ಸಾರಾಂಶ
ಯುವಕರು ಉದ್ಯೋಗ ಅರಸಿ ಮಹಾನಗರಗಳಿಗೆ ಹೋಗುವ ಬದಲು ಸ್ಥಳೀಯವಾಗಿಯೇ ಉದ್ಯೋಗ ಆರಂಭಿಸಿ ಉದ್ಯೋಗದಾತರಾಗಬೇಕು ಎಂದು ಪ್ರಶಿಕ್ಷಣ ಭಾರತಿ ವಿಭಾಗ ಸಂಯೋಜಕ ಶ್ರೀನಿವಾಸ ಪಾಟೀಲ ಹೇಳಿದರು.
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಯುವಕರು ಉದ್ಯೋಗ ಅರಸಿ ಮಹಾನಗರಗಳಿಗೆ ಹೋಗುವ ಬದಲು ಸ್ಥಳೀಯವಾಗಿಯೇ ಉದ್ಯೋಗ ಆರಂಭಿಸಿ ಉದ್ಯೋಗದಾತರಾಗಬೇಕು ಎಂದು ಪ್ರಶಿಕ್ಷಣ ಭಾರತಿ ವಿಭಾಗ ಸಂಯೋಜಕ ಶ್ರೀನಿವಾಸ ಪಾಟೀಲ ಹೇಳಿದರು.ಸ್ಥಳೀಯ ಕೆಎಲ್‌ಇ ಪಾಲಿಟೆಕ್ನಿಕ್ ಮಹಾವಿದ್ಯಾಲಯದಲ್ಲಿ ರಾಷ್ಟ್ರೋತ್ಥಾನ ಪರಿಷತ್ ಬೆಂಗಳೂರು, ಪ್ರಶಿಕ್ಷಣ ಭಾರತಿ ಬಾಗಲಕೋಟೆ ಜಿಲ್ಲೆಯ ಸಹಯೋಗದೊಂದಿಗೆ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ವಿಶ್ವಗುರು ಭಾರತ ವಿಷಯದ ಮೇಲೆ ಉಪನ್ಯಾಸ ನೀಡಿ ಮಾತನಾಡಿದ ಅವರು, ಭಾರತ ಹಾವಾಡಿಗರ ದೇಶವಲ್ಲ. ಅದು ಎಂದೆಂದೂ ವಿಶ್ವಗುರುವೇ, ಭಾರತ ಜಗತ್ತಿಗೆ ಅಗಾಧವಾದುದನ್ನೇ ನೀಡಿದೆ. ಬ್ರಿಟಿಷರು ಬರುವ ಮುಂಚೆ ಭಾರತದ ಜಿಡಿಪಿ ಶೇ.೩೨ ಇತ್ತು ಇದು ಜಗತ್ತಿಲ್ಲೆ ಅತಿ ಹೆಚ್ಚು. ಸ್ವಾತಂತ್ರ್ಯ ನಂತರ ಶೇ.೨ರಷ್ಟಿದ್ದ ಜಿಡಿಪಿ ಇಂದು ೭ಕ್ಕೇರಿದ್ದು ಸದ್ಯ ಭಾರತ ಜಗತ್ತಿನ ೫ನೇ ಆರ್ಥಿಕ ಬಲಿಷ್ಠ ರಾಷ್ಟ್ರವಾಗಿದೆ ಎಂದರು.
ಜಗತ್ತಿನಲ್ಲಿ ಅತೀ ಹೆಚ್ಚು ಕೃಷಿಯೋಗ್ಯ ಭೂಮಿ ಹೊಂದಿರುವ ಭಾರತದ ಯುವಶಕ್ತಿ ಕೃಷಿರಂಗದಲ್ಲಿ ತೊಡಗಿಕೊಳ್ಳಬೇಕು. ಸೃಜನಶೀಲತೆ ಬಳಸಿ ಮೇಕ್ ಇನ್ ಇಂಡಿಯಾ ಮೂಲಕ ಭಾರತವನ್ನು ಸದಾ ಜಗನ್ಮಾತೆ, ವಿಶ್ವಮಾತೆ, ವಿಶ್ವಗುರುವಾಗಿ ಮೆರೆಸಬೇಕೆಂದರು.ಕಾಲೇಜು ಪ್ರಾಂಶುಪಾಲ ಎಸ್.ಐ.ಕುಂದಗೋಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಇತಿಹಾಸ ಬಲ್ಲವ ಮಾತ್ರ ಸೃಷ್ಟಿಸಬಲ್ಲ. ಭಾರತ ಹಿಂದೆ, ಇಂದು, ಮುಂದೆ ಎಂದೆಂದೂ ವಿಶ್ವಗುರುವೇ ಎಂಬ ನೈಜ ಇತಿಹಾಸ ಸರ್ವರಿಗೂ ತಿಳಿಯುವಂತಾಗಬೇಕು ಎಂದರು.
ಪ್ರಶಿಕ್ಷಣ ಭಾರತಿ ಸಂಪನ್ಮೂಲ ವ್ಯಕ್ತಿ ನಾರನಗೌಡ ಉತ್ತಂಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾನಿಪ ಅಧ್ಯಕ್ಷ ಮಹೇಶ ಮನ್ನಯ್ಯನವರಮಠ, ವಿವಿಧ ವಿಭಾಗಗಳ ಮುಖ್ಯಸ್ಥರಾದ ಸವಿತಾ ಬೀಳಗಿ, ವಂದನಾ ಪಸಾರ, ಸುಭಾಸ್ ಮೂಶಿ, ಉಪನ್ಯಾಸಕರಾದ ಪ್ರಿಯಾ ಸೋನಾರ, ಗುರುರಾಜ ಅಥಣಿ, ಮಂಜುನಾಥ ಅರಕೇರಿ, ಅಮಿತ ಜಾಧವ ಇತರರಿದ್ದರು.