ಕನ್ನಡ ಮಾಧ್ಯಮ, ಕನ್ನಡ ಪುಸ್ತಕ, ಕನ್ನಡ ಪತ್ರಿಕೆ ಓದುವ ಸಂಸ್ಕೃತಿಯನ್ನು ಬೆಳೆಸುವ ಅಗತ್ಯವನ್ನು ಒತ್ತಿ ಹೇಳಿದರು. ಮಕ್ಕಳಲ್ಲಿ ಕನ್ನಡಾಭಿಮಾನ ಮೂಡಿಸುವುದು ನಮ್ಮ ಮೊದಲ ಕರ್ತವ್ಯ.
ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ಕನ್ನಡ ನಮ್ಮ ಹೃದಯದ ಭಾಷೆಯಾಗಬೇಕು. ಮಾತೃಭಾಷೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಕನ್ನಡ-ಕನ್ನಡತನ್ನು ಉಳಿಸಿ-ಬೆಳೆಸುವ ಮೂಲಕ ಕನ್ನಡ ನಮ್ಮ ಉಸಿರಾದರೆ, ಮಂತ್ರವಾದರೆ ಮಾತ್ರ ರಾಜ್ಯೋತ್ಸವ ಆಚರಣೆಗಳು ಸಾರ್ಥಕವಾಗುತ್ತವೆ ಎಂದು ಕನ್ನಡ ಅಧ್ಯಾಪಕ ಯೋಗೇಶ್ ಚಕ್ಕೆರೆ ಅಭಿಪ್ರಾಯಪಟ್ಟರು.ಪಟ್ಟಣದ ಮಹದೇಶ್ವರ ನಗರದ ಕೆಎಚ್‌ಬಿ ಬಡಾವಣೆಯ ದೇ.ಜ.ಗೌ ಉದ್ಯಾನವನದಲ್ಲಿ ನಿಸರ್ಗ ನಾಗರೀಕರ ಸೇವಾ ಸಮಿತಿ, ಕಾಲ್ನಡಿಗೆ ಸ್ನೇಹಕೂಟ, ಬಲಮುರಿ ಗಣಪತಿ ದೇವಸ್ಥಾನ ಸಮಿತಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ೭೦ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು.
ಕನ್ನಡ ಮತ್ತು ಕನ್ನಡತನದ ಅಸ್ತಿತ್ವಕ್ಕೆ ಎದುರಾಗುತ್ತಿರುವ ಸವಾಲುಗಳನ್ನು ಉಲ್ಲೇಖಿಸಿದ ಅವರು, ಅನ್ಯಭಾಷೆಗಳ ಪ್ರಭಾವ ಹೆಚ್ಚುತ್ತಿದ್ದು, ಕನ್ನಡದ ಹಿತಕ್ಕಾಗಿ ಪ್ರತಿಯೊಬ್ಬ ಕನ್ನಡಿಗರೂ ಕಂಕಣಬದ್ಧರಾಗಬೇಕು. ರಾಜ್ಯೋತ್ಸವ ಬಂದಾಗ ಮಾತ್ರ ಜಾಗೃತಿಯಾಗಬಾರದು. ಪ್ರತಿದಿನವೂ ಮಾತೃಭಾಷೆಯ ಪರ ಕಾಳಜಿ ಇರಬೇಕು,ಕನ್ನಡವನ್ನು ಗಾಳಿಯಂತೆ, ನೀರಿನಂತೆ ಬಳಕೆಯಲ್ಲಿ ಬೆಳೆಸಿದಾಗ ಮಾತ್ರ ಮುಂದಿನ ತಲೆಮಾರಿಗೆ ಅದು ಬಲದಾಯಕವಾಗುತ್ತದೆ ಎಂದು ಹೇಳಿದರು.ನಗರಸಭೆಯ ಮಾಜಿ ಉಪಾಧ್ಯಕ್ಷ ಕೆ.ಎಲ್.ಕುಮಾರ್ ಮಾತನಾಡಿ, ಕನ್ನಡದಲ್ಲೇ ವ್ಯವಹಾರ ನಡೆಸುವ ಅಭ್ಯಾಸ ರೂಢಿಯಾದಾಗ ಮಾತ್ರ ಭಾಷೆ ಉಳಿಯುತ್ತದೆ, ಪರಭಾಷೆಗಳ ಪ್ರಭಾವ ಇದ್ದರೂ ಮಾತೃಭಾಷೆಯನ್ನು ಮರೆತರೆ ನಾವು ನಮ್ಮ ಅಸ್ತಿತ್ವವೇ ಕಳೆದುಕೊಳ್ಳುತ್ತೇವೆ ಎಂದು ಹೇಳಿದರು.
ನಿಸರ್ಗ ನಾಗರಿಕರ ಸೇವಾ ಸಮಿತಿ ಅಧ್ಯಕ್ಷ ಪುಟ್ಟಸ್ವಾಮಿಗೌಡ ಮಾತನಾಡಿ, ಕನ್ನಡದ ಸಾವಿರಾರು ವರ್ಷಗಳ ಪರಂಪರೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿ ಕನ್ನಡಿಗನ ಮೇಲಿದೆ. ಇಂದಿನ ಯುವಜನತೆ ಕನ್ನಡವನ್ನು ಅನ್ನ ನೀಡುವ ಭಾಷೆಯನ್ನಾಗಿ ರೂಪಿಸಬೇಕು ಎಂದು ಕರೆ ನೀಡಿದರು.ಕಾಲ್ನಡಿಗೆ ಸ್ನೇಹಕೂಟದ ಅಧ್ಯಕ್ಷ ರೈಲ್ವೆ ಬಾಬು ಮಾತನಾಡಿ, ಕನ್ನಡ ಮಾಧ್ಯಮ, ಕನ್ನಡ ಪುಸ್ತಕ, ಕನ್ನಡ ಪತ್ರಿಕೆ ಓದುವ ಸಂಸ್ಕೃತಿಯನ್ನು ಬೆಳೆಸುವ ಅಗತ್ಯವನ್ನು ಒತ್ತಿ ಹೇಳಿದರು. ಮಕ್ಕಳಲ್ಲಿ ಕನ್ನಡಾಭಿಮಾನ ಮೂಡಿಸುವುದು ನಮ್ಮ ಮೊದಲ ಕರ್ತವ್ಯ ಎಂದರು.
ಕಾರ್ಯಕ್ರಮದಲ್ಲಿ ನಿಸರ್ಗ ನಾಗರೀಕರ ಸೇವಾ ಸಮಿತಿಯ ಪದಾಧಿಕಾರಿಗಳಾದ ಶಿವಪ್ಪ, ರಾಮಕೃಷ್ಣೇಗೌಡ, ಮದನ್, ಬಸವರಾಜು, ವಿರುಪಾಕ್ಷಿಪುರ ಉಮೇಶ್, ಹನಿಯೂರು ಮದ್ದೂರೇಗೌಡ, ಶಿವಸ್ವಾಮಿ, ಸಿದ್ದಪ್ಪ, ನಾಗರಾಜು, ವೆಂಕಟೇಶ್, ಹನುಮಂತೇಗೌಡ ಇತರರು ಇದ್ದರು.