ಸ್ಥಳೀಯ ಬೇಡಿಕೆ ಅನುಗುಣವಾಗಿ ಉದ್ಯಮ ಸ್ಥಾಪಿಸಲಿ: ಕೆ.ವಿ. ಕಾವ್ಯಾರಾಣಿ

| Published : Jan 19 2025, 02:18 AM IST

ಸ್ಥಳೀಯ ಬೇಡಿಕೆ ಅನುಗುಣವಾಗಿ ಉದ್ಯಮ ಸ್ಥಾಪಿಸಲಿ: ಕೆ.ವಿ. ಕಾವ್ಯಾರಾಣಿ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯ ಕರಾವಳಿ ಭಾಗದ ಮೀನಿನ ಉತ್ಪನ್ನಗಳು ಹೊರ ದೇಶಗಳಿಗೆ ರಫ್ತಾಗುತ್ತಿದ್ದು, ಇನ್ನೂ ದೊಡ್ಡ ಪ್ರಮಾಣದಲ್ಲಿ ಕೈಗಾರಿಕೆ ಅಭಿವೃದ್ಧಿಯಾಗಿ ರಫ್ತು ಹೆಚ್ಚಳವಾಗಬೇಕು ಸಹಾಯಕ ಆಯುಕ್ತೆ ಕೆ.ವಿ. ಕಾವ್ಯಾರಾಣಿ ಹೇಳಿದರು.

ಶಿರಸಿ: ಭೌಗೋಳಿಕವಾಗಿ ವಿಭಿನ್ನವಾಗಿರುವ ಉತ್ತರಕನ್ನಡದಲ್ಲಿ ಅವಕಾಶ ಕಡಿಮೆ ಇದ್ದು, ಸ್ಥಳೀಯ ಬೇಡಿಕೆ ಅನುಗುಣವಾಗಿ ಉದ್ಯಮ ಸ್ಥಾಪಿಸಬೇಕಾಗಿದೆ ಎಂದು ಸಹಾಯಕ ಆಯುಕ್ತೆ ಕೆ.ವಿ. ಕಾವ್ಯಾರಾಣಿ ಹೇಳಿದರು.

ಶನಿವಾರ ನಗರದ ಹೋಟೆಲೊಂದರಲ್ಲಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಕರ್ನಾಟಕ ಸರ್ಕಾರ, ಜಿಲ್ಲಾ ಕೈಗಾರಿಕಾ ಕೇಂದ್ರ, ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಸಹಯೋಗದಲ್ಲಿ ಎಂ.ಎಸ್.ಎಂ.ಇ.ಗಳ ಕಾರ್ಯಕ್ಷಮತೆ ಹೆಚ್ಚಿಸುವುದು ಯೋಜನೆಯಡಿ ಲೀನ್ ಯೋಜನೆ ಮತ್ತು ಝಡ್ ಇ.ಡಿ. ಕುರಿತು ಹಮ್ಮಿಕೊಂಡ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಭಾರತದಲ್ಲಿ ಜಾಗತೀಕರಣವಾದ ಮೇಲೆ ಕೈಗಾರಿಕೆ ಮಹತ್ವ ಅರ್ಥವಾಗಿ ಕೈಗಾರಿಕೆಗಳು ವೇಗವಾಗಿ ಬೆಳೆಯಲು ಸಾಧ್ಯವಾಯಿತು. ಕೃಷಿ ಉತ್ಪನ್ನಗಳ ಹೊಸ ಮಾರುಕಟ್ಟೆಯನ್ನು ಕೈಗಾರಿಕೆ ನೀಡಿದೆ. ಅಭಿವೃದ್ಧಿ ಹೊಂದಿದ ದೇಶಗಳಿಗೆ ನಮ್ಮ ದೇಶ ಸ್ಪರ್ಧೆ ನೀಡುತ್ತಿದೆ. ಜಿಲ್ಲೆಯ ಕರಾವಳಿ ಭಾಗದ ಮೀನಿನ ಉತ್ಪನ್ನಗಳು ಹೊರ ದೇಶಗಳಿಗೆ ರಫ್ತಾಗುತ್ತಿದ್ದು, ಇನ್ನೂ ದೊಡ್ಡ ಪ್ರಮಾಣದಲ್ಲಿ ಕೈಗಾರಿಕೆ ಅಭಿವೃದ್ಧಿಯಾಗಿ ರಫ್ತು ಹೆಚ್ಚಳವಾಗಬೇಕು ಎಂದರು.

ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ಕೆ.ಬಿ. ಲೋಕೇಶ ಹೆಗಡೆ ಮಾತನಾಡಿ, ಕಾರ್ಮಿಕರು ಹಾಗೂ ಮಾರುಕಟ್ಟೆಯನ್ನು ಅವಲೋಕಿಸಿ, ಸಣ್ಣ ಕೈಗಾರಿಕೆ ಬೆಳೆಸಬೇಕು. ಅದಕ್ಕೆ ಸರ್ಕಾರ ಹಾಗೂ ಸಮೂಹ ಸಹಕಾರ ನೀಡಬೇಕಿದೆ ಎಂದರು.

ಸಣ್ಣ ಕೈಗಾರಿಕಾ ಸಂಘದ ಜಿಲ್ಲಾಧ್ಯಕ್ಷ ಅಣ್ಣಪ್ಪ ನಾಯ್ಕ ಮಾತನಾಡಿ, ಜಿಲ್ಲಾ ಸಂಘ ೫೧ ವರ್ಷ ಪೂರೈಸಿದೆ. ಕೈಗಾರಿಕಾ ವಸಾಹತು ಕೇಂದ್ರ ಮಾತ್ರ ಅಭಿವೃದ್ಧಿಯಾಗಿಲ್ಲ. ಬೃಹತ್ ಕೈಗಾರಿಕೆ ಸ್ಥಾಪಿಸಲು ಕನಿಷ್ಠ ೫ ಎಕರೆ ಜಾಗ ಅವಶ್ಯಕತೆಯಿದ್ದು, ಕೈಗಾರಿಕಾ ವಸಾಹತು ಕೇಂದ್ರಕ್ಕೆ ಇನ್ನೂ ಜಾಗ ವಿಸ್ತರಣೆಯಾಗಬೇಕು. ಕೋವಿಡ್ ಸಮಯದಲ್ಲಿ ಕೈಗಾರಿಕೋದ್ಯಮಿಗಳು ಸಂಕಷ್ಟ ಎದುರಿಸಿದ್ದಾರೆ. ಹೊಸ ಕೈಗಾರಿಕೆ ಸ್ಥಾಪನೆಗೆ ಸುಮಾರು ೫೦೦ಕ್ಕೂ ಅಧಿಕ ಅರ್ಜಿಗಳು ಬಂದಿವೆ. ರಾಜ್ಯ ಸಣ್ಣ ಕೈಗಾರಿಕೆ ಸಂಘ ಸರ್ಕಾರದ ಜತೆ ಮಾತುಕತೆ ನಡೆಸಿ, ಲೀಸ್ ಮೇಲೆ ಆದರೂ ಜಾಗ ಒದಗಿಸಲು ಪ್ರಯತ್ನ ಮಾಡಬೇಕು ಎಂದು ವಿನಂತಿಸಿದರು.

ಕಟ್ಟಡ ಕಾರ್ಮಿಕರನ್ನು ಮಾತ್ರ ಕಾರ್ಮಿಕರನ್ನಾಗಿ ಕಾರ್ಮಿಕ ಇಲಾಖೆ ಗುರುತಿಸಿದೆ. ದೀರ್ಘ ಕಾಲದಲ್ಲಿ ಕೈಗಾರಿಕಾ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅವರನ್ನು ಕಾರ್ಮಿಕರು ಎಂದು ಪರಿಗಣಿಸಬೇಕು. ಸರ್ಕಾರದಿಂದ ಸೌಲಭ್ಯ ದೊರಕಿಸಲು ಸಹಕರಿಸಬೇಕು. ಕುಂದು-ಕೊರತೆ ಹೇಳಿದಾಗ ಮಾತ್ರ ಸಮಸ್ಯೆ ಬಗೆಹರಿಯಲು ಸಾಧ್ಯ ಎಂದರು.

ಸಣ್ಣ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಎಚ್.ವಿ. ಜಯಂತ ಮಾತನಾಡಿ, ಎಂ.ಎಸ್.ಎಂ.ಇ.ಯಿಂದ ಉದ್ಯೋಗವಿದ್ದು, ಅದಕ್ಕೆ ಉತ್ತೇಜನ ನೀಡಲಾಗುತ್ತಿದೆ. ಉದ್ಯೋಗಾವಕಾಶ ಲಭಿಸುತ್ತದೆ. ಹಲವಾರು ತೊಂದರೆ ಎಂ.ಎಸ್.ಎಂ.ಇ. ಎದುರಿಸುತ್ತಿದ್ದು, ಹೊರ ಜಗತ್ತಿನಲ್ಲಿ ಸ್ಪರ್ಧೆ ನೀಡಬೇಕಾದರೆ ತಂತ್ರಾಂಶ ಅಳವಡಿಸಿಕೊಳ್ಳುವುದು ಅವಶ್ಯವಾಗಿದೆ ಎಂದರು.

ಉತ್ತರಕನ್ನಡ ಉದ್ಯಮಗಳು ಕಡಿಮೆಯಿದ್ದು, ಬೃಹತ್ ಉದ್ಯಮಗಳಿಲ್ಲ. ಸಣ್ಣ ಕೈಗಾರಿಕೆಯನ್ನೇ ನಂಬಿದ್ದಾರೆ. ಜಿಲ್ಲೆಯಲ್ಲಿ ಕೈಗಾರಿಕಾ ಭೂಮಿ ಅಭಿವೃದ್ಧಿ ಪಡಿಸಲು ಸಾಕಷ್ಟು ಸಮಸ್ಯೆಯಿದೆ. ಇಲ್ಲಿಯ ಕೈಗಾರಿಕೋದ್ಯಮಿಗಳಿಗೆ ಅನುಕೂಲವಾಗುವ ರೂಪುರೇಷೆ ಸಿದ್ಧಪಡಿಬೇಕು ಎಂದು ಹೇಳಿದರು.

ಮಂಗಳೂರು ವಿಭಾಗದ ವಿಟಿಪಿಸಿ ಉಪ ನಿರ್ದೇಶಕ ಮಂಜುನಾಥ ಹೆಗಡೆ ಮಾತನಾಡಿ, ರಾಜ್ಯ ಹಾಗೂ ದೇಶದಲ್ಲಿ ಮಾತ್ರ ವಸ್ತು ರಫ್ತು ಆಗುವುದರ ಜತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ರಫ್ತಾಗುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಕಾಸಿಯಾ ಅಧ್ಯಕ್ಷ ಎಂ.ಜಿ. ರಾಜಗೋಪಾಲ ಅಧ್ಯಕ್ಷತೆ ವಹಿಸಿದ್ದರು. ಕಾಸಿಯಾ ಉಪಾಧ್ಯಕ್ಷ ಗಣೇಶ ರಾವ್, ಖಜಾಂಚಿ ಮಂಜುನಾಥ ಎಚ್., ಪ್ರಮುಖರಾದ ಮಹಮ್ಮದ್ ರಫೀಕ್ ಮತ್ತಿತರರು ಇದ್ದರು. ಕಾಶಿಯಾ ಕಾರ್ಯದರ್ಶಿ ಸುರೇಶ ಸಾಗರ ನಿರೂಪಿಸಿದರು.