ಜ್ಞಾನದ ಹರಿವು ಅರಿವಿನೊಂದಿಗೆ ಆಗಲಿ: ರಾಘವೇಂದ್ರ ಬೆಟ್ಟಕೊಪ್ಪ

| Published : Jan 08 2025, 12:19 AM IST

ಸಾರಾಂಶ

ಆಹ್ಲಾದಕರ ಅನುಭವವನ್ನು ಪುಸ್ತಕಗಳು ನೀಡುತ್ತವೆ. ಬದುಕಿನ ಮಾರ್ಗದರ್ಶನ ಹಾಗೂ ಪ್ರೇರಣೆ ನೀಡುತ್ತವೆ. ಪ್ರತಿಯೊಬ್ಬರ ಮನೆಯಲ್ಲೂ ಒಂದು ಲೈಬ್ರರಿ ಇರಬೇಕು.

ಶಿರಸಿ: ಜ್ಞಾನದ ಹರಿವು ಅರಿವಿನೊಂದಿಗೆ ಆಗಬೇಕು ಎಂದು ಪತ್ರಕರ್ತ ರಾಘವೇಂದ್ರ ಬೆಟ್ಟಕೊಪ್ಪ ತಿಳಿಸಿದರು.ತಾಲೂಕಿನ ಹುಲೇಕಲ್‌ನ ಶ್ರೀದೇವಿ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡ ನನ್ನ ಮೆಚ್ಚಿನ ಪುಸ್ತಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಆಹ್ಲಾದಕರ ಅನುಭವವನ್ನು ಪುಸ್ತಕಗಳು ನೀಡುತ್ತವೆ. ಬದುಕಿನ ಮಾರ್ಗದರ್ಶನ ಹಾಗೂ ಪ್ರೇರಣೆ ನೀಡುತ್ತವೆ. ಪ್ರತಿಯೊಬ್ಬರ ಮನೆಯಲ್ಲೂ ಒಂದು ಲೈಬ್ರರಿ ಇರಬೇಕು. ಆ ಪುಸ್ತಕಗಳನ್ನು ಮಸ್ತಕದಲ್ಲೂ ಇಟ್ಟುಕೊಳ್ಳುವ ವ್ಯವಧಾನ ರೂಢಿಸಿಕೊಂಡರೆ ಬದುಕಿನ ದಾರಿಗೆ ಬುತ್ತಿಯಾಗುತ್ತದೆ. ಭಾಷಾ ಜ್ಞಾನದ ಅರಿವು, ಹರಿವು ಇದ್ದರೆ ಮುಂದೆ ಒಂದು ದಿನ ಗೌರವಿಸಲ್ಪಡುತ್ತಾರೆ. ಓದಿಗೆ ಸಮಯ ನೀಡಿ ಅದರ ಹರಿವನ್ನು ಹೆಚ್ಚಿಸಿಕೊಳ್ಳಬೇಕು. ನೋಡುವುದಕ್ಕಿಂತ ಸವಿದಾಗ ಸಿಗುವ ಅನುಭೂತಿ ಅವರ್ಣನೀಯ. ಪುಸ್ತಕ ಅದನ್ನು ನೀಡುತ್ತದೆ ಎಂದರು.ಲೇಖಕಿ ಭವ್ಯಾ ಹಳೆಯೂರು ಮಾತನಾಡಿ, ಬದುಕಿಗೆ ವ್ಯಕ್ತಿತ್ವ ಮುಖ್ಯ. ಹಣಕ್ಕಿಂತ ಬಾಂಧವ್ಯಕ್ಕೆ ಬೆಲೆ ಕೊಡಿ, ದ್ವೇಷ ಬೇಡ. ಬರಹಗಾರ ಮನು ವೈದ್ಯ, ಸಾಹಿತ್ಯ ಪ್ರೇಮವನ್ನು ಬೆಳೆಸಿಕೊಂಡರೆ ಬದುಕಿಗೆ ದಾರಿದೀಪವಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯಾಧ್ಯಕ್ಷ ಎಂ.ಎನ್. ಹೆಗಡೆ ಮಾತನಾಡಿ, ಪುಸ್ತಕಗಳ ಓದಿಗೆ ಹೆಚ್ಚಿನ ಮಹತ್ವ ಕೊಡಬೇಕು. ಪುಸ್ತಕಗಳ ಒಡನಾಟ ನಿರಂತರವಾಗಿ ಇರಲಿ. ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.ವಿದ್ಯಾರ್ಥಿನಿಯರಾದ ಸಿಂಚನಾ ಮರಾಠೆ ಸಂಗಡಿಗರು ಪ್ರಾರ್ಥಿಸಿದರು. ಪ್ರಾಚಾರ್ಯ ಡಿ.ಆರ್. ಹೆಗಡೆ ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಮೋಹನ ಭರಣಿ ಮಾತನಾಡಿದರು. ವಿದ್ಯಾರ್ಥಿ ಸುಬ್ರಹ್ಮಣ್ಯ ಪಟಗಾರ ನಿರ್ವಹಿಸಿದರು. ಲಾವಣ್ಯ ನಾಯ್ಕ, ಸ್ವಾತಿ ಭಟ್ಟ ಸ್ಪರ್ಧಾ ನಿರ್ವಹಣೆ ಮಾಡಿದರು. ವಿನಯ ಪೂಜಾರಿ ವಂದಿಸಿದರು.ಇದೇ ವೇಳೆ ನನ್ನ ಮೆಚ್ಚಿನ ಪುಸ್ತಕ ವಿದ್ಯಾರ್ಥಿಗಳ ಅಭಿಪ್ರಾಯ ಮಂಡನೆಯಲ್ಲಿ ೨೨ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಥಮ ಸ್ಥಾನವನ್ನು ಸ್ವಾತಿ ಜಿ. ಭಟ್ಟ, ದ್ವಿತೀಯ ಸ್ಥಾನವನ್ನು ಚಿನ್ಮಯ ಜಿ. ಭಟ್ಟ, ತೃತೀಯ ಸ್ಥಾನವನ್ನು ಗೌತಮಿ ಜಿ. ಹೆಗಡೆ ಪಡೆದರು. ಲಾವಣ್ಯ ಬಿ. ನಾಯ್ಕ, ಸುಚಿತ್ರಾ ಕೆ. ನಾಯ್ಕ ಈ ಇಬ್ಬರು ವಿದ್ಯಾರ್ಥಿಗಳು ಸಮಾಧಾನಕರ ಬಹುಮಾನವನ್ನು ಪಡೆದರು.

ಕ್ರಿಕೆಟ್ ಟೂರ್ನಿಯಲ್ಲಿ ಟೀಮ್ ಗೋಕರ್ಣ ಚಾಂಪಿಯನ್

ಗೋಕರ್ಣ: ಕಲಬುರಗಿಯಲ್ಲಿ ಶ್ರೀ ಸತ್ಯಪ್ರಮೋದ ಯುವ ಸೇನೆಯಿಂದ ವಿಪ್ರರಿಗಾಗಿ ಆಯೋಜಿಸಿದ್ದ ರಾಜ್ಯಮಟ್ಟದ ಶ್ರೀ ಟೀಕಾಚಾರ್ಯ ಪ್ರಿಮಿಯರ್ ಲೀಗ್ ಸೀಸನ್ ೨ ಕ್ರಿಕೆಟ್ ಪಂದ್ಯಾವಳಿಯಲ್ಲಿ ಇಲ್ಲಿನ ಶ್ರೀ ಹರಿಹರೇಶ್ವರ ಪಾಠಶಾಲೆಯ ವಿದ್ಯಾರ್ಥಿಗಳು ಹಾಗೂ ಊರಿನ ಆಟಗಾರರ ತಂಡ ಪ್ರಥಮ ಸ್ಥಾನ ಪಡೆದು ಅಭೂತಪೂರ್ವ ಜಯಭೇರಿ ಬಾರಿಸಿದೆ.ಫೈನಲ್ ಪಂದ್ಯದಲ್ಲಿ ಸತ್ಯ ಪ್ರಮೋದ ಯುವ ಸೇನೆ ತಂಡವನ್ನು ಮಣಿಸಿ ೧೫ ರನ್‌ಗಳಿಂದ ವಿಜಯಪತಾಕೆ ಹಾರಿಸಿ ಗೋಕರ್ಣಕ್ಕೆ ಕೀರ್ತಿ ತಂದಿದ್ದಾರೆ. ಸರಣಿ ಉದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ಗೋಕರ್ಣ ತಂಡದ ಅನಿಶ್ ಹೆಗಡೆ ಅವರು ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.ಶ್ರೀ ಹರಿಹರೇಶ್ವರ ಪಾಠಶಾಲೆಯ ವಿದ್ಯಾರ್ಥಿಗಳ ಉತ್ತಮ ಪ್ರದರ್ಶನ ಮತ್ತು ಗಣೇಶ ಅಡಿ ಮೂಳೆಯವರ ನಾಯಕತ್ವ ಸರಣಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿತ್ತು. ಅಚ್ಚುಕಟ್ಟಾಗಿ ಟೂರ್ನಿ ಆಯೋಜಿಸಿದ್ದ ಸತ್ಯಪ್ರಮೊದ ಯುವ ಸೇನೆಯವರಿಗೆ ಹಾಗೂ ಫೈನಲ್‌ನಲ್ಲಿ ಜಯ ಗಳಿಸಿದ ಟೀಮ್ ಗೋಕರ್ಣ ತಂಡಕ್ಕೆ ಶ್ರೀ ಹರಿಹರೇಶ್ವರ ಪಾಠಶಾಲೆಯ ಪ್ರಾಚಾರ್ಯ ಉದಯ ಮಯ್ಯರ್ ಅಭಿನಂದಿಸಿದ್ದಾರೆ.