ಕೃಷಿಸಖಿಯರು ಇತರ ಮಹಿಳೆಯರಿಗೆ ದಾರಿದೀಪವಾಗಲಿ

| Published : Nov 24 2024, 01:45 AM IST / Updated: Nov 24 2024, 01:46 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ: ಕೃಷಿ ಸಖಿಯರು ಕೃಷಿ ತರಬೇತಿ ಪಡೆದು ತಮ್ಮ ಕೌಶಲ್ಯ, ಉದ್ಯಮಶೀಲತೆ ವೃದ್ಧಿಸಿಕೊಂಡು, ಇತರ ಮಹಿಳೆಯರ ಜೀವನೋಪಾಯಕ್ಕೆ ದಾರಿದೀಪವಾಗಬೇಕೆಂದು ವಿದ್ಯಾಧಿಕಾರಿ ಡಾ.ಎ.ಭೀಮಪ್ಪ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ: ಕೃಷಿ ಸಖಿಯರು ಕೃಷಿ ತರಬೇತಿ ಪಡೆದು ತಮ್ಮ ಕೌಶಲ್ಯ, ಉದ್ಯಮಶೀಲತೆ ವೃದ್ಧಿಸಿಕೊಂಡು, ಇತರ ಮಹಿಳೆಯರ ಜೀವನೋಪಾಯಕ್ಕೆ ದಾರಿದೀಪವಾಗಬೇಕೆಂದು ವಿದ್ಯಾಧಿಕಾರಿ ಡಾ.ಎ.ಭೀಮಪ್ಪ ಕರೆ ನೀಡಿದರು.

ರಾಜ್ಯ ಸರ್ಕಾರದ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆಗಳ ಸಹಯೋಗದೊಂದಿಗೆ ನಗರದ ಹೊರವಲಯದ ವಿಜಯಪುರ ಕೃಷಿ ವಿಜ್ಞಾನ ಕೇಂದ್ರದಲ್ಲಿ 6 ದಿನಗಳ ಕಾಲ ಹಮ್ಮಿಕೊಂಡ ಕೃಷಿಸಖಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೃಷಿ ಸಖಿಯರು ನೈಸರ್ಗಿಕ ಕೃಷಿ, ಬೆಳೆ ಪರಿವರ್ತನೆ, ಕಡಿಮೆ ವೆಚ್ಚದ ಪರಿಕರ ತಯಾರಿಕೆ, ಎರೆಹುಳು ಕೃಷಿ, ಹೈನೋದ್ಯಮ ಮುಂತಾದ ಸುಸ್ಥಿರ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ಅನುವಾಗುವಂತೆ ತರಬೇತಿ ಹೊಂದಬೇಕು ಎಂದು ಹೇಳಿದರು.

ಅತಿಥಿಗಳಾಗಿ ಆಗಮಿಸಿದ ಜಿಪಂನ ಎನ್.ಆರ್‌.ಎಲ್.ಎಂ ಕಾರ್ಯಕ್ರಮ ವ್ಯವಸ್ಥಾಪಕ ವಿಶ್ವನಾಥ ಮಾತನಾಡಿ, ಎನ್.ಆರ್‌.ಎಲ್.ಎಮ್ ವಿಧೇಯಕ ಸ್ವಸಹಾಯ ಗುಂಪಿನ ಮಹಿಳಾ ಸದಸ್ಯ ರೈತರಿಗೆ ಕೃಷಿ, ತೋಟಗಾರಿಕೆ, ರೇಷ್ಮೆ, ಪಶು ಸಂಗೋಪನೆ, ಮೀನುಗಾರಿಕೆ ಇಲಾಖಾ ಕಾರ್ಯಕ್ರಮಗಳ ವಿಸ್ತರಣಾ ಸೇವೆಗಳನ್ನು ಪರಿಣಾಮಕಾರಿಯಾಗಿ ಒದಗಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಹ ವಿಸ್ತರಣಾ ನಿರ್ದೇಶಕ ಡಾ.ರವೀಂದ್ರ ಬೆಳ್ಳಿ ಮಾತನಾಡಿ, ಕೃಷಿ ಸಖಿಯರು 6 ದಿನಗಳ ತರಬೇತಿ ನಂತರ ಸಂಪನ್ಮೂಲ ವ್ಯಕ್ತಿಗಳಾಗಿ ತಮ್ಮ ವ್ಯಾಪ್ತಿಯ ರೈತರಿಗೆ ಹಾಗೂ ರೈತ ಮಹಿಳೆಯರಿಗೆ ತರಬೇತಿ ನೀಡಬೇಕು. ತಾವು ಪಡೆದ ತಾಂತ್ರಿಕ ಜ್ಞಾನದಿಂದ ಉದ್ಯಮಶೀಲರಾಗಿ, ಗ್ರಾಮದಲ್ಲಿ ಸ್ವಸಹಾಯ ಸಂಘಗಳಿಗೆ ಮಾರ್ಗದರ್ಶನ ಮಾಡಿ, ಬೆಳೆ ಬೆಳೆಯುವುದರಿಂದ ಹಿಡಿದು ಸಂಸ್ಕರಣೆ, ಮೌಲ್ಯವರ್ದನೆ ಮತ್ತು ಮಾರುಕಟ್ಟೆ ಹಂತದವರೆಗೆ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ರೈತರ ಆರ್ಥಿಕ ಅಭಿವೃದ್ಧಿಗೆ ಸಹಕರಿಸುವಂತೆ ತಿಳಿಸಿದರು.

ಹಿರಿಯ ವಿಜ್ಞಾನಿ ಡಾ.ಎಸ್.ಎಂ.ವಸ್ತ್ರದ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಶ್ರೀಶೈಲ ರಾಠೋಡ ಕಾರ್ಯಕ್ರಮ ನಿರೂಪಿಸಿದರು. ಡಾ.ಶಿವರಾಜ ಕಾಂಬಳೆ ಸ್ವಾಗತಿಸಿದರು. ಡಾ.ಕಿರಣ ಸಾಗರ ವಂದಿಸಿದರು. ಕಾರ್ಯಕ್ರಮದಲ್ಲಿ ಇಂಡಿ, ಚಡಚಣ, ಸಿಂದಗಿ, ಆಲಮೇಲ ಭಾಗದ ಕೃಷಿ ಸಖಿಯರು ತರಬೇತಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.