ಭಯೋತ್ಪಾದನೆ ವಿರುದ್ಧ ಭಾರತೀಯರು ಜಾಗ್ರತರಾಗಲಿ: ವೆಂಕಟರಮಣ ಬೆಳ್ಳಿ

| Published : Aug 16 2024, 12:57 AM IST

ಭಯೋತ್ಪಾದನೆ ವಿರುದ್ಧ ಭಾರತೀಯರು ಜಾಗ್ರತರಾಗಲಿ: ವೆಂಕಟರಮಣ ಬೆಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ಮತ್ತು ಯುವಮೋರ್ಚಾ ಸಂಘಟನೆಗಳಡಿ ಯಲ್ಲಾಪುರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬುಧವಾರ ಸಂಜೆ ಪಂಜಿನ ಮೆರವಣಿಗೆ ನಡೆಸಲಾಯಿತು. ಆನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ವೆಂಕಟ್ರಮಣ ಬೆಳ್ಳಿ ವಕ್ತಾರರಾಗಿ ಮಾತನಾಡಿದರು.

ಯಲ್ಲಾಪುರ: ಮತಾಂಧತೆ, ಕೌರ್ಯ, ಭಯೋತ್ಪಾದನೆ ವಿರುದ್ಧ ಭಾರತೀಯರು ಒಗ್ಗಟ್ಟಾಗಿ ಜಾಗ್ರತರಾಗಬೇಕಿದೆ ಎಂದು ಹಿರಿಯ ಸಾಮಾಜಿಕ ಕಾರ್ಯಕರ್ತ ವೆಂಕಟರಮಣ ಬೆಳ್ಳಿ ಹೇಳಿದರು.

ಬಿಜೆಪಿ ಮತ್ತು ಯುವಮೋರ್ಚಾ ಸಂಘಟನೆಗಳಡಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬುಧವಾರ ಸಂಜೆ ಹಮ್ಮಿಕೊಂಡಿದ್ದ ಪಂಜಿನ ಮೆರವಣಿಗೆಯ ಆನಂತರ ನಡೆದ ಸಭೆಯಲ್ಲಿ ವಕ್ತಾರರಾಗಿ ಅವರು ಮಾತನಾಡಿದರು. ನಮ್ಮ ಹಿರಿಯರ ತ್ಯಾಗ, ಬಲಿದಾನಗಳಿಂದಾಗಿ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ. ಆ ಸಂದರ್ಭದಲ್ಲಿ ಮುಸ್ಲಿಮರಿಗಾಗಿ ಪ್ರತ್ಯೇಕ ರಾಷ್ಟ್ರ ನೀಡಬೇಕೆಂಬ ಜಿನ್ನಾ ಬೇಡಿಕೆಯಂತೆ ಪಾಕಿಸ್ಥಾನ ನೀಡಲಾಯಿತು. ಆದರೆ, ಇಂದು ವಿಶ್ವದೆಲ್ಲೆಡೆ ಹಿಂದೂಗಳಿಗೆ ಧೈರ್ಯದಿಂದ ಬದುಕುವ ವಾತಾವರಣ ಇಲ್ಲವಾಗಿದೆ ಎಂದು ಹೇಳಿದರು.

ಭಾರತದಲ್ಲಿರುವ ಬಹುತೇಕ ಮುಸ್ಲಿಮರು ಹಿಂದುಗಳಾಗಿದ್ದವರೇ. ಬದುಕಿಗಾಗಿ ಆತಂಕದಿಂದಲೇ ಮತಾಂತರಗೊಂಡವರು. ಗಜನಿ ಮಹಮದ್, ಟಿಪ್ಪು ಸುಲ್ತಾನ ಇಂತಹವರು ಲಕ್ಷಾಂತರ ಭಾರತೀಯರನ್ನು ಕೊಂದು, ಹಿಂದೂ ದೇವಾಲಯಗಳನ್ನು ನಾಶಪಡಿಸಿದ್ದಾರೆ. ಅವರಿಂದು ನಮಗೆ ಆದರ್ಶಪ್ರಾಯರು. ದೇಶಕ್ಕಾಗಿ ಲಕ್ಷಾಂತರ ಸೇನಾನಿಗಳು, ನಾಯಕರು ಬಲಿದಾನ ಮಾಡಿ, ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಅವರನ್ನು ಸ್ಮರಿಸುವ ದಿನ ಇದಾಗಿದೆ. ಅಖಂಡ ಭಾರತದ ಕಲ್ಪನೆ ಹೊತ್ತ ಭಾರತವನ್ನು ಚೂರು ಚೂರು ಮಾಡಲಾಗಿದೆ ಎಂದು ಹೇಳಿದರು.

ನಮಗೆ ಪುಕ್ಕಟೆಯಾಗಿ ಸ್ವಾತಂತ್ರ್ಯ ಬಂದಿಲ್ಲ. ನಾವಿಂದು ಐಷಾರಾಮ, ಮೋಜು, ಮಸ್ತಿಗಾಗಿ ಜೀವನ ನಡೆಸಲು ಮುಂದಾದರೆ ಮುಂಬರುವ ದಿನಗಳು ತೀವ್ರ ಭಯಾನಕವಾಗಬಹುದು. ೫೦ ವರ್ಷ ನಮ್ಮನ್ನಾಳಿದ ಸರ್ಕಾರಗಳು ವಾಸ್ತವಿಕ ಇತಿಹಾಸವನ್ನು ತಿರುಚಿವೆ. ಆದ್ದರಿಂದ ವಾಸ್ತವಿಕ ಅರಿವನ್ನು ಯುವಜನಾಂಗಕ್ಕೆ ಮೂಡಿಸಬೇಕಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ಮಾತನಾಡಿ, ನಮ್ಮ ಹಿರಿಯರು ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿ, ತಂದುಕೊಟ್ಟ ಸ್ವಾತಂತ್ರ್ಯವನ್ನು ಉಳಿಸಿಕೊಂಡು ವಿಶ್ವವೇ ಗಮನಿಸುವಷ್ಟು ಮುನ್ನಡೆಯುತ್ತಿದ್ದೇವೆ. ನಮ್ಮ ಪಕ್ಷ ಭಾರತದ ಪ್ರತಿಯೊಬ್ಬ ಪ್ರಜೆಯ ಮನೆಗಳಲ್ಲಿ ತ್ರಿವರ್ಣ ಧ್ವಜ ಹಾರಬೇಕು, ರಾಷ್ಟ್ರಪ್ರೇಮ ಜಾಗ್ರತವಾಗಬೇಕು ಎಂಬ ಉದ್ದೇಶದಿಂದ ಹರ್ ಘರ್ ತಿರಂಗಾ, ಪಂಜಿನ ಮೆರವಣಿಗೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಯುವಜನಾಂಗಕ್ಕೆ ಪ್ರೇರಣಾದಾಯಕ ಕಾರ್ಯ ಮಾಡುತ್ತಿದೆ ಎಂದರು.

ಹಿರಿಯರಾದ ರಾಮು ನಾಯ್ಕ, ಉಮೇಶ ಭಾಗ್ವತ, ಗೋಪಾಲಕೃಷ್ಣ ಗಾಂವ್ಕರ, ಗಜಾನನ ನಾಯ್ಕ, ರಜತ್ ಬದ್ದಿ, ಸೋಮೇಶ್ವರ ನಾಯ್ಕ, ಮತ್ತಿತರರು ಉಪಸ್ಥಿತರಿದ್ದರು. ಸುಜಯ ದುರಂಧರ್ ಹಾಡಿದ ''''''''ವಂದೇ ಮಾತರಂ''''''''ನೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಪ್ರದೀಪ ಯಲ್ಲಾಪುರಕರ್ ಸ್ವಾಗತಿಸಿದರು. ರಾಘು ಕುಂದರಗಿ ನಿರ್ವಹಿಸಿದರು. ವಿಠ್ಠು ಶಳಕೆ ವಂದಿಸಿದರು.