ಬೇಂದ್ರೆ ಸಾಹಿತ್ಯ ಮನೆ ಮನೆಗೆ ತಲುಪಿಸುವ ಕಾರ್ಯವಾಗಲಿ

| Published : Feb 01 2024, 02:01 AM IST

ಸಾರಾಂಶ

ಬೇಂದ್ರೆಯವರ ಕಾವ್ಯಗಳು ಕನ್ನಡ ಸಾಹಿತ್ಯಕ್ಕೆ ನೀಡಿದ ಅಮೂಲ್ಯ ರತ್ನಗಳಾಗಿವೆ. ಬೇಂದ್ರೆಯವರ ಜೀವನದಲ್ಲಿ ಅನುಭವಿಸಿದ ಕಷ್ಟಗಳನ್ನು ಹಾಡಿನ ರೂಪದಲ್ಲಿ ಬರೆದು ಕನ್ನಡ ಸಾಹಿತ್ಯಕ್ಕೆ ಅರ್ಪಿಸಿದರು

ಲಕ್ಷ್ಮೇಶ್ವರ: ಕನ್ನಡ ಸಾಹಿತ್ಯಕ್ಕೆ ದ.ರಾ. ಬೇಂದ್ರೆಯವರ ಕೊಡುಗೆ ಅಪಾರ. ಶಬ್ದ ಗಾರುಡಿಗ, ಜನಪರ ಕವಿ ಬೇಂದ್ರಯವರ ಪದ್ಯಗಳನ್ನು ಹಾಡಿ ಅನುಭವಿಸಿ ಸವಿಯುವುದು ಪ್ರಮುಖವಾಗಿದೆ ಎಂದು ಮಕ್ಕಳ ಸಾಹಿತಿ ನಾಗರಾಜ ಹಣಗಿ ಹೇಳಿದರು.

ಸಮೀಪದ ಹುಲ್ಲೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿರುವ ಮಾಸದ ಮಾತು ಮಾಲಿಕೆಯಲ್ಲಿ ವರಕವಿ ದ.ರಾ.ಬೇಂದ್ರೆ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.

ಕನ್ನಡ ಸಾಹಿತ್ಯ ಲೋಕದಲ್ಲಿ ದ.ರಾ. ಬೇಂದ್ರೆಯವರ ಹೆಸರು ಪ್ರಮುಖವಾಗಿ ಎದ್ದು ಕಾಣುತ್ತದೆ. ಕನ್ನಡ ಸಾಹಿತ್ಯಕ್ಕೆ ಜ್ಞಾನಪೀಠ ಪುರಸ್ಕಾರ ಗೌರವ ದೊರೆಯುವಂತೆ ಮಾಡಿದ್ದು ಕನ್ನಡ ಸಾಹಿತ್ಯಕ್ಕೆ ಸಂದ ಗೌರವವಾಗಿದೆ. ದ.ರಾ.ಬೇಂದ್ರೆಯವರು ಬಡತನದ ಬೇಗೆಯಲ್ಲಿ ಬೆಂದು ಬೇಂದ್ರೆಯಾಗಿದ್ದರು. ಬೇಂದ್ರೆಯವರು ಜನಪದ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡುವ ಮೂಲಕ ಕನ್ನಡ ಸಾಹಿತ್ಯಕ್ಕೆ ಜನಪದದ ಬೇರಿನೊಂದಿಗೆ ಹಾಸು ಹೊಕ್ಕಾಗುವಂತೆ ಕಾವ್ಯ ರಚನೆ ಮಾಡುವ ಮೂಲಕ ಕನ್ನಡದ ಸೊಗಡನ್ನು ಹೆಚ್ಚಿಸುವಂತೆ ಮಾಡಿದ್ದು ಅವರ ಹೆಗ್ಗಳಿಕೆ.ಕನ್ನಡ ಭಾಷೆಯಲ್ಲಿನ ಗ್ರಾಮ್ಯ ಶಬ್ದಗಳನ್ನು ತಮ್ಮ ಕವನಗಳಲ್ಲಿ ಬಳಸಿಕೊಳ್ಳುವ ಮೂಲಕ ಜನಪದಕ್ಕೆ ಒತ್ತು ನೀಡುವ ಕಾರ್ಯ ಮಾಡಿದರು. ಬೇಂದ್ರೆಯವರ ಕಾವ್ಯಗಳನ್ನು ಹಾಡುವ ಮೂಲಕ ಅನುಭವಿಸಿ ಸವಿಯುವುದು ಅಗತ್ಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮುಖ್ಯೋಪಾಧ್ಯಾಯ ಕೆ.ವೈ.ಮೇಲಿನಮನಿ ಮಾತನಾಡಿ, ಬೇಂದ್ರೆಯವರ ಕಾವ್ಯಗಳು ಕನ್ನಡ ಸಾಹಿತ್ಯಕ್ಕೆ ನೀಡಿದ ಅಮೂಲ್ಯ ರತ್ನಗಳಾಗಿವೆ. ಬೇಂದ್ರೆಯವರ ಜೀವನದಲ್ಲಿ ಅನುಭವಿಸಿದ ಕಷ್ಟಗಳನ್ನು ಹಾಡಿನ ರೂಪದಲ್ಲಿ ಬರೆದು ಕನ್ನಡ ಸಾಹಿತ್ಯಕ್ಕೆ ಅರ್ಪಿಸಿದರು.

ಸಮಾರಂಭದಲ್ಲಿ ಅಶೋಕ ಇಚ್ಚಂಗಿ ಬೇಂದ್ರೆಯವರ ಕುರಿತು ಮಾತನಾಡಿದರು.ಹಾಗೂ ಕಸಾಪ ಅಧ್ಯಕ್ಷ ಈಶ್ವರ ಮೆಡ್ಲೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಭೆಯಲ್ಲಿ ಗ್ರಾಪಂ ಸದಸ್ಯ ಪರಮೇಶ್ವರಗೌಡ ಪಾಟೀಲ, ಯಲ್ಲಪ್ಪ ನರಸೋಜಿ, ಮಾಜಿ ಉಪಾಧ್ಯಕ್ಷ ಮಾಬುಬಲಿ ಗಾಡಗೋಳಿ, ಸುರೇಶ ಸಾಸಲವಾಡ ಕಸಾಪ ವಿದ್ಯಾರ್ಥಿ ಘಟಕ ಉದ್ಘಾಟಿಸಿದರು.

ಶಿಕ್ಷಕ ಎಫ್.ಎಚ್. ನದಾಫ್ ಬೇಂದ್ರೆ ಗೀತ ಗಾಯನ ನಡೆಸಿಕೊಟ್ಟರು. ಪ್ರಾಥಮಿಕ ಶಾಲಾ ಶಿಕ್ಷಕ ಎಸ್.ಎಂ. ಲಮಾಣಿ, ಶಂಕ್ರಣ್ಣ ಮೂಕಿ, ಶಿವಾನಂದಯ್ಯ ಹಿರೇಮಠ, ಶಂಕ್ರಣ್ಣ ಮಾಗಡಿ, ಜಯಪ್ರಕಾಶ ಮುದಕಣ್ಣವರ, ಹಾಲೇಸಾಬ ನದಾಫ್, ಷಣ್ಮುಖ ಕೋಳಿವಾಡ ಇದ್ದರು. ಎಸ್‌.ವಿ.ಹುದ್ದಾರ ಸ್ವಾಗತಿಸಿದರು. ಮಂಜುನಾಥ ಚಾಕಲಬ್ಬಿ ನಿರೂಪಿಸಿದರು. ವಾಸುದೇವ ಮಡ್ಲಿ ವಂದಿಸಿದರು. ನಾಗರಾಜ ಮಜ್ಜಿಗುಡ್ಡ, ಬಿ.ಎಸ್.ಕೊಪ್ಪದ, ಗಿರೀಶ್ ಕಾಂಬಳೆ ಹಾಗೂ ಆರ್.ಎಸ್.ರಗಟಿ ಇದ್ದರು.