ಸಾರಾಂಶ
ಕನ್ನಡಿಗರು ಸಾಂಕೇತಕವಾಗಿ ನವೆಂಬರ್ ತಿಂಗಳಲ್ಲಿ ಮಾತ್ರ ಕನ್ನಡಿಗರಾಗದೇ ನಿತ್ಯದಲ್ಲಿ ಕನ್ನಡ ಭಾಷೆಯನ್ನು ಆರಾಧಿಸಬೇಕು. ಆಗಾದಾಗ ಮಾತ್ರ ಕನ್ನಡ ನಿತ್ಯದ ಭಾಷೆಯಾಗುವುದು ಎಂದು ಬಿಜೆಪಿ ಮುಖಂಡ ರಾಜೇಶ್ ಪಾಟೇಲ್ ಹೇಳಿದರು.
ಕನ್ನಡಪ್ರಭ ಹೊಳೆಹೊನ್ನೂರು
ಕನ್ನಡಿಗರು ಸಾಂಕೇತಕವಾಗಿ ನವೆಂಬರ್ ತಿಂಗಳಲ್ಲಿ ಮಾತ್ರ ಕನ್ನಡಿಗರಾಗದೇ ನಿತ್ಯದಲ್ಲಿ ಕನ್ನಡ ಭಾಷೆಯನ್ನು ಆರಾಧಿಸಬೇಕು. ಆಗಾದಾಗ ಮಾತ್ರ ಕನ್ನಡ ನಿತ್ಯದ ಭಾಷೆಯಾಗುವುದು ಎಂದು ಬಿಜೆಪಿ ಮುಖಂಡ ರಾಜೇಶ್ ಪಾಟೇಲ್ ಹೇಳಿದರು.ಸಮೀಪದ ಅರಹತೊಳಲಿನಲ್ಲಿ ಶನಿವಾರ ಕರ್ನಾಟಕ ರಕ್ಷಣಾ ವೇದಿಕೆ ಯುವ ಪದಾಧಿಕಾರಿಗಳು ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾವಿರಾರು ವರ್ಷಗಳ ಇತಿಹಾಸ ಕನ್ನಡ ಭಾಷೆಗಿದೆ. ಅಸಮಾನತೆ ದೌರ್ಜನ್ಯ ಖಂಡಿಸುವ ಮನಸ್ಸನ್ನು ಬೆಳೆಸಿಕೊಳ್ಳಬೇಕಿದೆ ಎಂದು ತಿಳಿಸಿದರು.ನಾಡಿನಲ್ಲಿರುವ ಅಬಲರಿಗೆ ನೆರವಾದರೆ ಸಂಘಟನೆ ಸಬಲವಾಗುವುದರಲ್ಲಿ ಎರಡು ಮಾತಿಲ್ಲ. ಅನ್ಯ ಭಾಷೆಗಳನ್ನು ಪ್ರೀತಿಸಿ ಕನ್ನಡವನ್ನು ಆರಾಧಿಸಬೇಕು. ಕನ್ನಡ ನಮ್ಮ ಅನ್ನದ ಭಾಷೆಯಾಗಿರಲಿ. ಯಾವುದೇ ಕಾರಣಕ್ಕೂ ಅನ್ಯ ಭಾಷೆಗಳನ್ನು ದ್ವೇಷಿಸಬೇಡಿ. ಕನ್ನಡ ನಾಡನ್ನು ಸರ್ವಜನಾಂಗದ ಶಾಂತಿಯ ತೋಟ ಎಂದು ಕವಿಗಳು ಹೇಳಿರುವಂತೆ ಎಲ್ಲರೂ ಒಟ್ಟಾಗಿ ಸೌಹಾರ್ದತೆಯಿಂದ ಬದುಕನ್ನು ನಡೆಸಲು ಕಂಕಣ ಬದ್ಧರಾಗಿರೋಣ ಎಂದರು.
ಭದ್ರಾವತಿ ಕರವೇ ತಾಲೂಕು ಅಧ್ಯಕ್ಷ ಎಂ. ಪರಮೇಶ್ ಮಾತನಾಡಿ, ಸರ್ಕಾರಿ ಕನ್ನಡ ಶಾಲೆಗಳ ಉಳಿವಿಗಾಗಿ ಕನ್ನಡಿಗರು ಬದ್ಧರಾಗಿರಬೇಕು. ಕರ್ನಾಟಕ ಸಂಪದ್ಭರಿತ ರಾಜ್ಯ. ಇಲ್ಲಿನ ನೆಲ ಜಲ ಮತ್ತು ಭಾಷೆ ಎಲ್ಲವೂ ಸಮೃದ್ಧ ಎಂದು ತಿಳಿಸಿದರು.ಅರಹತೊಳಲು ಗ್ರಾಪಂ ಸದಸ್ಯ ಕೆ. ರಂಗನಾಥ, ಕೆ.ಸಿ. ವಿದ್ಯಾ, ಶಿಕ್ಷಕ ರಘು, ಕೆ.ಆರ್. ಶ್ರೀಧರ್ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯ ಪ್ರವೀಣ್, ಮಣಿಕಂಠ, ಕಿರಣ್, ಯೋಗೀಶ್ ಸೇರಿದಂತೆ ಇತರರು ಇದ್ದರು.