ಮುಂದಿನ ಪೀಳಿಗೆಗೆ ಸಂಸ್ಕೃತಿ ಒಯ್ಯುವ ಕೆಲಸವಾಗಲಿ

| Published : Feb 08 2025, 12:30 AM IST

ಸಾರಾಂಶ

ಚಿತ್ರದುರ್ಗದ ಮುರುಘಾಮಠ ಅನುಭವ ಮಂಟಪದಲ್ಲಿ ಶುಕ್ರವಾರ ಆರಂಭಗೊಂಡ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಸಚಿವ ಮಧು ಬಂಗಾರಪ್ಪ ಚಾಲನೆ ನೀಡಿದರು.

ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವ ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಕರೆಕನ್ನಡಪ್ರಭ ವಾರ್ತೆ ಚಿತ್ರದುರ್ಗ

ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಸಾಂಸ್ಕೃತಿಕ ರಾಯಬಾರಿಗಳಾಗಿ ಕಲೆ, ಸಂಸ್ಕೃತಿಯ ಮುಂದಿನ ಪೀಳಿಗೆಗೆ ಕೊಂಡ್ಯೊಯುವ ಕೆಲಸ ಮಾಡಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ನಗರದ ಮುರುಘರಾಜೇಂದ್ರ ಬೃಹನ್ಮಠದ ಅನುಭವ ಮಂಟಪದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಲ್ಲಾಡಳಿತ, ಜಿಪಂ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಎರಡು ದಿನಗಳ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮಕ್ಕೆ ಸರ್ಕಾರದಿಂದ ಹೆಚ್ಚಿನ ಅನುದಾನ ಕೊಡುವುದಿಲ್ಲ. ಈ ಕುರಿತು ಸಿಎಂ ಜತೆ ಚರ್ಚಿಸಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ದೊರೆಯುವ ಸಾಧ್ಯತೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅತಿ ಹೆಚ್ಚು ಸಂಸ್ಕೃತಿ, ಕಲೆ, ವಿಭಿನ್ನವಾದ ಭಾಷೆ ಇದ್ದರೂ ಒಂದೇ ನೆಲದಲ್ಲಿ ಬಾಳುವ ದೇಶ ಭಾರತ. ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮದಡಿ ಕ್ಲಸ್ಟರ್ ಮಟ್ಟ, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು, ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸುಮಾರು 1,200ಕ್ಕೂ ಹೆಚ್ಚು ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಸಂತಸ ತಂದಿದೆ. ಶಿಕ್ಷಣ, ಕಲೆ, ಸಂಸ್ಕೃತಿ ಇವುಗಳಲ್ಲಿ ನೆಂಟಸ್ಥಿಕೆ ಇರುವುದನ್ನು ಕಾಣಬಹುದಾಗಿದೆ ಎಂದರು.

ದ್ವಿತೀಯ ಪಿಯು ಪೂರೈಸಿದ ಮಕ್ಕಳು ನೀಟ್, ಸಿಇಟಿ ಪರೀಕ್ಷೆಗಾಗಿ ಕೋಚಿಂಗ್ ತರಗತಿಗಳಿಗೆ ಹೋಗಬೇಕಾಗುತ್ತದೆ. ಕೋಚಿಂಗ್‍ಗಾಗಿ ಸುಮಾರು 4 ರಿಂದ 5 ಲಕ್ಷದವರೆಗೆ ಶುಲ್ಕ ಪಾವತಿಸಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ದೇಶದಲ್ಲಿಯೇ ಪ್ರಥಮ ಬಾರಿಗೆ ನಮ್ಮ ರಾಜ್ಯದಲ್ಲಿ ಸುಮಾರು 25 ಸಾವಿರ ಮಕ್ಕಳಿಗೆ ನೀಟ್, ಸಿಇಟಿ ಸೇರಿದಂತೆ ವೃತ್ತಿಪರ ಕೋರ್ಸ್‍ಗಳಿಗೆ ಉಚಿತವಾಗಿ ತರಬೇತಿ ನೀಡುವ ಕಾರ್ಯಕ್ರಮವನ್ನು ಈಗಾಗಲೇ ಅನುಷ್ಠಾನಗೊಳಿಸಲಾಗಿದೆ ಎಂದು ಹೇಳಿದರು.

8, 9 ಹಾಗೂ 10ನೇ ತರಗತಿಯ ಮಕ್ಕಳಿಗೆ ಸ್ಕಿಲ್ ಅಟ್ ಸ್ಕೂಲ್ ಎಂಬ ಕಾರ್ಯಕ್ರಮವನ್ನು ಇದೇ ಮೊದಲಬಾರಿಗೆ ಪ್ರಾರಂಭ ಮಾಡಲಾಗುವುದು. ಇದರಿಂದ ಕಲಿಕೆಯ ಜೊತೆಗೆ ಪ್ರಾಯೋಗಿಕ ಜ್ಞಾನ ಪಡೆಯಬಹುದಾಗಿದೆ. ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಸಂಗೀತ, ಕಲೆ ಶಿಕ್ಷಕರ ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದ್ದು, ಮೊದಲ ಹಂತದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ನೇಮಕ ಮಾಡಿ, ಮುಂದಿನ ದಿನಗಳಲ್ಲಿ ಆರ್ಥಿಕ ವ್ಯವಸ್ಥೆ ನೋಡಿಕೊಂಡು, ಉಳಿದ ಶಾಲೆಗಳಿಗೂ ನೇಮಕ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಈ ವೇಳೆ ವಿಧಾನ ಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ್, ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ, ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಪಂ ಸಿಇಒ ಎಸ್.ಜೆ.ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಡಿಡಿಪಿಯು ಪುಟ್ಟಸ್ವಾಮಿ, ಡಯಟ್ ಪ್ರಾಂಶುಪಾಲ ನಾಸಿರುದ್ದೀನ್ ಇದ್ದರು.

ಹೊಸದಾಗಿ 15 ಸಾವಿರ ಶಿಕ್ಷಕರ ನೇಮಕ:

ಶಿಕ್ಷಣ ಇಲಾಖೆಗೆ ಈಗಾಗಲೇ 13 ಸಾವಿರ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗಿದ್ದು, ಹೊಸದಾಗಿ 15 ಸಾವಿರ ಶಿಕ್ಷಕರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು. ಇದರ ಜೊತೆಗೆ ಅನುದಾನಿತ ಶಾಲೆಗೆ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ ಶಿಕ್ಷಕ ಹುದ್ದೆಗಳಲ್ಲಿ ಶೇ.80ರಷ್ಟು ಶಿಕ್ಷಕರನ್ನು ಆದಷ್ಟು ಶೀಘ್ರ ನೇಮಕಾತಿ ಮಾಡಿ, ಶಿಕ್ಷಣವನ್ನು ಮೇಲ್ದರ್ಜೆಗೆ ಕೊಂಡ್ಯೊಯುವ ಕೆಲಸ ಮಾಡಲಾಗುವುದು ಎಂದರು.