ಮಾನವೀಯ ಸಂಬಂಧ ಹಾಳುಗೆಡವಲು ಚರಿತ್ರೆ ಸಾಧನ ಆಗದಿರಲಿ

| Published : Mar 26 2024, 01:17 AM IST

ಮಾನವೀಯ ಸಂಬಂಧ ಹಾಳುಗೆಡವಲು ಚರಿತ್ರೆ ಸಾಧನ ಆಗದಿರಲಿ
Share this Article
  • FB
  • TW
  • Linkdin
  • Email

ಸಾರಾಂಶ

ಚರಿತ್ರೆಯಲ್ಲಿನ ಸೌಹಾರ್ದ, ಸಾಮರಸ್ಯದ ಭಾಗಗಳನ್ನು ವರ್ತಮಾನಕ್ಕೆ ತಂದುಕೊಂಡು ಹೃದಯಗಳ ನಡುವೆ ಬೆಸುಗೆಯಾಗಿ ರೂಪುಗೊಳ್ಳುವಂತೆ ಮಾಡುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ದಾವಣಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ದಾದಾಪೀರ್ ನವಿಲೇಹಾಳ್ ಹರಿಹರದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಹರಿಹರ

ಚರಿತ್ರೆಯಲ್ಲಿನ ಸೌಹಾರ್ದ, ಸಾಮರಸ್ಯದ ಭಾಗಗಳನ್ನು ವರ್ತಮಾನಕ್ಕೆ ತಂದುಕೊಂಡು ಹೃದಯಗಳ ನಡುವೆ ಬೆಸುಗೆಯಾಗಿ ರೂಪುಗೊಳ್ಳುವಂತೆ ಮಾಡುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ದಾವಣಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ದಾದಾಪೀರ್ ನವಿಲೇಹಾಳ್ ಹೇಳಿದರು.

ಮಾನವ ಬಂಧುತ್ವ ವೇದಿಕೆಯಿಂದ ಹನಗವಾಡಿ ಹೊರವಲಯದ ಮೈತ್ರಿವನದಲ್ಲಿ ಆಯೋಜಿಸಿದ್ದ ಭಗತ್‌ ಸಿಂಗ್, ಸುಖದೇವ್, ರಾಜಗುರು ರವರ ಹುತಾತ್ಮ ದಿನಾಚರಣೆ ಹಾಗೂ ರಾಮಮೋಹನ್ ಲೋಹಿಯಾ ಅವರ ಜನ್ಮದಿನಾಚರಣೆಯಲ್ಲಿ ಅವರು ಮಾತನಾಡಿದರು. ನಮ್ಮ ನಡುವೆ ಜಾತಿವಾದ, ಕೋಮುವಾದ, ಧರ್ಮಾಂಧತೆಯನ್ನು ಬಿತ್ತಿ ಮಾನವೀಯ ಸಂಬಂಧಗಳನ್ನು ಹಾಳುಗೆಡವಲು ಚರಿತ್ರೆ ಸಾಧನವಾಗಬಾರದು ಎಂದರು.

ಕೇವಲ ೨೪ನೇ ವಯಸ್ಸಿನಲ್ಲಿ ನೇಣುಗಂಬ ಏರಿದ ಭಗತ್‌ ಸಿಂಗ್ ಮತ್ತು ಸಂಗಡಿಗರು ಸ್ವಾತಂತ್ರ್ಯ ಚಳವಳಿಗೆ ಹೊಸ ಆಯಾಮವನ್ನು ತಂದುಕೊಟ್ಟರು. ಅಸ್ಪೃಶ್ಯತೆ, ಧಾರ್ಮಿಕ ಶ್ರದ್ಧೆ, ಕೋಮುವಾದ, ನಾಸ್ತಿಕವಾದ ಇಂತಹ ಹಲವು ವಿಚಾರಗಳಲ್ಲಿ ಪ್ರಖರವಾದ ತಿಳಿವಳಿಕೆ ಇದ್ದು, ಸ್ವತಂತ್ರ ಭಾರತಕ್ಕೆ ಅಗತ್ಯವಾದ ಚಿಂತನೆ ಮತ್ತು ಹೋರಾಟವನ್ನು ಅವರು ರೂಪಿಸಿಕೊಂಡಿದ್ದರು ಎಂದರು.

ನೇಣುಗಂಬ ಏರುವ ಸಂದರ್ಭ ಲೆನಿನ್ ಪುಸ್ತಕ ಓದುತ್ತಾ ರೋಸಿಹೋಗಿದ್ದರು. ಜೈಲು ಅಧಿಕಾರಿ ನೇಣುಗಂಬಕ್ಕೆ ಕರೆದೊಯ್ಯಲು ಬಂದಾಗ, ಲೆನಿನ್ ಪುಸ್ತಕ ಪೂರ್ಣ ಓದಿ ಮುಗಿಸುವವರೆಗೆ ಸಮಯಕೊಡಿ ಎಂದು ಕೇಳಿದ್ದರು. ಇಂತಹ ಓದಿನ ಪ್ರೀತಿ, ಅವರ ಆದರ್ಶಗಳು ಯುವಜನರಿಗೆ ಆದರ್ಶವಾಗಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಮಾನವ ಬಮಧುತ್ವ ವೇದಿಕೆ ರಾಜ್ಯಾಧ್ಯಕ್ಷ ಡಾ.ಎ.ಬಿ.ರಾಮಚಂದ್ರಪ್ಪ ಮಾತನಾಡಿ, ಮಾನವ ಬಂಧುತ್ವದ ಮೌಲ್ಯಗಳು ಚರಿತ್ರೆಯಲ್ಲಿ ಅಪಾರವಾಗಿ ಕಾಣಸಿಗುತ್ತವೆ, ಈ ಬಂಧುತ್ವಗಳಿಗೆ ಇಂದು ನಂಜು ಸವರಲಾಗುತ್ತಿದೆ. ರಾಮಮನೋಹರ ಲೋಹಿಯಾ ಪ್ರತಿಪಕ್ಷದಲ್ಲಿದ್ದುಕೊಂಡು ಆಡಳಿತ ಪಕ್ಷದ ಮಿತಿಗಳನ್ನು ಎತ್ತಿತೋರಿಸಿ, ಆಡಳಿತವನ್ನು ಮಾನವೀಯಗೊಳಿಸುತ್ತಿದ್ದರು. ಆಡಳಿತ ಪಕ್ಷದಷ್ಟೇ ಮುಖ್ಯವಾಗಿ ಪ್ರತಿಪಕ್ಷ ಇದ್ದಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿ ಆಗಬಲ್ಲದು ಎಂದರು.

ವೇದಿಕೆಯಲ್ಲಿ ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ಮಾಡಾಳ್ ಶಿವಕುಮಾರ್, ಮಹಿಳಾ ಘಟಕದ ಜಿಲ್ಲಾ ಸಂಚಾಲಕಿ ಪವಿತ್ರಾ, ತಾಲೂಕು ಸಮಚಾಲಕ ಮಂಜುನಾಥ ಉಕ್ಕಡಗಾತ್ರಿ, ಜಗಳೂರಿನ ವಕೀಲ ಬಸವರಾಜ್, ಹೊನ್ನಾಳಿಯ ಗಣೇಶ್, ದಾವಣಗೆರೆಯ ಹನುಮಂತಪ್ಪ ಕರೂರು, ಚನ್ನಗಿರಿಯ ಸತೀಶ್‌ ಕಾಕನೂರು ಇತರರಿದ್ದರು.

- - - -೨೫ಎಚ್‌ಆರ್‌ಆರ್೧:

ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಡಾ.ದಾದಾಪೀರ್ ನವಿಲೇಹಾಳ್ ಮಾತನಾಡಿದರು.