ತ ಸ್ಥಾನವನ್ನು ನೀಡಿದೆ. ಇಷ್ಟೊಂದು ಗೌರವ ನೀಡಿದರೂ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರೆ ಪಕ್ಷಕ್ಕೆ ಹಾಗೂ ಕಾರ್ಯಕರ್ತರಿಗೆ ಮೋಸ ಮಾಡಿದಂತೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಥಳೀಯ ಕಾರ್ಯಕರ್ತರು ಮೋಸ ಮಾಡಿದ್ದಾರೆ. ಆ ಕಾರಣದಿಂದ ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಚುನಾವಣೆಯಲ್ಲಿ ನನಗೂ ಸ್ಥಳೀಯ ಕಾರ್ಯಕರ್ತರಿಂದ ನೋವಾಗಿದೆ. ಅದನ್ನು ನಾನು ಎಲ್ಲಿಯೂ ಹೇಳಿಲ್ಲ. ಪಕ್ಷದ ಆಂತರಿಕ ವಿಚಾರವನ್ನು ಪಕ್ಷದ ವೇದಿಕೆಯಲ್ಲಿ ಹೇಳಬೇಕು. ಹೆಬ್ಬಾರ್ ಅವರು ರಾಜ್ಯ ಮತ್ತು ರಾಷ್ಟ್ರೀಯ ವರಿಷ್ಠರ ಗಮನಕ್ಕೆ ತರಬೇಕು. ನರೇಂದ್ರ ಮೋದಿ ಮೂರನೆಯ ಬಾರಿ ಪ್ರಧಾನಿಯಾಗಲು ನಾವೆಲ್ಲರೂ ಅಳಿಲುಸೇವೆ ಮಾಡಬೇಕು. ಉತ್ತರಕನ್ನಡ ಲೋಕಸಭಾ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಬಹುಮತದ ಅಂತರದಿಂದ ಗೆಲ್ಲಿಸಿ, ಕೇಂದ್ರಕ್ಕೆ ನಮ್ಮದೇ ಆದ ಕೊಡುಗೆ ನೀಡಬೇಕು ಎಂದರು.

ಹಿಂದಿನ ಬಿಜೆಪಿ ಸರ್ಕಾರ ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಬಜೆಟ್‌ನಲ್ಲಿ ಹಣ ಮಂಜೂರಿ ಮಾಡಿತ್ತು. ಇದೇ ಕಾಂಗ್ರೆಸ್ ಸರ್ಕಾರ ರದ್ದುಗೊಳಿಸಿದೆ. ಕಾಂಗ್ರೆಸ್ ಅಭ್ಯರ್ಥಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬಗ್ಗೆ ಮಾತನಾಡುತ್ತಾರೆ.‌ ಅವರಿಗೆ ನಾಚಿಯಾಗಬೇಕು. ಬಿಜೆಪಿ ಸರ್ಕಾರದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಕಾರವಾರ ಜಿಲ್ಲಾಸ್ಪತ್ರಗೆ ₹೧೬೦ ಕೋಟಿ, ಶಿರಸಿ ಆಸ್ಪತ್ರೆಗೆ ₹೧೭೦ ಕೋಟಿ ಅನುದಾನ ನೀಡಿದ್ದರು.‌ ಅತ್ಯಾಧುನಿಕವಾಗಿ ಆಸ್ಪತ್ರೆ ನಿರ್ಮಾಣವಾಗುತ್ತಿದೆ. ಬರಗಾಲದಿಂದ ರಾಜ್ಯದ ಜನರು ತತ್ತರಿಸುತ್ತಿರುವ ಸಂದರ್ಭದಲ್ಲಿ ಸುಳ್ಳು ಆಶ್ವಾಸನೆ ಕಾಂಗ್ರೆಸ್ ನೀಡುತ್ತಿದೆ. ಸುಳ್ಳಿನ ಸರ್ಕಾರ ಮುಂದಿನ ದಿನಗಳಲ್ಲಿ ನಿರ್ನಾಮವಾಗಲಿದೆ ಎಂದು ರೂಪಾಲಿ ನಾಯ್ಕ ವಾಗ್ದಾಳಿ ನಡೆಸಿದರು.

ನರೇಂದ್ರ ಮೋದಿ ಇನ್ನೊಮ್ಮೆ ಪ್ರಧಾನಿಯಾಗಬೇಕೆಂದು ಪ್ರತಿ ತಾಲೂಕಿಗೆ ತೆರಳಿ ಪಕ್ಷ ಸಂಘಟನೆ ಮಾಡಲಾಗುತ್ತಿದೆ. ನಮ್ಮ ನಾಯಕ, ಸಂಸದ ಅನಂತಕುಮಾರ ಹೆಗಡೆ ಮುಂದಿನ ದಿನಗಳಲ್ಲಿ ಪ್ರಚಾರಕ್ಕೆ ಇಳಿಯಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ, ನಿಕಟಪೂರ್ವ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಇದ್ದರು.