ಸಾರಾಂಶ
ಕೂಡ್ಲಿಗಿ: ತಾಲೂಕಿನಲ್ಲಿ ನಡೆಯುವ ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿ ಶರವೇಗದಲ್ಲಿ ನಡೆಸುವ ಮೂಲಕ ಫೆಬ್ರವರಿ ಅಂತ್ಯದೊಳಗೆ ಮುಗಿಸಬೇಕು. ಗ್ರಾಮಗಳಲ್ಲಿ ನಡೆಯುವ ಕಾಮಗಾರಿಗೆ ಗ್ರಾಪಂ ಅಧ್ಯಕ್ಷರು, ಸದಸ್ಯರು, ಪಿಡಿಒಗಳು ಸಹಕಾರ ನೀಡಬೇಕು ಎಂದು ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಗ್ರಾಮೀಣ ಕುಡಿವ ನೀರು ಸರಬರಾಜು ಇಲಾಖೆ ಅಧಿಕಾರಿಗಳು ಹಾಗೂ ಗ್ರಾಪಂ ಪಿಡಿಒಗಳ ಸಭೆಯಲ್ಲಿ ಮಾತನಾಡಿದರು.ಮಾರ್ಚ್ ವೇಳೆಗೆ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆ ಇರುವುದರಿಮದ ಜಲಜೀವನ ಮಿಷನ್ ಕಾಮಗಾರಿಯು ಯಾವುದೇ ಅಡ್ಡಿ, ಆತಂಕಗಳಿಲ್ಲದೆ ಶೀಘ್ರವೇ ಸಾಕಾರಗೊಳ್ಳಬೇಕು. ತುಂಗಭದ್ರಾ ಜಲಾಶಯದಿಂದ ಸರಬರಾಜು ಆಗುವ ಶುದ್ಧ ಕುಡಿಯುವ ನೀರು ಮನೆ ಮನೆಗೂ ತಲುಪಬೇಕು. ಅಲ್ಲದೆ, ನೀರು ಪೋಲಾಗದಂತೆ ತಡೆಯಲು ಗ್ರಾಪಂಗಳಲ್ಲಿರುವ ನೀರುಗಂಟಿಗಳಿಗೆ ಪಿಡಿಒಗಳು ಸೂಚನೆ ನೀಡಬೇಕು. ಯಾವುದೇ ಕಾರಣಕ್ಕೂ ಜೆಜೆಎಂ ಕಾಮಗಾರಿ ನಿಲ್ಲದಂತೆ ಜಾಗ್ರತೆ ವಹಿಸುವಂತೆ ತಿಳಿಸಿದರು.
ಹಾರಕಬಾವಿ ಗ್ರಾಪಂ ವ್ಯಾಪ್ತಿಯ ಬಿಷ್ಣಹಳ್ಳಿ ಹೊರವಲಯದಲ್ಲಿ ೧೫- ೨೦ ಮನೆಗಳಿದ್ದು, ಅಲ್ಲಿಗೆ ಜಲಜೀವನ್ ಮಿಷನ್ ಯೋಜನೆಯಡಿ ನಳ ಸಂಪರ್ಕ ಕಲ್ಪಿಸುವಂತೆ ಬೇಡಿಕೆಯಿದೆ. ಬಿಷ್ಣಹಳ್ಳಿಯು ಹಾರಕಬಾವಿ ಗ್ರಾಪಂ ವ್ಯಾಪ್ತಿಯಲ್ಲಿದ್ದರೆ, ಹೊರವಲಯದಲ್ಲಿ ಮನೆಗಳಿರುವ ವ್ಯಾಪ್ತಿಯು ಕಾನಹೊಸಹಳ್ಳಿ ಗ್ರಾಪಂ ವ್ಯಾಪ್ತಿಗೆ ಸೇರಿದೆ. ಈ ಬಗ್ಗೆ ಏನು ಮಾಡುವುದು ಗೊತ್ತಾಗುತ್ತಿಲ್ಲ ಎಂದು ಹಾರಕಬಾವಿ ಪಿಡಿಒ ಜುಮ್ಮೋಬನಹಳ್ಳಿ ವೀರಣ್ಣ ಶಾಸಕರಿಗೆ ತಿಳಿಸಿದರು.ಗ್ರಾಮದ ಹೊರವಲಯದಲ್ಲಿ ೧೫- ೨೦ ಗುಂಪು ಮನೆಗಳಿದ್ದರೆ ಅಲ್ಲಿಗೆ ಜೆಜೆಎಂ ಯೋಜನೆಯಡಿ ನೀರು ಸರಬರಾಜು ಮಾಡಬೇಕೆಂದು ಗ್ರಾಮೀಣ ನೀರು ಸರಬರಾಜು ಅಧಿಕಾರಿಗಳಿಗೆ ಸೂಚಿಸಿದರು.
ಕೆಲವು ಹಳ್ಳಿಗಳಲ್ಲಿ ನೀರನ್ನು ಹೆಚ್ಚಾಗಿ ವ್ಯಯವಾಗುತ್ತಿದ್ದರೂ ಅದರ ನಿಯಂತ್ರಣ ಮಾಡುವುದಿಲ್ಲ. ಜಲಜೀವನ್ ಮಿಷನ್ ಯೋಜನೆಯಲ್ಲಿ ನೀರು ಪೋಲು ಮಾಡುವುದಕ್ಕೆ ಅವಕಾಶವಿಲ್ಲ. ಈ ಬಗ್ಗೆ ಗ್ರಾಪಂ ಪಿಡಿಒಗಳು ನೀರುಗಂಟಿಗಳ ಮೂಲಕ ಅದನ್ನು ಪೋಲು ನಿಯಂತ್ರಣ ಮಾಡಲು ಸೂಚಿಸಬೇಕೆಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಎಇಇ ಪ್ರಸನ್ನ ತಿಳಿಸಿದರು.ಆಗ ಶಾಸಕರು ಮಾತನಾಡಿ, ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಲು ಪಿಡಿಒಗಳು ಮುಂದಾಗಬೇಕು. ನೀರು ಅಮೂಲ್ಯ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಪಂ ಇಒ ವೈ. ರವಿಕುಮಾರ್, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾಗಳು, ತಾಲೂಕಿನ ಗ್ರಾಪಂ ಪಿಡಿಒಗಳು, ತಾಪಂ ಸಿಬ್ಬಂದಿ ಇದ್ದರು. ನಂತರ ಜೆಸ್ಕಾಂ, ಅರಣ್ಯ ಇಲಾಖೆ ಅಧಿಕಾರಿಗಳ ಪ್ರತ್ಯೇಕ ಸಭೆಯನ್ನು ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ನಡೆಸಿದರು.