ತುಂತುರು ಮಳೆಯಲಿ.... ಪಾರಂಪರಿಕ ಟಾಂಗಾದಲಿ...!

| Published : Oct 06 2024, 01:16 AM IST

ಸಾರಾಂಶ

ಮೈಸೂರಿಗೆ ಆಗಮಿಸುವ ಪ್ರವಾಸಿಗರು ಟಾಂಗಾ ಸವಾರಿ ಮಾಡದೆ ಹಿಂತಿರುಗುವುದಿಲ್ಲ ಆದ್ದರಿಂದ ಮೈಸೂರು ಎಂದರೆ ಟಾಂಗಾ, ಟಾಂಗಾ ಎಂದರೆ ಮೈಸೂರು ಎಂಬ ಪ್ರತೀತಿ ಈಗಲೂ ಇದೆ. ಹಾಗಾಗಿ ಸಾಂಪ್ರದಾಯಿಕ ಉಡುಗೆ ಮತ್ತು ಟಾಂಗಾ ಸವಾರಿ ಇವೆರಡನ್ನು ಒಂದುಗೂಡಿಸಿ ಪಾರಂಪರಿಕ ದಸರಾ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.

ಎಲ್.ಎಸ್. ಶ್ರೀಕಾಂತ್

ಕನ್ನಡಪ್ರಭ ವಾರ್ತೆ ಮೈಸೂರು

ತುಂತುರು ಮಳೆಯಲ್ಲಿ ಪಾರಂಪರಿಕ ಟಾಂಗಾ ಸವಾರಿಗೆ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಆಯುಕ್ತ ಎ.ದೇವರಾಜು ಅವರು ಪುರಭವನ ಆವರಣದಲ್ಲಿ ಪಾರಂಪರಿಕ ಉಡುಗೆಯಲ್ಲಿದ್ದ ಜೋಡಿಗಳಿಗೆ ಬಾಗಿನ ಕೊಡುವ ಮೂಲಕ ಚಾಲನೆ ನೀಡಿದರು.

ನಾನಾ ಜಿಲ್ಲೆಗಳಿಂದ ಆಗಮಿಸಿದಂತಹ ದಂಪತಿಗಳು ಮುಂಜಾನೆ ಸುರಿಯುತ್ತಿದ್ದ ತುಂತುರು ಮಳೆಯಲ್ಲಿ ವಿವಿಧ ಪ್ರಕಾರದ ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಎಲ್ಲರ ಕಣ್ಮನ ಸೆಳೆದರು.

ನಂತರ ದೇವರಾಜು ಮಾತನಾಡಿ, ನಮ್ಮ ಪರಂಪರೆಯನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ತೆಗೆದುಕೊಂಡು ಹೋಗುವ ಮಾಡಲಾಗುತ್ತಿದೆ ಎಂದರು.

ಮೈಸೂರಿಗೆ ಆಗಮಿಸುವ ಪ್ರವಾಸಿಗರು ಟಾಂಗಾ ಸವಾರಿ ಮಾಡದೆ ಹಿಂತಿರುಗುವುದಿಲ್ಲ ಆದ್ದರಿಂದ ಮೈಸೂರು ಎಂದರೆ ಟಾಂಗಾ, ಟಾಂಗಾ ಎಂದರೆ ಮೈಸೂರು ಎಂಬ ಪ್ರತೀತಿ ಈಗಲೂ ಇದೆ. ಹಾಗಾಗಿ ಸಾಂಪ್ರದಾಯಿಕ ಉಡುಗೆ ಮತ್ತು ಟಾಂಗಾ ಸವಾರಿ ಇವೆರಡನ್ನು ಒಂದುಗೂಡಿಸಿ ಪಾರಂಪರಿಕ ದಸರಾ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಎಂದರು.

25 ಟಾಂಗಾಗಳಲ್ಲಿ 40 ಜೋಡಿಗಳು ಭಾಗಿ:

25 ಟಾಂಗಾ ಗಾಡಿಗಳಲ್ಲಿ 40 ಜೋಡಿಗಳು ನಗರದ ಐತಿಹಾಸಿಕ ರಸ್ತೆಗಳಲ್ಲಿ ಸವಾರಿಯನ್ನು ಮಾಡಿದರು.

ಟಾಂಗಾ ಸವಾರಿಯಲ್ಲಿ ಮೈಸೂರು, ಶಿವಮೊಗ್ಗ, ಹಾಸನ, ಬೆಂಗಳೂರು ಹಾಗೂ ಇನ್ನಿತರೆ ಜಿಲ್ಲೆಗಳಿಂದ ನೋಂದಾಯಿತ ದಂಪತಿ ಆಯಾ ಜಿಲ್ಲೆಗಳ ಸಾಂಪ್ರದಾಯಿಕ ಉಡುಗೆಯ ಮೂಲಕ ಕಣ್ಮನ ಸೆಳೆದ ಕೊಡಗು, ಮೈಸೂರಿನ ಪಾರಂಪಾರಿಕ ಉಡುಗೆ ತೊಟ್ಟ ದಂಪತಿಯು ಮೈಸೂರು ಪೇಠ ರೇಷ್ಮೆ ಸೀರೆ ತೊಟ್ಟ ದಂಪತಿಗಳು ಹಾಗೂ ಕಿರಿಯ ವಯಸ್ಸಿನಿಂದ ಹಿರಿಯ ವಯಸ್ಸಿನ ಜೋಡಿಗಳು ಭಾಗಿಯಾಗಿ ಜನರ ಗಮನವನ್ನು ತಮ್ಮತ್ತ ಸೆಳೆದುಕೊಂಡರು.

ಸಂಪನ್ಮೂಲ ವ್ಯಕ್ತಿಯಾದ ಡಾ.ಎನ್.ಎಸ್. ರಂಗಾರಾಜು ಮತ್ತು ಇತಿಹಾಸ ಪ್ರಾಧ್ಯಾಪಕ ಡಾ.ಲ.ನ. ಸ್ವಾಮಿ ಅವರು ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ದಂಪತಿಗಳಿಗೆ ನಗರದ ಪ್ರಮುಖ ಪಾರಂಪರಿಕ ಕಟ್ಟಡಗಳ ಬಗ್ಗೆ ಮಾಹಿತಿ ನೀಡಿದರು.