ಹಿಂದೂ ಧಾರ್ಮಿಕ ಹಬ್ಬ ಹರಿದಿನಗಳ ಆಚರಣೆಗೆ ಶ್ರದ್ಧಾ ಭಕ್ತಿಯ ಸಂಭ್ರಮವೂ ಸೇರಿ ಅರ್ಥಪೂರ್ಣವಾಗಿ ಆಚರಿಸುವ ಸಂಕಲ್ಪ ನಮ್ಮದಾಗಬೇಕಲ್ಲದೆ, ಮಕ್ಕಳಿಗೆ ನಮ್ಮ ಹಬ್ಬಗಳ ಅರಿವು ಅರ್ಥ ಮೂಡಿಸಬೇಕು ಎಂದು ಧರ್ಮಧ್ವಜ ಅಭಿಯಾನದ ಅಧ್ಯಕ್ಷ ಸಿದ್ದಲಿಂಗಣ್ಣ ಕಮಡೊಳ್ಳಿ ಹೇಳಿದರು.
ಹಾನಗಲ್ಲ: ಹಿಂದೂ ಧಾರ್ಮಿಕ ಹಬ್ಬ ಹರಿದಿನಗಳ ಆಚರಣೆಗೆ ಶ್ರದ್ಧಾ ಭಕ್ತಿಯ ಸಂಭ್ರಮವೂ ಸೇರಿ ಅರ್ಥಪೂರ್ಣವಾಗಿ ಆಚರಿಸುವ ಸಂಕಲ್ಪ ನಮ್ಮದಾಗಬೇಕಲ್ಲದೆ, ಮಕ್ಕಳಿಗೆ ನಮ್ಮ ಹಬ್ಬಗಳ ಅರಿವು ಅರ್ಥ ಮೂಡಿಸಬೇಕು ಎಂದು ಧರ್ಮಧ್ವಜ ಅಭಿಯಾನದ ಅಧ್ಯಕ್ಷ ಸಿದ್ದಲಿಂಗಣ್ಣ ಕಮಡೊಳ್ಳಿ ಹೇಳಿದರು.
ಹಾನಗಲ್ಲಿನ ೮೯ನೇ ನಾಡಹಬ್ಬದ ಸಿ.ಎಂ. ಉದಾಸಿ ವೇದಿಕೆಯಲ್ಲಿ ನಡೆದ ದಾಸವಾಣಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಸಂಸ್ಕೃತಿ ಸಂಸ್ಕಾರಗಳು ಕೇವಲ ಆಚರಣೆಗಳಲ್ಲ, ಅವು ನಮ್ಮ ಜೀವನವನ್ನು ಸುಂದರವಾಗಿಸುವ ಮತ್ತು ಸಮಾಜದಲ್ಲಿ ಗೌರವ ತಂದುಕೊಡುವ ದಾರಿದೀಪಗಳಾಗಿವೆ. ಯುವಕರು ನಮ್ಮ ಸಂಪ್ರದಾಯ ಸಂಸ್ಕೃತಿಗಳನ್ನು ನಶಿಸಿಹೊಂಗದಂತೆ ಉಳಿಸಿ ಬೆಳೆಸುವ ಅವಶ್ಯಕತೆ ಇದೆ. ಧರ್ಮದ ಉಳಿವಿನಲ್ಲಿ ನಮ್ಮ ಭವಿಷ್ಯವಿದೆ. ಬದಲಾದ ಕಾಲಕ್ಕೆ ಧರ್ಮ ಸಂಸ್ಕೃತಿಗಳು ಬದಲಾವಣೆಯ ದಾರಿಗೆ ಸೇರಿ ಅವುಗಳ ಶ್ರದ್ಧೆಗೆ ಧಕ್ಕೆ ಬರದಂತ ನೋಡಿಕೊಳ್ಳಬೇಕಾಗಿದೆ. ನಮ್ಮ ಧರ್ಮದ ಅಭಿಮಾನ ನಮಗಿಲ್ಲದಿದ್ದರೆ ಇತರರಿಗೆ ಇರಲು ಸಾಧ್ಯವಿಲ್ಲ. ಧರ್ಮ ಉಳಿದರೆ ನಾವು ಉಳಿಯುತ್ತೇವೆ ಎಂದರು.ಸಂಗೀತ ಶಿಕ್ಷಕ ನರಸಿಂಹ ಕೋಮಾರ ಮಾತನಾಡಿ, ಸಂಗೀತಕ್ಕೆ ಮನಸ್ಸನ್ನು ಅರಳಿಸುವ ಶಕ್ತಿ ಇದೆ. ಮನಸ್ಸನ್ನು ಕೆರಳಿಸುವ ಮೊಬೈಲ್ ಬಳಕೆಯನ್ನು ಬಿಟ್ಟು ಆಧ್ಯಾತ್ಮಿಕತೆಯ ಕಡೆಗೆ ಮುಖಮಾಡಿ, ಸಾಂಸ್ಕೃತಿಕ ಹಬ್ಬದಲ್ಲಿ ಪಾಲ್ಗೊಂಡು ನಾಡ ಹಬ್ಬದ ಮೂಲ ಉದ್ದೇಶವನ್ನು ಉಳಿಸಬೇಕಾಗಿದೆ. ಮೈಸೂರು ದಸರಾ ಹಬ್ಬದಷ್ಟೇ ಹಾನಗಲ್ಲ ಪ್ರಸಿದ್ಧಿಯಾಗಲಿದೆ ಎಂದರು.
ರಾಜ್ಯ ಪ್ರಶಸ್ತಿ ವಿಜೇತ ಖ್ಯಾತ ಗಾಯಕ ಅನಂತ ಕುಲಕರ್ಣಿ ಮಾತನಾಡಿ, ಲಿಂ.ಪಂ. ಪಂಚಾಕ್ಷರ ಗವಾಯಿಗಳನ್ನು, ಲಿಂ.ಪುಟ್ಟರಾಜ ಕವಿ ಗವಾಯಿಗಳವರನ್ನು ನೀಡಿದ ಹಾನಗಲ್ಲ ಕುಮಾರೇಶ್ವರನ ನಾಡಿನಲ್ಲಿ ನನಗೆ ಹಾಡಲು ಅವಕಾಶ ಸಿಕ್ಕಿದ್ದು ಪುರ್ವ ಜನ್ಮದ ಪುಣ್ಯ ಎಂದು ಭಾವಿಸುತ್ತೇನೆ. ೮೯ನೇ ನಾಡಹಬ್ಬ ಶತಕ ಪೂರೈಸಲಿ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ನಿವೃತ್ತ ಶಿಕ್ಷಕ ಕೆ.ಎಲ್. ದೇಶಪಂಡೆ, ಭಾರತೀಯ ಹಬ್ಬಗಳು ಎಲ್ಲರನ್ನು ಜೊತೆಗೂಡಿಸುತ್ತವೆ. ನವರಾತ್ರಿಯು ದೇವಿ ಆರಾಧನೆ ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶಗಳನ್ನು ನೀಡಲಾಗುತ್ತದೆ. ಇಂತಹ ಕಾರ್ಯಕ್ರಮಗಳಲ್ಲಿ ಯುವಜನತೆ ಹೆಚ್ಚು ಹೆಚ್ಚು ಪಾಲ್ಗೊಂಡು ನಾಡಹಬ್ಬದ ಮೆರಗನ್ನು ಹೆಚ್ಚಿಸುವ ಅವಶ್ಯಕತೆ ಇದೆ ಎಂದರು.
ನಾಡಹಬ್ಬ ಉತ್ಸವ ಸಮಿತಿ ಅಧ್ಯಕ್ಷ ನಾಗಪ್ಪ ಸವದತ್ತಿ ಇದ್ದರು. ಮಹಿಳಾ ದಿವ್ಯ ಜೀವನ ಸಂಘದ ಸದಸ್ಯರು ಪ್ರಾರ್ಥನೆ ಹಾಡಿದರು. ರವಿ ಪೋತದಾರ ಕಾರ್ಯಕ್ರಮ ನಿರೂಪಿಸಿದರು. ಗಿರೀಶ ದೇಶಪಾಂಡೆ ಸ್ವಾಗತಿಸಿದರು.ನಂತರ ನಡೆದ ದಾಸವಾಣಿ ಕಾರ್ಯಕ್ರಮದಲ್ಲಿ ಗಾಯಕ ಅನಂತ ಕುಲಕರ್ಣಿ ಅವರು ವಿವಿಧ ದಾಸರ ಪದಗಳನ್ನು ಶುಶ್ರಾವ್ಯವಗಿ ಹಾಡಿ ಜನಮನ ಸೂರೆಗೊಂಡರು. ತಬಲಾ ಸಾಥ ನೀಡಿದ ಮದುಸೂದನ ಅವರ ತಬಲಾವಾದನ ಜನರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು. ಪಾಂಡುರಂಗ ಅವರು ಹಾರ್ಮೋನಿಯಂ ಸಾಥ ನೀಡಿದರು.