ವೈಚಾರಿಕ ಜಾಗೃತಿ ಮಹಿಳೆಯರಿಂದಲೇ ಮೂಡಲಿ: ಡಾ. ರಾಮಚಂದ್ರಪ್ಪ

| Published : Jul 28 2025, 12:31 AM IST

ವೈಚಾರಿಕ ಜಾಗೃತಿ ಮಹಿಳೆಯರಿಂದಲೇ ಮೂಡಲಿ: ಡಾ. ರಾಮಚಂದ್ರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಕುಕನೂರು ತಾಲೂಕಿನ ದ್ಯಾಂಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶ್ರೀ ಕಾವ್ಯಾನಂದ ಮಹಿಳಾ ಅಭಿಮಾನಿ ಬಳಗ, ಮಾನವ ಬಂಧುತ್ವ ವೇದಿಕೆ ಭಾನುವಾರ ಆಯೋಜಿಸಿದ್ದ ಮನೆ ಮನೆಯಲ್ಲಿ ಬಸವ ಪಂಚಮಿ ಕಾರ್ಯಕ್ರಮವನ್ನು ಮಕ್ಕಳಿಗೆ ಹಾಲು ಕುಡಿಸುವ ಮೂಲಕ ಉದ್ಘಾಟಿಸಲಾಯಿತು.

ಕುಕನೂರು: ಮನೆಯಲ್ಲಿ ಮಹಿಳೆಯ ಪಾತ್ರ ಮಹತ್ವದಾಗಿದ್ದು, ಮೌಢ್ಯ ತೆಗೆದು ಹಾಕಿ ವೈಚಾರಿಕ ಜಾಗೃತಿ ಮೂಡಿಸಲು ಮಹಿಳೆಯ ಪಾತ್ರ ಮಹತ್ವದಾಗಿದೆ ಎಂದು ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಡಾ. ಎ.ಬಿ. ರಾಮಚಂದ್ರಪ್ಪ ಹೇಳಿದರು.

ತಾಲೂಕಿನ ದ್ಯಾಂಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶ್ರೀ ಕಾವ್ಯಾನಂದ ಮಹಿಳಾ ಅಭಿಮಾನಿ ಬಳಗ, ಮಾನವ ಬಂಧುತ್ವ ವೇದಿಕೆ ಭಾನುವಾರ ಆಯೋಜಿಸಿದ್ದ ಮನೆ ಮನೆಯಲ್ಲಿ ಬಸವ ಪಂಚಮಿ ಕಾರ್ಯಕ್ರಮವನ್ನು ಮಕ್ಕಳಿಗೆ ಹಾಲು ಕುಡಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಅನಾದಿ ಕಾಲದಿಂದಲೇ ಕೆಲವರು ಮೌಢ್ಯ ಬಿತ್ತುತ್ತಲೇ ಬರುತ್ತಿದ್ದಾರೆ ಎಂದು ಹೇಳಿದರು. ಬಸವಣ್ಣನವರು ಮೌಢ್ಯ, ಕಂದಾಚಾರಗಳನ್ನು ವಿರೋಧ ಮಾಡಿದವರು. ವೈದಿಕ ಧರ್ಮ ನಿರಂತರವಾಗಿ ಇಂತಹ ಶೋಷಣೆ ಮಾಡುತ್ತಾ ಬಂದಿದೆ. ನಾಗರಹಾವಿನ ಹುತ್ತಕ್ಕೆ ಹಾಲು ಹಾಕುವ ಮೂಲಕ ಲಕ್ಷಾಂತರ ಲೀಟರ್ ಹಾಲು ಹಾಳು ಮಾಡಲಾಗುತ್ತದೆ. ಹಾವು ಮಾಂಸಾಹಾರಿಯಾಗಿದ್ದು, ಹಾಲು ಕುಡಿಯುವುದಿಲ್ಲ. ಜನರಲ್ಲಿ ಮೂಢನಂಬಿಕೆ ಬಿತ್ತಿದ್ದರಿಂದ ಇಂದಿಗೂ ಇಂತಹ ಆಚರಣೆಯಿಂದ ಹೊರ ಬರುತ್ತಿಲ್ಲ. ಎಷ್ಟೋ ಜನರು ಹಸಿವಿನಿಂದ ಬಳಲುತ್ತಿದ್ದಾರೆ. ಅಂತಹ ಜನರಿಗೆ ಹಾಲು ನೀಡಬೇಕು. ಅಲ್ಲದೇ ಅಪೌಷ್ಟಿಕತೆಯಿಂದ ಇರುವ ಮಕ್ಕಳಿಗೆ ಹಾಲು ಕೊಡಬೇಕು. ಅಂದಾಗ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಇನ್ನೂ ದೇವರ ಮೂರ್ತಿಯನ್ನು ತುಪ್ಪ, ಹಾಲು ಹಾಗೂ ಜೇನುತುಪ್ಪದಿಂದ ತೊಳೆಯುತ್ತಾರೆ. ಇದು ಕೂಡ ಮೌಢ್ಯದಿಂದ ಕೂಡಿದೆ. ಮಠಗಳು ಮೌಢ್ಯ ಬಿತ್ತುವ ಕಾರ್ಯ ಮಾಡುತ್ತಿದ್ದವು. ಮಾನವ ಬಂಧುತ್ವ ವೇದಿಕೆ ಇಂತಹ ಆಚರಣೆ ವಿರುದ್ಧ ಚಳವಳಿ ಪ್ರಾರಂಭಿಸಿದ ಮೇಲೆ ಅನೇಕ ಮಠಗಳು ಮೌಢ್ಯ ಆಚರಣೆ ವಿರೋಧಿಸಲು ಕೈ ಜೋಡಿಸುತ್ತವೆ ಎಂದರು.

ಕೊರೋನಾ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಾಂಕ್ರಾಮಿಕ ರೋಗ ತಡೆಗಟ್ಟುವ ಬದಲಿಗೆ ತಟ್ಟೆ, ಗಂಟೆ ಹಾಗೂ ದೀಪ ಹಂಚಿ ಎಂದು ಹೇಳಿದರು. ಇದರಿಂದ ಅಕ್ಷರಸ್ಥರು ಇಂತಹ ಕಾರ್ಯ ಮಾಡಿದರು. ಮಹಿಳೆಯರಿಂದ ವೈಚಾರಿಕ ಜಾಗೃತಿ ಮೂಡಬೇಕು ಎಂದರು.

ಲಡಾಯಿ ಪ್ರಕಾಶನದ ಬಸವರಾಜ ಸೂಳಿಭಾವಿ ಮಾತನಾಡಿ, ಸಾಮಾಜಿಕ ಸಾಮರಸ್ಯ ಬೆಳೆಯಲು ಬಸವ ಪಂಚಮಿ ಕಾರ್ಯಕ್ರಮ ಪ್ರಮುಖವಾಗಿದೆ. ಬಂಧುತ್ವ ವೇದಿಕೆ ಮೌಢ್ಯ, ಕಂದಾಚಾರ ವಿರೋಧಿ ಜಾಗೃತಿ ಮೂಡಿಸುತ್ತದೆ. ಮನುಷ್ಯ ಹಸಿದವರ ಜತೆಗೆ ನಿಲ್ಲಬೇಕು. ಉಂಡವರ ಜತೆ ಅಲ್ಲ ಎಂದರು.

ಅನ್ನದಾನೀಶ್ವರ ಶಾಖಾಮಠದ ಡಾ. ಮಹಾದೇವ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಮಾನವ ಬಂಧುತ್ವ ವೇದಿಕೆ ಬಸವ, ಬುದ್ಧ, ಅಂಬೇಡ್ಕರ್ ಚಿಂತನೆಗಳನ್ನು ನಡೆಸಿಕೊಂಡು ಬರುತ್ತದೆ. ಬಸವಣ್ಣನವರು ಕೂಡ ಕಲ್ಲು ನಾಗರಕ್ಕೆ ಹಾಲು ಹಾಕುವ ಕುರಿತು ವಚನದ ಮೂಲಕ ಜಾಗೃತಿ ಮೂಡಿಸಿದರು. ಬಸವಣ್ಣನವರ ವಿಚಾರ ಇರುವವರು ಸೋತಿಲ್ಲ ಎಂದರು.

ನಿವೃತ್ತ ಮುಖ್ಯ ಶಿಕ್ಷಕಿ ರತ್ನಮ್ಮ ರತ್ನಾಕರ ತಳವಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಿಳಾ ಮಾನವ ಬಂಧುತ್ವ ವೇದಿಕೆಯ ಪ್ರೇಮಾ ಎಸ್. ಮುದಗಲ್, ನಿವೃತ್ತ ಅಧಿಕಾರಿ ಸಿದ್ದಮ್ಮ ಪಾಟೀಲ್, ಎಸ್‌ಡಿಎಂಸಿ ಅಧ್ಯಕ್ಷ ಶಿವಬಸಪ್ಪ ನೋಟಗಾರ, ವಿಸ್ತಾರ ಸಂಸ್ಥೆ ಸಹ ನಿರ್ದೇಶಕ ಡಾ. ನಾಜರ್ ಪಿ.ಎಸ್., ಗ್ರಾಪಂ ಅಧ್ಯಕ್ಷೆ ಮಂಜುಳಾ ಮಾಲಗಿತ್ತಿ, ಸದಸ್ಯೆ ಬುಡ್ಡಮ್ಮ ಮರಡಿ, ಪ್ರಮುಖರಾದ ಸರೋಜಾ ಬಾಕಳೆ, ಸಾವಿತ್ರಿ ಮರಡಿ, ಗಂಗಮ್ಮ ಹುಡೇದ, ಅನ್ನಪೂರ್ಣಮ್ಮ ಹುಣಸಿಮರದ ಇತರರಿದ್ದರು.