ಸಾರಾಂಶ
ಕನ್ನಡಪ್ರಭ ವಾರ್ತೆ ಕನಕಗಿರಿ
ಪರಿಸರ ಉಳಿಸಿ, ಬೆಳೆಸಬೇಕೆನ್ನುವುದು ನಮ್ಮ ಧ್ಯೇಯವಾಗಬೇಕೆ ಹೊರತು ಮಾತಿಗೆ ಸೀಮಿತವಾಗಬಾರದು ಎಂದು ತಾಪಂ ಕಾರ್ಯನಿರ್ವಾಹಕಾಧಿಕಾರಿ ಎಲ್. ವೀರೇಂದ್ರಕುಮಾರ್ ಹೇಳಿದರು.ತಾಲೂಕಿನ ಚಿಕ್ಕಡಂಕನಕಲ್ ಗ್ರಾಪಂ ವ್ಯಾಪ್ತಿಯ ಚಿರ್ಚನಗುಡ್ಡ ತಾಂಡಾ ಬಳಿ ಅಮೃತ ಸರೋವರದ ದಂಡೆಯ ಮೇಲೆ ಸಸಿಗಳನ್ನು ನೆಡುವ ಮೂಲಕ ಬುಧವಾರ ವಿಶ್ವ ಪರಿಸರ ದಿನಕ್ಕೆ ಚಾಲನೆ ನೀಡಿ ಮಾತನಾಡಿದರು.ಪ್ರತಿ ವರ್ಷ ಹವಾಮಾನ ಬದಲಾವಣೆ ಹಾಗೂ ಜಾಗತಿಕ ತಾಪಮಾನ ಹೆಚ್ಚಳದಿಂದ ಅರಣ್ಯ ನಾಶದವರೆಗಿನ ಸಮಸ್ಯೆ ಗುರಿಯಾಗಿಟ್ಟುಕೊಂಡು ವಿಶ್ವ ಪರಿಸರ ದಿನ ಆಚರಿಸಲಾಗುತ್ತಿದ್ದು, ಇನ್ನಾದರೂ ಪರಿಸರ ಹಾಳು ಮಾಡುವುದನ್ನು ನಿಲ್ಲಿಸಿ, ಪ್ರಕೃತಿ ನಾಶಕ್ಕೆ ಕಡಿವಾಣ ಹಾಕಿ, ಹೆಚ್ಚು ಹೆಚ್ಚು ಗಿಡಗಳನ್ನು ಬೆಳೆಸಿ, ಮರಗಳನ್ನು ಉಳಿಸಿ ನಿಸರ್ಗ ದೇವತೆಯ ಒಡಲು ಹಸಿರಾಗುವಂತೆ ನೋಡಿಕೊಳ್ಳಬೇಕು ಎಂದರು.
ಈ ವೇಳೆ ಮಹಾಗನಿ, ಹೊಂಗೆ, ಜಂಬೂ ನೇರಳೆ, ಹಲಸಿನ ಸಸಿಗಳನ್ನು ಅಮೃತ ಸರೋವರದ ದಂಡೆಯ ಮೇಲೆ ನೆಡಲಾಯಿತು.ನಂತರ ನವಲಿ ಗ್ರಾಪಂ ಆವರಣದಲ್ಲಿಯೂ ಸಸಿ ನೆಟ್ಟು ಪರಿಸರ ದಿನವನ್ನು ಆಚರಿಸಲಾಯಿತು.
ವಲಯ ಅರಣ್ಯಾಧಿಕಾರಿ ರಾಘವೇಂದ್ರ, ಸಹಾಯಕ ನಿರ್ದೇಶಕ ಚಂದ್ರಶೇಖರ್ ಕಂದಕೂರ, ಪಿಡಿಒ ಈರಪ್ಪ, ಗ್ರಾ.ಪಂ ಅಧ್ಯಕ್ಷೆ ನೀಲಮ್ಮ, ಉಪಾಧ್ಯಕ್ಷ ರಾಮಚಂದ್ರ ಸೇರಿ ಸದಸ್ಯರು ಹಾಗೂ ಅರಣ್ಯ ಇಲಾಖೆಯ ಕವಿತಾ ನಾಯಕ, ಮಹಾಂತೇಶ, ತಾಲೂಕು ಐಇಸಿ ಸಂಯೋಜಕ ಶಿವಕುಮಾರ, ಗ್ರಾಪಂ ಸಿಬ್ಬಂದಿ ಇದ್ದರು.ಪ್ಲಾಸ್ಟಿಕ್ ನಿಷೇಧದಿಂದ ಪರಿಸರ ಸಂರಕ್ಷಣೆ ಸಾಧ್ಯ:
ಪ್ಲಾಸ್ಟಿಕ್ ನಿಷೇಧವಾದರೆ ಪರಿಸರ ಸಂರಕ್ಷಣೆಯಾಗಲಿದೆ ಎಂದು ಪಿಐ ಎಂ.ಡಿ. ಪೈಜುಲ್ಲಾ ಹೇಳಿದರು.ಕನಕಗಿರಿ ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮಳೆ ನೀರು ಭೂಮಿಯಲ್ಲಿ ಇಂಗುತ್ತಿಲ್ಲ. ಸಿಸಿ ರಸ್ತೆ ನಿರ್ಮಾಣ ಮತ್ತು ಪ್ಲಾಸ್ಟಿಕ್ ಹಾವಳಿಯಿಂದಾಗಿ ತಾಪಮಾನ ಏರಿಕೆಯಾಗುತ್ತಿದೆ. ಪ್ಲಾಸ್ಟಿಕ್ ಸಂಪೂರ್ಣವಾಗಿ ನಿಷೇಧವಾಗುವುದರ ಜತೆಗೆ ಭೂಮಿಯಲ್ಲಿಯೇ ಮಳೆ ನೀರು ಇಂಗುವಂತಾದರೆ ಪರಸರ ಸಂರಕ್ಷಣೆಯಾಗಲಿದೆ ಎಂದರು.ಅಲ್ಲದೇ ಪರಿಸರ ಒಂದೇ ದಿನಕ್ಕೆ ಸೀಮಿತವಾಗದೆ ದಿನ ನಿತ್ಯ ಅದರ ಪಾಲನೆ, ಪೋಷಣೆ ಮಾಡುವುದು ನಮ್ಮ ಕಾಯಕವಾಗಬೇಕು. ಪ್ರತಿಯೊಬ್ಬರು ಸಸಿ ನೆಟ್ಟು ಬೆಳೆಸುವಂತಾದರೆ, ನಮ್ಮ ಪ್ರದೇಶ ಹಚ್ಚ ಹಸಿರಿನಿಂದ ಕಂಗೊಳಿಸಲಿದೆ ಎಂದು ತಿಳಿಸಿದರು.ಎಎಸ್ಐ ಲಕ್ಕಪ್ಪ, ಲೀಸ್ ಇಲಾಖೆಯ ಪರಶುರಾಮ, ಸಿದ್ರಾಮಪ್ಪ ಕೊಪ್ಪಳ, ಶ್ರೀಕಾಂತ, ಪ್ರಭಾಕರ, ಸೋಮಶೇಖರ, ಬೈಲಪ್ಪ, ಗವಿಸಿದ್ದಪ್ಪ, ಮುತ್ತಣ್ಣ, ಬಸವರಾಜ, ರಮೇಶ ಚೌಡ್ಕಿ ಸೇರಿದಂತೆ ಗೃಹ ರಕ್ಷಕದಳದ ಸಿಬ್ಬಂದಿ ಇದ್ದರು.