ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನವೆಬರ್ 1ರಂದು ಮಾತ್ರ ಕನ್ನಡ ರಾಜ್ಯೋತ್ಸವ ಆಚರಿಸಿದರೆ ಕನ್ನಡ ಉಳಿದಂತಾಗುವುದಿಲ್ಲ. ಕನ್ನಡ ಪ್ರತಿಯೊಬ್ಬರ ಮನ-ಮನೆಗಳ ಉಸಿರಾಗಬೇಕು ಆಗ ಮಾತ್ರ ಕನ್ನಡ ಉಳಿವು ಸಾಧ್ಯವಾಗಲಿದೆ ಎಂದು ಜಿಪಂ ಸಿಇಒ ಎನ್ ಹೇಮಂತ್ ಹೇಳಿದರು.ಜಿಲ್ಲಾ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಡಿಎಆರ್ ಮೈದಾನದಲ್ಲಿ ಶುಕ್ರವಾರ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕನ್ನಡ ರಾಜ್ಯೋತ್ಸವವನ್ನು ಜಾತಿ-ಧರ್ಮದ ಬೇಧ-ಭಾವವಿಲ್ಲದೇ ಕನ್ನಡಿಗರೆಲ್ಲಾ ಒಂದೆಡೆ ಸೇರಿ ಕನ್ನಡ ಭಾಷೆಯ ಮಹತ್ವವನ್ನು ಜಗತ್ತಿಗೆ ಸಾರುವ ಹಬ್ಬ ಎಂದರು.
ಅನ್ಯಭಾಷೆಗಳನ್ನು ಕಲಿಯುವುದು ತಪ್ಪಲ್ಲ. ಆದರೆ, ಬೇರೆ ಭಾಷೆ ಕಲಿತು ಕನ್ನಡ ಮರೆಯಬಾರದು. ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು, ಕನ್ನಡವೇ ಸತ್ಯ ಎಂಬ ಕುವೆಂಪು ಅವರ ಸಾಲುಗಳನ್ನು ಯಾವಾಗಲೂ ನೆನಪಿಸಿಕೊಳ್ಳಲೇಬೇಕು. ಈ ಸಂದರ್ಭದಲ್ಲಿ ಇಲ್ಲಿನ ನಾಡು-ನುಡಿ, ನೆಲ-ಜಲ ಭಾಷೆ, ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ, ಸಂಪತ್ತನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ನಾಡಿನ ಸಮಸ್ತ ಪ್ರಜೆಗಳ ಪಾತ್ರವೂ ಪ್ರಮುಖವಾಗಿದೆ ಎಂದು ಹೇಳೀದರು.ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಭಾರತದಲ್ಲೇ ಪ್ರಮುಖ ಸ್ಥಾನವಿದೆ. ಕರ್ನಾಟಕದ ಹೆಸರು ವ್ಯಾಸ ಭಾರತದಲ್ಲೇ ಉಲ್ಲೇಖವಾಗಿದೆ. ಕನ್ನಡ ಭಾಷೆಗೆ 2000 ವರ್ಷಗಳಿಗೂ ಮಿಗಿಲಾದ ಇತಿಹಾಸವಿದ್ದು, ಕಾವೇರಿಯಿಂದ ಗೋದಾವರಿವರೆಗೆ ಈ ನಾಡಿನ ಖ್ಯಾತಿ ವ್ಯಾಪಿಸಿತ್ತು ಎಂಬುದನ್ನು ಇತಿಹಾಸ ಹೇಳುತ್ತದೆ. ಅಲ್ಲದೇ ಕನ್ನಡ ಭಾಷೆಯಲ್ಲಿ ದೊರಕುವ ಸಾಹಿತ್ಯ ಕೃತಿಗಳು, ಐತಿಹಾಸಿಕ ದಾಖಲೆಗಳು ನಾಡಿನ ಶ್ರೀಮಂತ ಸಂಸ್ಕೃತಿಗೆ ಸಾಕ್ಷಿಯಾಗಿವೆ.
ಪಂಪ, ರನ್ನ, ಜನ್ನರ ಕಾವ್ಯದ ಸೊಗಸು ಕಾಲವನ್ನು ಮೆಟ್ಟಿ ತಮ್ಮ ಚಿರಂತನತೆಯನ್ನು ಮರೆಯುತ್ತಿದೆ. ಬೇಲೂರು, ಹಳೇಬೀಡು, ಬಾದಾಮಿ ಐಹೊಳೆ ಪಟ್ಟದಕಲ್ಲು ಮುಂತಾದ ಕಡೆಗಳಲ್ಲಿ ಶಿಲ್ಪಕಲೆಯು ಕಾವ್ಯವಾಗಿ ಮೈದಳೆದಿರುವುದನ್ನು ಗಮನಿಸಬಹುದಾಗಿದೆ ಎಂದು ಹೇಳಿದರು.ಜಾಗತೀಕರಣದ ಹಿನ್ನೆಲೆಯಲ್ಲಿ ಇಂಗ್ಲೀಷ್ ಭಾಷಾ ಜ್ಞಾನ ಅವಶ್ಯಕವಾಗಿದ್ದರೂ ಎಂದಿಗೂ ಮಾತೃಭಾಷೆ ಕನ್ನಡಕ್ಕೆ ಮೊದಲ ಆದ್ಯತೆ. ನಮ್ಮ ಶಿಕ್ಷಣ ನೀತಿಯೂ ಮಾತೃಭಾಷೆಗೆ ಹೆಚ್ಚಿನ ಒತ್ತನ್ನು ನೀಡಿದ್ದರೂ ಕನ್ನಡ ಭಾಷೆಯನ್ನು ಉಳಿಸಿಕೊಳ್ಳುವಲ್ಲಿ ನಮ್ಮೆಲ್ಲರ ಜಬಾಬ್ದಾರಿ ಇದೆ ಎಂದು ಹೇಳಿದರು.
ಕನ್ನಡನಾಡು ವಿವಿಧ ಧರ್ಮ ಸಂಸ್ಕೃತಿಗಳ ಸಮಾಗಮವಾಗಿದೆ. ಮೌರ್ಯರು, ಗಂಗರು, ಕದಂಬರು, ಚಾಲುಕ್ಯರು, ಹೊಯ್ಸಳರು, ವಿಜಯನಗರದ ಅರಸರು, ಮೈಸೂರಿನ ಒಡೆಯರು, ಕೊಡವರು ಮುಂತಾದ ಅನೇಕ ರಾಜಮನೆತನಗಳು ಈ ನಾಡಿಗೆ ನೀಡಿದ ಕೊಡುಗೆ ಅಪಾರ. ದಾಸಶ್ರೇಷ್ಠ ಕನಕದಾಸರು, ಪುರಂದರದಾಸರು, ಸರ್ವಜ್ಞ, ಶಿಶುನಾಳ ಷರೀಫರಂತಹ ಸಂತಕವಿಗಳು, ಸಾಮಾಜಿಕ ಕ್ರಾಂತಿಯ ಹರಿಕಾರರಾದ ಅಕ್ಕ, ಅಲ್ಮಮ, ಜಗಜ್ಯೋತಿ ಬಸವೇಶ್ವರರನ್ನೊಳಗೊಂಡ ಅಸಂಖ್ಯಾತ ವಚನಕಾರರು ಮತ್ತು ದಾರ್ಶನಿಕರು ಬಾಳಿ ಬದುಕಿದ ನೆಲ ಈ ಹೆಮ್ಮೆಯ ಕನ್ನಡನಾಡು, ಧರ್ಮ ಸಹಿಷ್ಣುತೆ, ಸಮನ್ವಯತೆ, ಸೌಹಾರ್ದತೆಯಿಂದ ಬದುಕುತ್ತಿರುವ ನಾಡು ನಮ್ಮದು ಎಂದರು.
ಕನ್ನಡ ಭಾಷೆ ಅತ್ಯಂತ ಶ್ರೀಮಂತ ಸಾಹಿತ್ಯ ಹೊಂದಿದ್ದು, ಕನ್ನಡದ 8 ಜನ ಪರಿಚಾರಕರು, ಸಾಹಿತ್ಯದ ಅತ್ಯುನ್ನತ ಪ್ರಶಸ್ತಿಯಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕಾರಕ್ಕೆ ಬಾಜನರಾಗಿರುವುದು ಹರ್ಷದ ಸಂಗತಿಯಾಗಿದೆ. ಇಡೀ ದೇಶದಲ್ಲೇ 2ನೇ ಅತಿಹೆಚ್ಚು ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಭಾಷೆ ಕನ್ನಡ ಎಂದು ಬಣ್ಣಿಸಿದರು.ಕಾರ್ಯಕ್ರಮದಲ್ಲಿ ಜಿಪಂ ಸಿಇಒ ಎನ್.ಹೇಮಂತ್ , ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ಅವರು ಕನ್ನಡಾಂಬೆ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಶಾಸಕ ಎಸ್. ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಶಾಸಕ ಡಿ.ಎಸ್.ಅರುಣ್, ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ, ಪಾಲಿಕೆ ಆಯುಕ್ತರಾದ ಡಾ.ಕವಿತಾ ಯೋಗಪ್ಪನವರ್, ಎಸಿ ಸತ್ಯನಾರಾಯಣ, ತಹಶೀಲ್ದಾರ್ ಗಿರೀಶ್, ಅಧಿಕಾರಿಗಳು, ಕನ್ನಡ ಸಂಘಟನೆಯ ಪದಾಧಿಕಾರಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.ಪ್ರವಾಸೋದ್ಯಮ ಇಲಾಖೆಯಿಂದ ಚಂದ್ರಗುತ್ತಿ ರೇಣುಕಾದೇವಿಯ ಸ್ತಬ್ಧಚಿತ್ರ, ಕೆಎಸ್ಆರ್‌ಸಿಯಿಂದ ಪ್ರವಾಸಿ ತಾಣಗಳ ಸ್ತಬ್ಧಚಿತ್ರ, ಆರೋಗ್ಯ ಇಲಾಖೆಯಿಂದ ವಿವಿಧ ಯೋಜನೆಗಳ ಮಾಹಿತಿಯುಳ್ಳ, ಅಲ್ಪಸಂಖ್ಯಾತ ಇಲಾಖೆ ಯೋಜನೆಗಳ ಅರಿವು ಮೂಡಿಸುವ, ಕೃಷಿ ಇಲಾಖೆಯಿಂದ ವೈಜ್ಞಾನಿಕ ಮಾಹಿತಿ ನೀಡುವ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸಖಿ ಒನ್ ಸ್ಟಾಪ್ ಸೆಂಟರ್, ಸಮಾಜ ಕಲ್ಯಾಣ ಇಲಾಖೆ, ಪಾಲಿಕೆ, ಪೊಲೀಸ್ ಇಲಾಖೆ, ತೋಟಗಾರಿಕೆ ಇಲಾಖೆಯಿಂದ ವಿಶೇಷ ಮಾಹಿತಿಯುಳ್ಳ ಸ್ತಬ್ಧಚಿತ್ರಗಳನ್ನು ಪ್ರದರ್ಶಿಸಲಾಯಿತು. ಡೊಳ್ಳು ಕುಣಿತ, ವೀರಗಾಸೆ ಹಾಗೂ 3 ಶಾಲಾ ವಿದ್ಯಾರ್ಥಿಗಳು ಕನ್ನಡ ನಾಡು-ನುಡಿ ಕುರಿತು ಸಾಂಸ್ಕೃತಿಕ ನೃತ್ಯ ಪ್ರದರ್ಶಿಸಿದರು.
ಸುಸಂಸ್ಕೃತ ಸಮಾಜ ಕಟ್ಟಿ ಬೆಳೆಸಬೇಕಿದೆ
ಪ್ರಸ್ತುತ ಸಂದರ್ಭದಲ್ಲಿ ಕರ್ನಾಟಕ ಅಭಿವೃದ್ಧಿಯ ಹೊಸ ಮನ್ವಂತರಕ್ಕೆ ತೆರೆದುಕೊಳ್ಳುತ್ತಿದೆ. ಸುಶಿಕ್ಷಿತ, ಸುಸಂಸ್ಕೃತ ಸಮಾಜವನ್ನು ಕಟ್ಟಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಪ್ರಸಕ್ತ ಸಾಲಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ, ವಿಶೇಷವಾಗಿ ಕರಕುಶಲ ಕ್ಷೇತ್ರದಲ್ಲಿ ಹಸೆಚಿತ್ತಾರ ಖ್ಯಾತಿಯ ಸಾಗರ ತಾಲೂಕು ಸಿರಿವಂತೆಯ ಚಂದ್ರಶೇಖರ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ವೈದ್ಯಕೀಯ ಕ್ಷೇತ್ರದಲ್ಲಿ ತೀರ್ಥಹಳ್ಳಿ ತಾಲೂಕು ಹೊಸಕೊಪ್ಪದ ಡಾ.ಎಚ್.ಎಸ್.ಕೃಷ್ಣಪ್ಪ ಹಾಗೂ ಸಾಹಸ ಕ್ರೀಡೆ ವಿಭಾಗದಲ್ಲಿ ಸಾಗರ ತಾಲೂಕಿನ ಹೊನ್ನೆಮರಡು ನೊಮಿಟೋ ಕಾಮದಾರ್ ಅವರಿಗೆ ಸುವರ್ಣ ಮಹೋತ್ಸವ(ಕರ್ನಾಟಕ ಸಂಭ್ರಮ-50)ಪ್ರಶಸ್ತಿ ಸಂದಿರುವುದು ಹರ್ಷದ ಸಂಗತಿ ಎಂದು ಜಿಪಂ ಸಿಇಒ ಎನ್.ಹೇಮಂತ್ ತಿಳಿಸಿದರು.