ಸಾರಾಂಶ
ಹೊಸದುರ್ಗ: ಪಟ್ಟಣದ ಎಸ್.ನಿಜಲಿಂಗಪ್ಪ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ 69ನೇ ಕನ್ನಡ ರಾಜ್ಯೋತ್ಸವದ ಸಾಹಿತ್ಯ ಸಂಭ್ರಮದ ಜಾಥಾ ಕಾರ್ಯಕ್ರಮವು ಪಟ್ಟಣದಲ್ಲಿ ಎಲ್ಲರ ಗಮನ ಸೆಳೆಯಿತು.ಟಿ.ಬಿ.ವೃತ್ತ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಎಸ್.ನಿಜಲಿಂಗಪ್ಪ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಕೆ.ಎಸ್.ಕಲ್ಮಠ್ ಮಾತನಾಡಿ, ಕನ್ನಡ ಜನರಿಗೆ ಅನ್ನ ಕೊಡುವ, ಉದ್ಯೋಗ ಕಲ್ಪಿಸುವ ಭಾಷೆಯಾಗಬೇಕು. ನಮ್ಮ ನಾಡಿನ ಸಂಪತ್ತು, ಆಸ್ತಿ ಕನ್ನಡಿಗರ ಅಭಿವೃದ್ಧಿಗೆ ಬಳಕೆಯಾಗಬೇಕು ಎಂಬುದನ್ನು ತಾಲೂಕಿನ ಜನರಲ್ಲಿ ಜಾಗೃತಿ ಮೂಡಿಸಬೇಕು. ಹಾಗೆಯೇ ಇಂದಿನ ಮಕ್ಕಳಿಗೆ ಕನ್ನಡ ಭಾಷೆಯ ಅಭಿಮಾನ ಮೂಡಿಸುವ ಉದ್ದೇಶದಿಂದ ಈ ವಿಶಿಷ್ಟ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಇಂದಿರಾಗಾಂಧಿ ಬಿ.ಇಡಿ ಕಾಲೇಜಿನ ಪ್ರಶಿಕ್ಷಣಾರ್ಥಿಗಳು ರಾಷ್ಟ್ರಭಕ್ತ ಸುರಪುರದ ವೆಂಕಟಪ್ಪನಾಯಕ ಅವರ ಕುರಿತು ಕಿರುನಾಟಕವನ್ನು ಅಭಿನಯಿಸಿದರು.ಮೆರವಣಿಗೆಯು ಟಿ.ಬಿ.ವೃತ್ತದಿಂದ ಪಟ್ಟಣದ ರಾಜಬೀದಿಯಲ್ಲಿ ಅದ್ಧೂರಿಯಾಗಿ ಸಾಗಿತು. ಮೆರವಣಿಗೆಯಲ್ಲಿ ಕನ್ನಡಾಂಬೆ ಭುವನೇಶ್ವರಿ ಭಾವಚಿತ್ರ, ನಾಡಧ್ವಜಗಳು ರಾರಾಜಿಸಿದವು.ಮೆರವಣಿಗೆಯಲ್ಲಿ ನಿಜಲಿಂಗಪ್ಪ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಂ.ಶಿವಲಿಂಗಪ್ಪ, ಅಕಾಡೆಮಿಕ್ ಡೈರೆಕ್ಟರ್ ಎಂ.ಬಿ.ತಿಪ್ಪೇಸ್ವಾಮಿ, ನಿರ್ದೇಶಕರಾದ ವಿಜಯಶಿವಲಿಂಗಪ್ಪ, ನಾಗಲಾಂಬಿಕ ಕಲ್ಮಠ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಪಿ.ಓಂಕಾರಪ್ಪ, ವೀರಭದ್ರಪ್ಪ, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.