ವಿದ್ಯಾರ್ಥಿಗಳಲ್ಲಿ ದೇಶ ಭಕ್ತಿ ಬಿತ್ತುವ ಕಾರ್ಯವಾಗಲಿ

| Published : Aug 10 2024, 01:37 AM IST

ಸಾರಾಂಶ

ವಿಶಾಲ ಭಾರತದ ಏಕತೆಯ ಮೂಲವೇ ದೇಶಭಕ್ತಿ. ಅಂತಹ ದೇಶಭಕ್ತಿಯನ್ನು ಬಿತ್ತುವ ಕಾರ್ಯ ಶಾಲೆಗಳಲ್ಲಿಯೇ ಆಗಬೇಕು

ಲಕ್ಷ್ಮೇಶ್ವರ: ವಿಶಾಲ ಭಾರತದ ಏಕತೆಯ ಮೂಲವೇ ದೇಶಭಕ್ತಿ. ಅಂತಹ ದೇಶಭಕ್ತಿಯನ್ನು ಬಿತ್ತುವ ಕಾರ್ಯ ಶಾಲೆಗಳಲ್ಲಿಯೇ ಆಗಬೇಕು ಎಂದು ತಹಸೀಲ್ದಾರ್ ವಾಸುದೇವ ಸ್ವಾಮಿ ಹೇಳಿದರು.

ಅವರು ಲಕ್ಷ್ಮೇಶ್ವರ ತಾಲೂಕಾಡಳಿತ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಆಶ್ರಯದಲ್ಲಿ ಎಂಪಿಕೆಜಿಎಸ್ ಶಾಲೆಯಲ್ಲಿನ ದಕ್ಷಿಣ ಕ್ಲಸ್ಟರ್‌ನಲ್ಲಿ ಹಮ್ಮಿಕೊಳ್ಳಲಾದ ೭೮ನೇ ಸ್ವಾತಂತ್ರ‍್ಯ ದಿನಾಚರಣೆಯ ಅಂಗವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ದೇಶಭಕ್ತಿ ಗೀತೆ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಲಕ್ಷ್ಮೇಶ್ವರ ಪಟ್ಟಣದ ಪ್ರೌಢಶಾಲಾ ಮಟ್ಟದ ವಿದ್ಯಾರ್ಥಿಗಳಿಗೆ ದೇಶಭಕ್ತಿ ಗೀತೆ ಸ್ಪರ್ಧೆಯನ್ನು ತಹಸೀಲ್ದಾರ್‌ ದೇಶಭಕ್ತಿ ಗೀತೆ ಹಾಡುವ ಮೂಲಕ ಉದ್ಘಾಟಿಸಿದರು.

ಈ ವೇಳೆ ಲಕ್ಷ್ಮೇಶ್ವರ ತಾಪಂನ ಇಓ ಕೃಷ್ಣಪ್ಪ ಧರ್ಮರ ದೇಶಭಕ್ತಿಯೊಂದನ್ನು ಹಾಡಿ ನಂತರ ಮಾತನಾಡಿ, ಸಂಗೀತದಿಂದ ಮನಸ್ಸುಗಳನ್ನು ಕಟ್ಟಬಹುದು. ಅದರಲ್ಲೂ ದೇಶಭಕ್ತಿಯ ಸಂಗೀತ ಪ್ರಸ್ತುತಪಡಿಸುವುದರ ಮೂಲಕ ದೇಶ ಒಗ್ಗೂಡಿಸಬಹುದು ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ ಶಾಲೆಯ ಮುಖ್ಯೋಪಾಧ್ಯಾಯ ಬಿ.ಎಂ. ಕುಂಬಾರ ಮಾತನಾಡಿ, ಶಾಲೆಗಳಲ್ಲಿ ದೇಶಭಕ್ತಿ ಬಿತ್ತುವ ಕಾರ್ಯ ದೇಶದ ಎಲ್ಲ ಸಮಸ್ಯೆಗಳಿಗೆ ಪರಿಹಾರ ಆಗಬಲ್ಲದು ಎಂದು ಹೇಳಿದರು.

ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಈಶ್ವರ ಮೆಡ್ಲೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ವೇಳೆ ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ಎಂ.ಬಿ. ಹೊಸಮನಿ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಡಿ. ಕಲ್ಲಣ್ಣವರ, ನಿರ್ಣಾಯಕರಾಗಿದ್ದ ಸಂಗೀತ ವಿದ್ವಾಂಸ ಹಾಗೂ ಶಿಕ್ಷಕ ಡಾ. ಅರ್ಜುನ ವಠಾರ, ಸಿ.ಆರ್.ಪಿ ಚಂದ್ರಶೇಖರ ವಡಕಣ್ಣವರ, ಜ್ಯೋತಿ ಗಾಯಕವಾಡ, ವಿಕಲಚೇತನ ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್.ಎಂ. ಶಿರಹಟ್ಟಿ ಇದ್ದರು.

ಲಕ್ಷ್ಮೇಶ್ವರ ದಕ್ಷಿಣ ವಲಯದ ಸಿ.ಆರ್.ಪಿ ಸತೀಶ್ ಬೋಮಲೆ ನಿರೂಪಿಸಿದರು. ಉತ್ತರ ವಲಯದ ಸಿ.ಆರ್.ಪಿ ಉಮೇಶ ನೇಕಾರ ಸ್ವಾಗತಿಸಿದರು. ಉರ್ದು ಸಿ.ಆರ್.ಪಿ ಎನ್. ಎ. ಮುಲ್ಲಾ ವಂದಿಸಿದರು.

ಲಕ್ಷ್ಮೇಶ್ವರ ನಗರ ವ್ಯಾಪ್ತಿಯ ೧೬ ಪ್ರೌಢಶಾಲೆಗಳ ಸುಮಾರು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ದೇಶಭಕ್ತಿ ಉದ್ದೀಪನಗೊಳಿಸುವ ಗೀತೆಗಳನ್ನು ಪ್ರಸ್ತುತಪಡಿಸಿದರು. ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರು, ಸಹ ಶಿಕ್ಷಕರು ಪಾಲ್ಗೊಂಡಿದ್ದರು.

ವಿಜೇತರಿಗೆ ಬಹುಮಾನ ಹಾಗೂ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ತಾಲೂಕು ಕ್ರೀಡಾಂಗಣದಲ್ಲಿ ಜರುಗುವ ಸ್ವಾತಂತ್ರ‍್ಯ ದಿನೋತ್ಸವ ಕಾರ್ಯಕ್ರಮದಲ್ಲಿ ವಿತರಿಸಲಾಗುವದು.

ಫಲಿತಾಂಶ: ಪ್ರಥಮ-ಪೂರ್ಣಿಮಾ ಹಾಗೂ ಸಂಗಡಿಗರು-ಸ್ಕೂಲ್ ಚಂದನ

ದ್ವಿತೀಯ-ಕೃಪಾ ಕುಲಕರ್ಣಿ ಹಾಗೂ ಸಂಗಡಿಗರು- ಆಕ್ಸಫರ್ಡ ಸ್ಕೂಲ್

ತೃತೀಯ-(ಎರಡು ಶಾಲೆಗಳು) ಪಂಚಮಿ ಅಂಬಿಗೇರ ಹಾಗೂ ಸಂಗಡಿಗರು, ಯುನಿಕ್ ಸ್ಕೂಲ್

ರೇಣುಕಾ ಧರ್ಮದಾಸ ಹಾಗೂ ಸಂಗಡಿಗರು-ಎಸ್.ಟಿ.ಪಿ.ಎಂ.ಬಿ ಆಂಗ್ಲ ಮಾಧ್ಯಮ ಶಾಲೆ