ಸಾರಾಂಶ
ಧಾರವಾಡ: ಇಲ್ಲಿಯ ಮರಾಠಾ ವಿದ್ಯಾಪ್ರಸಾರಕ ಮಂಡಳದ ಆವರಣದಲ್ಲಿ ಶನಿವಾರ ಮಂಡಳದ ವೆಬ್‌ಸೈಟ್ ಉದ್ಘಾಟನೆ, ಆಡಳಿತ ಕಚೇರಿ, ಪದವಿಪೂರ್ವ ವಿಜ್ಞಾನ ಕಾಲೇಜಿನ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹಾಗೂ ಮೇಯರ್ ಜ್ಯೋತಿ ಪಾಟೀಲ್ ಚಾಲನೆ ನೀಡಿದರು.
ನಂತರ ಮಾತನಾಡಿದ ಸಚಿವ ಸಂತೋಷ ಲಾಡ್, ನೂರು ವರ್ಷಗಳಿಗೂ ಹೆಚ್ಚು ಇತಿಹಾಸ ಹೊಂದಿರುವ ಮಂಡಳ ಇಂದು ಉನ್ನತ ಹಂತಕ್ಕೆ ತಲುಪಿದೆ. ಇದು ಹಿರಿಯರ ಆಶೀರ್ವಾದ. ಮಗುವಿಗೆ ಕೆಜಿಯಿಂದ ಪಿಜಿವರೆಗೆ ಶಿಕ್ಷಣ ಕೊಡುವ ವ್ಯವಸ್ಥೆ ಶ್ಲಾಘಿಸಿದರು.ಇನ್ಮುಂದೆ ಶಿವಾಜಿ ಜಯಂತಿ ಜತೆ ಜ್ಯೋತಿಬಾ ಫುಲೆ ಭಾವಚಿತ್ರ ಪೂಜಿಸಬೇಕು. ಸಮಾಜದ ಯುವಕರು ಛತ್ರಿಪತಿ ಶಿವಾಜಿ ಮಹಾರಾಜ, ಶಾಹು ಮಹಾರಾಜ ಮತ್ತು ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ ಅವರ ಇತಿಹಾಸ ಓದಬೇಕು. ಸದೃಢ ಸಮಾಜ ನಿರ್ಮಾಣಕ್ಕೆ ಕಟಿಬದ್ಧರಾಗಿ ದುಡಿಯಬೇಕು ಎಂದು ಕರೆ ನೀಡಿದರು.
ನೂತನ ವಿಜ್ಞಾನ ಪಿಯು ಕಾಲೇಜು ಹಾಗೂ ವಸತಿ ನಿಲಯ ಕಟ್ಟಡ ನಿರ್ಮಾಣದ ಜವಾಬ್ದಾರಿ ತಾವೇ ವಹಿಸಲಿದ್ದು, ಮುಂಬರುವ ದಿನಗಳಲ್ಲಿ ದಾನಿಗಳು ನೆರವಿನಿಂದ ಎಂಜನಿಯರಿಂಗ್ ಕಾಲೇಜು ಕಟ್ಟಡ ನಿರ್ಮಿಸೋಣ. ಇದಕ್ಕೆ ಜಾಗ ಹುಡಕುವಂತೆ ಹೇಳಿದರು.ಕಾರ್ಯಾಧ್ಯಕ್ಷ ಸುಭಾಷ ಶಿಂಧೆ ಮಾತನಾಡಿ, ಕೆಲವೇ ಮಕ್ಕಳಿಂದ ಆರಂಭವಾದ ಈ ಸಂಸ್ಥೆಯಲ್ಲಿ ಕೆಜಿಯಿಂದ ಪಿಜಿವರೆಗೆ ೨೮೦೦ಕ್ಕೂ ಅಧಿಕ ಮಕ್ಕಳು ಅಧ್ಯಯನ ಮಾಡಬಹುದು. ಸಮಾಜದ ಮಕ್ಕಳಿಗೆ ನೀಡುವ ಉಚಿತ ಶಿಕ್ಷಣ ಸದ್ಬಳಸಿಕೊಳ್ಳಬೇಕು ಎಂದು ಹೇಳಿದರು.
ಬೇಂದ್ರೆ ಟ್ರಸ್ಟ್ ಅಧ್ಯಕ್ಷ ಡಾ. ಸರಜೂ ಕಾಟ್ಕರ್, ಸಂಸ್ಥೆಯ ಸಂಸ್ಥಾಪಕರ ದಿನಾಚರಣೆ ಮಾಡುವುದರ ಜತೆಗೆ ಸಮಾಜದ ಮಕ್ಕಳ ಅನುಕೂಲಕ್ಕಾಗಿ ಎಂಜಿನಿಯರಿಂಗ್, ಮೆಡಿಕಲ್ ಕಾಲೇಜು, ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಸ್ಥಾಪನೆ ಸಲಹೆ ನೀಡಿದರು.ಪ್ರಾಸ್ತಾವಿಕ ಮಾತನಾಡಿದ ಮಂಡಳದ ಗೌರವ ಕಾರ್ಯದರ್ಶಿ ರಾಜು ಬಿರಜೆನವರ, ಶೈಕ್ಷಣಿಕ, ರಾಜಕೀಯ, ಆರ್ಥಿಕವಾಗಿ ಹಿಂದುಳಿದ ಮರಾಠ ಸಮಾಜದ ಏಳಿಗೆಗೆ ದುಡಿಯುತ್ತಿರುವ ಮಂಡಳ ನಡೆದು ಬಂದ ಹಾದಿ, ಶೈಕ್ಷಣಿಕ ಮತ್ತು ಕ್ರೀಡಾ ಪ್ರಗತಿ ವಾಚಿಸಿದರು.
ಕಾರ್ಯಕ್ರಮದಲ್ಲಿ ಮೋರೆ ಫೌಂಡೇಶನ್ ಅಧ್ಯಕ್ಷ ಡಾ. ಮಯೂರ ಮೋರೆ ಮತ್ತು ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿದರು. ಇದೇ ವೇಳೆ ಡಾ. ಸರಜೂ ಕಾಟ್ಕರ್ ಅವರನ್ನು ಸನ್ಮಾನಿಸಲಾಯಿತು. ಮಂಡಳದ ಅಧ್ಯಕ್ಷ ಎಂ.ಎನ್. ಮೋರೆ ಅಧ್ಯಕ್ಷತೆ ವಹಿಸಿದ್ದರು.ಮೇಯರ್ ಜ್ಯೋತಿ ಪಾಟೀಲ, ಉಪಮೇಯರ್ ಸಂತೋಷ ಚವ್ಹಾಣ, ಪಾಲಿಕೆ ಸದಸ್ಯರಾದ ಡಾ. ಮಯೂರ ಮೋರೆ, ಶಂಕರ ಶೇಳಕೆ, ಮಾಜಿ ಸದಸ್ಯ ಪ್ರಕಾಶ ಘಾಟಗೆ, ಮಂಡಳದ ಉಪಾಧ್ಯಕ್ಷ ಯಲ್ಲಪ್ಪ ಚವ್ಹಾಣ, ಸಹಕಾರ್ಯದರ್ಶಿ ಮಲ್ಲೇಶಪ್ಪ ಶಿಂಧೆ, ನಿರ್ದೇಶಕರಾದ ಈಶ್ವರ ಪಾಟೀಲ, ಶಿವಾಜಿ ಸೂರ್ಯವಂಶಿ, ಸುಭಾಸ ಪವಾರ, ದತ್ತಾತ್ರೇಯ ಮೋಟೆ, ಅನಿಲ ಭೋಸಲೆ, ಮಹೇಶ ಶಿಂಧೆ, ಪುರುಷೋತ್ತಮ ಜಾಧವ, ರಾಜು ಕಾಳೆ, ಸುನೀಲ ಮೋರೆ, ಪ್ರಸಾದ ಹಂಗಳಕಿ ಇದ್ದರು.
ಪದವಿಪೂರ್ವ ಕಾಲೇಜಿನ ಪ್ರಾಚಾರ್ಯೆ ಎಸ್.ಎಂ. ಸಂಕೋಜಿ ಪ್ರಾರ್ಥಿಸಿದರು. ಪದವಿ ಕಾಲೇಜಿನ ಪ್ರಾಚಾರ್ಯ ಎಂ.ಎಸ್. ಗಾಣಿಗೇರ ನಿರೂಪಿಸಿದರು.