ನೊಂದವರ ಪರವಾಗಿ ಕರವೇ ಹೋರಾಡಲಿ: ಬಸವಂತಪ್ಪ

| Published : Dec 17 2024, 01:00 AM IST

ಸಾರಾಂಶ

ಕನ್ನಡಪರ ಸಂಘಟನೆಗಳು ಕನ್ನಡ ನಾಡು-ನುಡಿ ಬಗ್ಗೆ ಹೋರಾಡುತ್ತಿದೆ. ಅಂತೆಯೇ, ನೊಂದವರು, ಬಡವರು, ನಿರ್ಗತಿಕರ ಹಾಗೂ ಅಮಾಯಕರ ನೋವುಗಳಿಗೂ ಸ್ಪಂದಿಸಿ, ನ್ಯಾಯ ಕೊಡಿಸುವ ಕೆಲಸಗಳನ್ನು ಸಂಘಟನೆ ಮಾಡಬೇಕಿದೆ ಎಂದು ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ದಾವಣಗೆರೆಯಲ್ಲಿ ಹೇಳಿದ್ದಾರೆ.

- ರಾಯಣ್ಣ ವೃತ್ತದಲ್ಲಿ ರಾಜ್ಯೋತ್ಸವ ಪ್ರಯುಕ್ತ ಸಾಂಸ್ಕೃತಿಕ ಸಂಭ್ರಮ, ಪುರಸ್ಕಾರ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ಕನ್ನಡಪರ ಸಂಘಟನೆಗಳು ಕನ್ನಡ ನಾಡು-ನುಡಿ ಬಗ್ಗೆ ಹೋರಾಡುತ್ತಿದೆ. ಅಂತೆಯೇ, ನೊಂದವರು, ಬಡವರು, ನಿರ್ಗತಿಕರ ಹಾಗೂ ಅಮಾಯಕರ ನೋವುಗಳಿಗೂ ಸ್ಪಂದಿಸಿ, ನ್ಯಾಯ ಕೊಡಿಸುವ ಕೆಲಸಗಳನ್ನು ಸಂಘಟನೆ ಮಾಡಬೇಕಿದೆ ಎಂದು ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದರು.

ನಗರದ ಪಿ.ಬಿ. ರಸ್ತೆಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಬಾನುವಾರ ಸಂಜೆ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಜಿಲ್ಲಾ ಘಟಕದಿಂದ ಆಯೋಜಿಸಿದ್ದ 69ನೇ ಕನ್ನಡ ರಾಜ್ಯೋತ್ಸವದ ಸಾಂಸ್ಕೃತಿಕ ಸಂಭ್ರಮ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿ ವರ್ಷ ಕರವೇ ಪ್ರವೀಣ ಶೆಟ್ಟಿ ಬಣದ ಜಿಲ್ಲಾ ಘಟಕವು ಕನ್ನಡ ಪರವಾಗಿ ಅನೇಕ ಹೋರಾಟಗಳನ್ನು ಮಾಡಿಕೊಂಡು ಬರುತ್ತಿದೆ. ಇಂದು ಕನ್ನಡ ರಾಜ್ಯೋತ್ಸವ ಪ್ರಯುಕ್ತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸುವುದು ಅವರಿಗೆ ಪ್ರೋತ್ಸಾಹ ನೀಡುತ್ತಿರುವುದು ಉತ್ತಮವಾದ ಕೆಲಸವಾಗಿದೆ ಎಂದರು.

ಮೇಯರ್‌ ಕೆ.ಚಮನ್‌ಸಾಬ್ ಮಾತನಾಡಿ, ನನಗೆ ಕನ್ನಡ ರಾಜ್ಯೋತ್ಸವ ಎಂದರೆ ಬಹಳ ಇಷ್ಟ. ಇಡೀ ಕರ್ನಾಟಕದಲ್ಲಿ ಎಲ್ಲ ಜಾತಿ, ಧರ್ಮ, ವರ್ಗದವರು ಸೇರಿ ಆಚರಿಸುವ ಹಬ್ಬ ಎಂದರೆ ಅದು ಕನ್ನಡ ರಾಜ್ಯೋತ್ಸವ. ಅನೇಕ ಶಾಸನಗಳು ನಮ್ಮ ನಾಡಿನಲ್ಲಿವೆ. ಆಗಿನ ಕಾಲದ ಆಡಳಿತಗಾರರಾದ ಚೋಳರು, ಗಂಗರು ಇತರರು ರಾಜ್ಯಗಳನ್ನು ಆಳಿ ಕನ್ನಡದ ಬಗ್ಗೆ ಕಾಳಜಿ ವಹಿಸಿ, ಬೆಳೆಸಿ ಉಳಿಸುವ ಕಾರ್ಯ ಮಾಡಿ ಹೋಗಿದ್ದಾರೆ. ನಮಗೆ ಕನ್ನಡ ಉಳಿಯಲು ವಚನ ಸಾಹಿತ್ಯ ಕಾರಣ. ಅದನ್ನು ಉಳಿಸಿ ಬೆಳೆಸುವ ಕಾರ್ಯ ಆಗಬೇಕಿದೆ ಎಂದು ತಿಳಿಸಿದರು.

ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಹದಡಿ ಶ್ರೀ ವಿದ್ಯಾರಾಜ್ಯ ಯೋಗೀಶ್ವರ ಮಠದ ಶ್ರೀ ಸದ್ಗುರು ಮುರಳಿಧರ ಸ್ವಾಮೀಜಿ ಸಾನಿಧ್ಯದಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ಜಮ್ನಳ್ಳಿ ನಾಗರಾಜ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು. ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನಿಸಲಾಯಿತು. ಕಲಾವಿದ ಮಿಮಿಕ್ರಿ ಗೋಪಿ ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು.

ನಿವೃತ್ತ ಅಭಿಯೋಜಕ ಎಸ್.ವಿ.ಪಾಟೀಲ್, ಜಿಲ್ಲಾ ಕಾರ್ಯಾಧ್ಯಕ್ಷ ಸೈಯದ್ ನಜೀರ್, ಶಿವರಾಜಗೌಡ, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಆಶಾ ಉಮೇಶ, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ, ಮಾಜಿ ಶಾಸಕ ಎಸ್.ರಾಮಪ್ಪ ಸೇರಿದಂತೆ ಅನೇಕ ಗಣ್ಯರು, ರಮೇಶ ಮಾನೆ, ರಾಜೇಶ ಈಡಿಗರ, ಪುಷ್ಪ, ಸಿ.ಎನ್.ಮಂಜುನಾಥ, ಸಿದ್ದಾರ್ಥ ಪುಟಗನಾಳ, ಸಾಮ್ರಾಟ್, ಅನೂಪ್, ಪ್ರೀತಂ ಬಾಬು ಸೇರಿದಂತೆ ಸಂಘಟನೆ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.

- - -

ಬಾಕ್ಸ್‌ * ಕನ್ನಡಿಗರಿಗೆ ಉದ್ಯೋಗಕ್ಕಾಗಿ ಸಿಎಂಗೆ ಒತ್ತಡ ತನ್ನಿ ವೇದಿಕೆ ರಾಜ್ಯಾಧ್ಯಕ್ಷ ಪ್ರವೀಣಕುಮಾರ ಮಾತನಾಡಿ, ಕನ್ನಡ ನಾಡು- ನುಡಿಗಾಗಿ, ಕನ್ನಡ ನಾಮಫಲಕ ಕಡ್ಡಾಯಗೊಳಿಸುವ ಸಲುವಾಗಿ ಹಲವಾರು ರೀತಿಯ ಹೋರಾಟಗಳನ್ನು ಮಾಡಿದೆವು. ಬೆಂಗಳೂರಿನಲ್ಲಿ ಅನೇಕ ಐಟಿ- ಬಿಟಿ ಕಂಪನಿಗಳು ಹುಟ್ಟಿಕೊಂಡವು. ಅವುಗಳಲ್ಲಿ ಅವರವರ ರಾಜ್ಯಗಳಿಗೆ ಸಂಬಂಧಿಸಿದವರಿಗೆ ಮಾತ್ರ ಕೆಲಸಗಳನ್ನು ನೀಡುತ್ತಿದ್ದಾರೆ. ನಮ್ಮ ರಾಜ್ಯದವರು ಕೆಲಸಗಳಿಲ್ಲದೇ ಅಲೆಯಬೇಕಾಗಿದೆ. ನಮ್ಮ ಉದ್ಯೋಗ ನಮ್ಮ ಹಕ್ಕು ಎಂದು ನಮ್ಮ ಕನ್ನಡಿಗರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಸಿಎಂಗೆ ಶಾಸಕ ಬಸವಂತಪ್ಪ ಅವರು ಒತ್ತಡ ಹೇರಬೇಕು ಎಂದರು. - - - -15ಕೆಡಿವಿಜಿ42.ಜೆಪಿಜಿ:

ದಾವಣಗೆರೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಜಿಲ್ಲಾ ಘಟಕದಿಂದ ಆಯೋಜಿಸಿದ್ದ 69ನೇ ಕನ್ನಡ ರಾಜ್ಯೋತ್ಸವದ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವನ್ನು ಶಾಸಕ ಕೆ.ಎಸ್.ಬಸವಂತಪ್ಪ ಉದ್ಘಾಟಿಸಿದರು.