ಕನ್ನಡ ಶಾಲೆಗಳಿಗೆ ಆಧುನಿಕ ಸ್ಪರ್ಶ ಸಿಗಲಿ

| Published : Feb 24 2025, 12:31 AM IST

ಸಾರಾಂಶ

ಹುಕ್ಕೇರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಚಂದ್ರಶೇಖರ ಶಿವಾಚಾರ್ಯ ಮಾತನಾಡಿ ಕನ್ನಡ ಶಾಲೆಗಳಿಗೆ ತಜ್ಞ ಶಿಕ್ಷಕರ ನೇಮಕಾತಿ, ಮೂಲಸೌಲಭ್ಯ ಒದಗಿಸಬೇಕು ಎಂದಿದ್ದಾರೆ.

ಕನ್ನಡಪ್ರಭ ವಾರ್ತೆ ಯಮಕನಮರಡಿ

ಆಂಗ್ಲ ಭಾಷಾ ಮಾಧ್ಯಮದ ಹಾವಳಿಯಿಂದ ನಶಿಸುತ್ತಿರುವ ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸಲು ರಾಜ್ಯ ಸರ್ಕಾರವು ಕನ್ನಡ ಶಾಲೆಗಳಿಗೆ ಆಧುನಿಕತೆ ಸ್ಪರ್ಶ ನೀಡಬೇಕು. ಶಿಕ್ಷಣದಲ್ಲಿ ಕನ್ನಡ ಮಾಧ್ಯಮ ಉಳಿದರೆ ಮಾತ್ರ ರಾಜ್ಯದಲ್ಲಿ ಕನ್ನಡ ಉಳಿಯುತ್ತದೆ ಎಂದು ಹುಕ್ಕೇರಿ ತಾಲೂಕು 12ನೇ ಕನ್ನಡ ಸಾಹಿತ್ಯ ಸಮ್ಮೆಳನಾಧ್ಯಕ್ಷ ಚಂದ್ರಶೇಖರ ಶಿವಾಚಾರ್ಯ ಶ್ರೀ ಹೇಳಿದರು.

ಇಲ್ಲಿಗೆ ಸಮೀಪದ ಯಮಕನಮರಡಿ ಗುರುಸಿದ್ದೇಶ್ವರ ಮಹಾಸ್ವಾಮೀಜಿ ವೇದಿಕೆಯಲ್ಲಿ ಭಾನುವಾರ ನಡೆದ ಹುಕ್ಕೇರಿ ತಾಲೂಕು 12ನೇ ಕನ್ನಡ ಸಾಹಿತ್ಯ ಸಮ್ಮೆಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕನ್ನಡ ಶಾಲೆಗಳಿಗೆ ತಜ್ಞ ಶಿಕ್ಷಕರ ನೇಮಕಾತಿ, ಮೂಲಸೌಲಭ್ಯ ಒದಗಿಸಬೇಕು. ಶುದ್ಧ ಕನ್ನಡ ಬಳಕೆ ಕುರಿತು ವಿದ್ಯಾರ್ಥಿಗಳಿಗೆ ತಿಳಿ ಹೇಳಬೇಕು ಎಂದರು.

ನಮ್ಮ ದೇಶವು ವಿವಿಧ ರಾಜ್ಯಗಳಿಂದ ಮತ್ತು ವಿವಿಧ ಭಾಷೆಗಳಿಂದ ಕೂಡಿದೆ. ಒಬ್ಬರು ಮತ್ತೊಬ್ಬರ ಜೊತೆಗೆ ವ್ಯವಹಾರಿಕವಾಗಿ ಅನ್ಯೊನ್ಯವಾಗಿದ್ದಾರೆ. ಆದರೆ ಕೆಲವೊಂದು ಜನರ ಅತಿರೇಕದಿಂದ ಭಾಷೆ ಮತ್ತು ಗಡಿಗಳ ಸಮಸ್ಯೆಗಳು ಮುಗಿಲು ಮುಟ್ಟಿದ್ದು ನಿತ್ಯವೂ ಒಂದಿಲ್ಲೊಂದು ಸಮಸ್ಯೆ ಉದ್ಘವಿಸುತ್ತಿವೆ. ಸೂಳೆಭಾವಿಯಲ್ಲಿ ಕನ್ನಡ ಮಾತನಾಡು ಎಂದ ಕಂಡಕ್ಟರ್ ಮೇಲಿನ ಹಲ್ಲೆ ಖಂಡಿಸಿದ ಅವರು, ಭಾಷೆ ಮತ್ತು ಗಡಿಯ ವಿಷಯದಲ್ಲಿ ಉಭಯ ಭಾಷಿಕರು ಸಾಮರಸ್ಯ ಕಾಯ್ದುಕೊಂಡರೆ ಉಭಯ ರಾಜ್ಯಗಳ ಒಟ್ಟಾರೆ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದು ಸಲಹೆ ನೀಡಿದರು.

ಗಡಿ ಭಾಗದಲ್ಲಿ ನೀರಾವರಿ ಸೌಲಭ್ಯ, ನಿರಂತರ ವಿದ್ಯುತ್‌ ಪೂರೈಕೆ, ಉತ್ತಮ ರಸ್ತೆಗಳ ನಿರ್ಮಾಣ, ಕನ್ನಡ ಶಾಲೆಗಳಿಗೆ ಮೂಲ ಸೌಕರ್ಯ, ಆರೋಗ್ಯ ಸೌಲಭ್ಯ ನೀಡುವುದು, ಸಾಹಿತಿ-ಕಲಾವಿದರಿಗೆ ಪ್ರೊತ್ಸಾಹ ನೀಡುವುದು ಇವೇ ಮುಂತಾದ ಕ್ರಮ ಕೈಗೊಳ್ಳುವ ಮೂಲಕ ಕರ್ನಾಟಕ ಏಕೀಕರಣದ ಕನಸು ನನಸು ಮಾಡಬೇಕಾದ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿದೆಂದರು. ತಮ್ಮ ಮಠದಿಂದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ₹1 ಲಕ್ಷ ಠೇವಣಿ ಇಟ್ಟು ಅದರ ಮೂಲಕ ಪ್ರತಿ ವರ್ಷವೂ ದತ್ತಿ ಉಪನ್ಯಾಸ ನೀಡಲು ಏರ್ಪಾಡುಮಾಡಲಾಗುವುದು ಎಂದು ಹೇಳಿದರು.

ಸಮ್ಮೇಳನ ಉದ್ಘಾಟಿಸಿದ ನಿಡಸೋಸಿ ಮಠದ ಪಂಚಮ ಶಿವಲಿಂಗೇಶ್ವರ ಮಹಾಸ್ವಾಮೀಜಿ ಮಾತನಾಡಿ, ಸಾಹಿತ್ಯ ಪರಿಷತ್ತಿನ ತಾಲೂಕು ಘಟಕಗಳಿಂದ ಪ್ರತಿ ತಿಂಗಳು ಒಂದು ಸಾಹಿತ್ಯ ಪುಸ್ತಕದ ಕುರಿತು ಚರ್ಚೆ ನಡೆಸಿ ಆ ಮೂಲಕ ಜನರಲ್ಲಿ ಸಾಹಿತ್ಯಾಭಿರುಚಿ ಬೆಳೆಸಬೇಕು ಎಂದರು. ಕಸಾಪ ಜಿಲ್ಲಾಧ್ಯಕ್ಷೆ ಮಂಗಳಾ ಮೆಟಗುಡ್ಡ ಮಾತನಾಡಿ, ಇಂಗ್ಲಿಷ ಭಾಷೆ ಹಾಗೆ ಕನ್ನಡ ಭಾಷೆಯೂ ಕೂಡಾ ನಮ್ಮ ಬದುಕನ್ನು ಕಟ್ಟಿಕೊಡುವ ಸಾಧನವಾಗಬೇಕು ಎಂದರು.

ಸಮಾರಂಭದಲ್ಲಿ ರಾಚೋಟಿ ಶ್ರೀ, ಸಿದ್ದಬಸವ ದೇವರು, ಸಿದ್ದೆಶ್ವರ ಶ್ರೀ, ಹರಿ ಮಂದಿರದ ಆನಂದ ಗೋಸಾವಿ ಶ್ರೀ, ತಹಸೀಲ್ದಾರ್‌ ಮಂಜುಳಾ ನಾಯಿಕ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭಾವತಿ ಪಾಟೀಲ, ತಾಲೂಕು ಕಸಾಪ ಅಧ್ಯಕ್ಷ ಪ್ರಕಾಶ ಅವಲಕ್ಕಿ, ಪ್ರಾ.ಎಲ್.ವಿ.ಪಾಟೀಲ, ಸ್ವಾಗತ ಸಮಿತಿ ವೀರಣ್ಣಾ ಬಿಸಿರೊಟ್ಟಿ, ರವೀಂದ್ರ ಜಿಂಡ್ರಾಳಿ, ಪೊಲೀಸ್ ಅಧಿಕಾರಿ ಜಾವೇದ ಮುಶಾಪೂರ, ಹರುಣ ಮುಲ್ಲಾ ಇತರರಿದ್ದರು. ಸ್ವಾಗತ ಸಮಿತಿ ಅಧ್ಯಕ್ಷ ಕಿರಣ ಸಿಂಗ್ ರಜಪೂತ ಸ್ವಾಗತಿಸಿ, ಸಿ.ಎಂ.ದರಬಾರೆ ವಂದಿಸಿ, ಡಾ.ವಿಜಯಲಕ್ಷ್ಮಿ ಮಿರ್ಜಿ ಹಾಗೂ ಶಿವಾನಂದ ಗುಂಡಾಳಿ ನಿರೂಪಿಸಿದರು.

ಭವ್ಯ ಮೆರವಣಿಗೆ:

ಬಸವರಾಜ ಕುಂಬಾರರಿಂದ ಬೆಳಗ್ಗೆ ರಾಷ್ಟ್ರಧ್ವಜಾರೋಹಣ, ಕಸಾಪ ಜಿಲ್ಲಾಧ್ಯಕ್ಷೆ ಮಂಗಳಾ ಮೆಟಗುಡ್ಡರಿಂದ ಕಸಾಪ ಧ್ವಜಾರೋಹಣ, ಕಸಾಪ ಹುಕ್ಕೇರಿ ತಾಲೂಕು ಅಧ್ಯಕ್ಷ ಪ್ರಕಾಶ ಅವಲಕ್ಕಿ ನಾಡ ಧ್ವಜಾರೋಹಣ ನಡೆಯಿತು. ಯಮಕನಮರಡಿ ಗ್ರಾಪಂ ಅಧ್ಯಕ್ಷೆ ಆಸ್ಮಾ ಫನಿಬಂದ, ಹತ್ತರಗಿ ಗ್ರಾಪಂ ಅಧ್ಯಕ್ಷ ಸಮೀರ ಬೇಪಾರಿ ಅವರು ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಚಾಲನೆ ನೀಡಿದರು. ಚಂದ್ರಶೇಖರ ಶ್ರೀ, ರಾಚೋಟಿ ಶ್ರೀ, ಮಂಗಳಾ ಮೆಟಗುಡ್ಡ ರವರನ್ನು ಸಾರೋಟಿನಲ್ಲಿ ಮೆರವಣಿಗೆಯ ಮೂಲಕ ಮುಖ್ಯ ವೇದಿಕೆಗೆ ತರಲಾಯಿತು. ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು, ಕುಂಭ ಮತ್ತು ಪುಸ್ತಕ ಹೊತ್ತ ಮಾತೆಯರು, ಆಶಾ ಕಾರ್ಯಕರ್ತೆಯರು, ಕನ್ನಡಪರ ಸಂಘಟನೆಗಳ ಕಾರ್ಯಕರ್ತರು, ಸಾಹಿತಿಗಳು, ಕಲಾವಿದರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.