ದೇಶದಲ್ಲಿನ ಸಾಧು ಸಂತರ, ಮಹಾಪುರುಷರ ಅಸಾಧಾರಣ ಶಕ್ತಿಯಿಂದ ಭಾರತ ಗಟ್ಟಿಯಾಗಿ ನಿಂತಿದೆ.

ನರಗುಂದ: ದೇಶವನ್ನು ಶತಶತಮಾನಗಳಿಂದ ನಾಶ ಮಾಡಲು ಅನೇಕರು ಪ್ರಯತ್ನಿಸಿದ್ದಾರೆ. ಆದರೆ ಅವರ್ಯಾರು ಯಶಸ್ಸು ಕಂಡಿಲ್ಲ. ಸೋಮನಾಥ ಮಂದಿರ ಮತ್ತು ಅಯೋಧ್ಯೆಯ ಶ್ರೀರಾಮ ಮಂದಿರ ಸೇರಿದಂತೆ ಅನೇಕ ನಮ್ಮ ಸಾಂಸ್ಕೃತಿಕ ನೆಲೆಗಳು ದಾಳಿಗೊಳಗಾಗಿ ನಾಶವಾಗಿದ್ದವು. ಆದರೀಗ ಅವು ಮತ್ತೆ ತಲೆಯೆತ್ತಿ ನಿಲ್ಲಲು ಹಿಂದೂ ಸಮಾಜದ ಶಕ್ತಿ ಕಾರಣವಾಗಿದೆ ಎಂದು ಕರ್ನಾಟಕ ಉತ್ತರ ಪ್ರಾಂತ ಕಾರ್ಯಕಾರಿಣಿ ಸದಸ್ಯ ಗೋಪಿ ತಿಳಿಸಿದರು.ಪಟ್ಟಣದ ಬಾಬಾಸಾಹೇಬ ಭಾವೆ ಅರಮನೆ ಆವರಣದಲ್ಲಿ ನಡೆದ ಹಿಂದೂ ಸಮ್ಮೇಳನದಲ್ಲಿ ಮಾತನಾಡಿ, ದೇಶದಲ್ಲಿನ ಸಾಧು ಸಂತರ, ಮಹಾಪುರುಷರ ಅಸಾಧಾರಣ ಶಕ್ತಿಯಿಂದ ಭಾರತ ಗಟ್ಟಿಯಾಗಿ ನಿಂತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಆಧುನಿಕ ಜೀವನಶೈಲಿಯಿಂದ ವಿವಿಧ ಜಾತಿ ವರ್ಗದವರು ಮತಾಂತರ ಆಗುತ್ತಿದ್ದಾರೆ. ಹೀಗಾಗಿ ಸ್ವಾಭಿಮಾನಿಗಳಾಗಿ ಸಂಘಟಿತರಾಗಿ ಎದ್ದು ನಿಲ್ಲಬೇಕಾಗಿದೆ. ಸ್ವಾರ್ಥ ರಾಜಕೀಯದಿಂದ ದೇಶದ ಗಡಿಯಲ್ಲಿ ನುಸುಳುಕೋರರ ಸಂಖ್ಯೆ ಹೆಚ್ಚಾಗುತ್ತಿದೆ. ದೇಶದಲ್ಲಿ ಅಭದ್ರತೆ ಕಾಡುತ್ತಿದೆ. ಗಡಿ ರಾಷ್ಟ್ರಗಳಲ್ಲಿ ಹಿಂದೂಗಳ ಮೇಲೆ ನಿರಂತರ ದಾಳಿ ನಡೆಯುತ್ತಿದೆ ಎಂದರು.ಜನರಲ್ಲಿ ದೇಶಭಕ್ತಿಯ ಕೊರತೆಯಿದೆ. ಇತಿಹಾಸದ ಪುಟ ತೆರೆದು ನೋಡಿದಾಗ ಸಮಾಜದ ಮೆಲೆ ಮತ್ತೊಬ್ಬರಿಂದ ಆಗಾಗ ದಾಳಿಗಳು ನಡೆಯುತ್ತಿವೆ. ಈ ಕಾರಣದಿಂದಲೇ 1925ರಲ್ಲಿ ವಿಜಯದಶಮಿ ದಿನ ರಾಷ್ಟ್ರೀಯ ಸ್ವಯಂಸೇವಕ ಸಂಘ ಹುಟ್ಟಿಕೊಂಡಿದೆ. ಜನರಲ್ಲಿ ದೇಶಭಕ್ತಿಯನ್ನು ಮೂಡಿಸುತ್ತಾ ಸಂಘವು ನೂರು ವರ್ಷ ತಲುಪಿದೆ ಎಂದರು.

ನೂರು ವರ್ಷದ ಹಿನ್ನೆಲೆಯಲ್ಲಿ ದೇಶಾದ್ಯಂತ ಪ್ರತಿ ನಗರ, ಗ್ರಾಮಗಳಲ್ಲಿ ಸಕಲ ಸಮಾಜದವರನ್ನು ಕರೆದುಕೊಂಡು ಹಿಂದೂ ಸಮ್ಮೇಳನವನ್ನು ಮಾಡುತ್ತಿದೆ. ದೇಶವು ಅಭಿವೃದ್ಧಿಯತ್ತ ಸಾಗುತ್ತಾ ವಿಶ್ವಗುರು ಹಂತಕ್ಕೆ ಬಂದು ತಲುಪಿದೆ. ಆದ್ದರಿಂದ ನಾವೆಲ್ಲರೂ ದೇಶಭಕ್ತಿವುಳ್ಳವರಾಗಿ ಒಗ್ಗಟ್ಟಿನಿಂದ ರಾಷ್ಟ್ರಕಾರ್ಯ ಮಾಡೋಣವೆಂದು ತಿಳಿಸಿದರು.ಪಂಚಗೃಹ ಗುಡ್ಡದ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯ ಶ್ರೀಗಳು ಮಾತನಾಡಿ, ದೇಶದಲ್ಲಿ ಯಾರೇ ಕೆಟ್ಟದನ್ನು ಮಾಡಲಿ, ನಮ್ಮ ಸಮಾಜ ಮಾತ್ರ ಒಳ್ಳೆಯದನ್ನು ಮಾತ್ರ ಸ್ವೀಕಾರ ಮಾಡುತ್ತದೆ. ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ಹಿಂದೂ ಸಮಾಜ ಗಟ್ಟಿಯಾಗಿದೆ ಎಂದರು.ಸಮಾರಂಭದ ಮೊದಲು ದಂಡಾಪುರ ಉಡಚಾ ಪರಮೇಶ್ವರಿ ದೇವಸ್ಥಾನದಿಂದ ನಗರದ ಪ್ರಮುಖ ಬೀದಿಗಳಲ್ಲಿ ಸಕಲ ಸಮಾಜಗಳ ವಿವಿಧ ವಾದ್ಯ ಮೇಳದೊಂದಿಗೆ ಭವ್ಯ ಮೆರವಣಿಗೆ ನಡೆಯಿತು. ಭಾರತಮಾತೆ ಮತ್ತು ಮಹಾಪುರುಷರ ಭಾವಚಿತ್ರದ ಅಲಂಕಾರಿಕ ತೆರೆದ ವಾಹನಗಳು, ಮಕ್ಕಳ ಛದ್ಮವೇಷ, ಕೃತಕ ಆನೆ, ಕುಂಭಹೊತ್ತ ಮಹಿಳೆಯರು, ವಿವಿಧ ವಾದ್ಯಮೇಳಗಳು ಮೆರವಣಿಗೆಯಲ್ಲಿ ಕಂಡುಬಂದವು. ಶೋಭಾಯಾತ್ರೆಯಲ್ಲಿ ಸಾವಿರಾರು ಜನರು ಸೇರಿದ್ದರು.ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು, ಪತ್ರಿವನ ಮಠದ ಗುರುಸಿದ್ಧವೀರ ಶಿವಾಚಾರ್ಯ ಶ್ರೀಗಳು, ವಿರಕ್ತಮಠ ಶಿವಕುಮಾರ ಶ್ರೀಗಳು, ವಾಸಣ್ಣ ಬೊನಗೇರಿ, ಪರಪ್ಪ ವಾಳದ ಇದ್ದರು. ತಾಲೂಕು ಸಂಘಚಾಲಕ ಮಂಜುನಾಥ ಬೆಳಗಾವಿ ಸ್ವಾಗತಿಸಿದರು. ಸಂಜು ನೆಲವಡಿ ನಿರೂಪಿಸಿದರು. ವಾಸಣ್ಣ ಬೊನಗೇರಿ ವಂದಿಸಿದರು.