ಕೋಲಾರದ ವಾಲಿಬಾಲ್ ಹಿರಿಮೆ ಮರುಕಳಿಸಲಿ: ಶ್ರೀನಾಥ್

| Published : May 12 2024, 01:17 AM IST

ಸಾರಾಂಶ

ಪಂದ್ಯಾವಳಿಯು ಮೂರು ದಿನಗಳ ಕಾಲ ಲೀಗ್ ಮಾದರಿಯಲ್ಲಿ ನಡೆಯಲಿದ್ದು, ಭಾನುವಾರ ಸಂಜೆ ಅಂತಿಮ ಪಂದ್ಯಗಳು ಜರುಗಲಿವೆ ಎಂದು ಸಂಘಟಕರು ಘೋಷಿಸಿದರು.

ಕನ್ನಡಪ್ರಭ ವಾರ್ತೆ ಕೋಲಾರ

ಜಿಲ್ಲೆಯು ವಾಲಿಬಾಲ್ ಕ್ರೀಡೆಯಲ್ಲಿ ಕೆಲವು ದಶಕಗಳ ಹಿಂದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಕ್ರೀಡಾಪಟುಗಳನ್ನು ಕೊಡುಗೆಯಾಗಿ ನೀಡಿತ್ತು, ಕೋಲಾರ ಜಿಲ್ಲೆಯ ವಾಲಿಬಾಲ್ ಹಿರಿಮೆಯು ಮತ್ತೆ ಮರುಕಳಿಸಬೇಕಿದೆ ಎಂದು ಜೆಡಿಎಸ್ ಮುಖಂಡ ಸಿ.ಎಂ.ಆರ್.ಶ್ರೀನಾಥ್ ಹೇಳಿದರು.

ನಗರದ ಜೂನಿಯರ್ ಕಾಲೇಜು ಯುವಜನ ಕೇಂದ್ರದ ಮೈದಾನದಲ್ಲಿ ಶುಕ್ರವಾರ ಸಂಜೆ ಮೂರು ದಿನಗಳ ಹೊನಲು ಬೆಳಕಿನ ಕೋಲಾರ ಜಿಲ್ಲಾ ವಾಲಿಬಾಲ್ ಲೀಗ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಅಂದು ಕೋಲಾರ ಜಿಲ್ಲೆಯ ಪ್ರತಿ ಗ್ರಾಮದಲ್ಲಿಯೂ ವಾಲಿಬಾಲ್ ಆಟಗಾರರಿದ್ದರು, ಆದರೆ, ಅಂತಹ ಕ್ರೀಡಾಪಟುಗಳಿಗೆ ಆಗ ಸೂಕ್ತ ಅವಕಾಶಗಳು ಸಿಗದೇ ಸಾಕಷ್ಟು ಮಂದಿ ಗ್ರಾಮೀಣ ಮಟ್ಟದ ಆಟಕ್ಕೇ ಸೀಮಿತವಾಗಿದ್ದರು. ಆದರೆ, ಇದೀಗ ಮತ್ತೆ ವಾಲಿಬಾಲ್ ಆಟದ ಹೊಸ ಮೆರಗು ನೀಡಲು ಸ್ವಾಮಿ ವಿವೇಕಾನಂದ ವಾಲಿಬಾಲ್ ಕ್ಲಬ್ ಮುಂದಾಗಿದ್ದು, ಕ್ರಿಕೆಟ್ ಮಾದರಿಯಲ್ಲಿಯೇ ಲೀಗ್ ಪಂದ್ಯಾವಳಿಗಳನ್ನು ಆಯೋಜಿಸುತ್ತಿರುವುದು ಕ್ರೀಡಾಪಟುಗಳಿಗೆ ಸೂಕ್ತ ಅವಕಾಶ ಕಲ್ಪಿಸಲು ಸಾಧ್ಯ ಎಂದರು.

ಹಿರಿಯ ವಾಲಿಬಾಲ್ ಆಟಗಾರರಾದ ಮಂಜು, ಸುಬ್ಬಣ್ಣ ಹಾಗೂ ಪಂದ್ಯಾವಳಿಗಳಿಗೆ ಸಹಕರಿಸಿದವರಿಗೆ ಸನ್ಮಾನಿಸಿದರು.

ಪಂದ್ಯಾವಳಿಯು ಮೂರು ದಿನಗಳ ಕಾಲ ಲೀಗ್ ಮಾದರಿಯಲ್ಲಿ ನಡೆಯಲಿದ್ದು, ಭಾನುವಾರ ಸಂಜೆ ಅಂತಿಮ ಪಂದ್ಯಗಳು ಜರುಗಲಿವೆ ಎಂದು ಸಂಘಟಕರು ಘೋಷಿಸಿದರು.

ಹಿರಿಯ ರಾಷ್ಟ್ರೀಯ ವಾಲಿಬಾಲ್ ಆಟಗಾರ ಬಂಗಾರಪೇಟೆ ಹೇಮಂತ್, ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್, ಹಿರಿಯ ಆಟಗಾರ ರಾಜು ಇದ್ದರು.