ಸಾರಾಂಶ
- ರಾಜ್ಯೋತ್ಸವ ಪ್ರಯುಕ್ತ ಜಾನಪದ ಕಲಾಮೇಳ ಪ್ರದರ್ಶನ ಉದ್ಘಾಟಿಸಿ ಡಿಸಿ ಸಲಹೆ - - - ಕನ್ನಡಪ್ರಭ ವಾರ್ತೆ ದಾವಣಗೆರೆ ನಾಡಿನ ಸಾಹಿತಿಗಳು, ಕಲಾವಿದರು, ಸಂತ -ಶರಣರು, ಮಹನೀಯರ, ಅನನ್ಯ ಕೊಡುಗೆಯಿಂದ ಕನ್ನಡ ಭಾಷೆ ಸಮೃದ್ಧಗೊಂಡಿದೆ. ಕನ್ನಡ ಭಾಷೆಯನ್ನು ಪ್ರೀತಿಸಿ, ಗೌರವಿಸುವುದು ಕನ್ನಡಿಗರ ಕೆಲಸವಾಗಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಸಂತಸ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ವಕೀಲರ ಸಂಘದ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಮಂಗಳವಾರ ಜಿಲ್ಲಾ ವಕೀಲರ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಶ್ರೀ ಬಸವೇಶ್ವರ ಗ್ರಾಮೀಣ ಸಾಂಸ್ಕೃತಿಕ ಕಲಾ ವೇದಿಕೆ ಎಲೆಬೇತೂರು ಆಶ್ರಯದಲ್ಲಿ ಆಯೋಜಿಸಿದ್ದ 69ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಜಾನಪದ ಕಲಾಮೇಳ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.ನ್ಯಾಯಾಲಯಗಳಲ್ಲಿ ನ್ಯಾಯಾಧೀಶರು, ವಕೀಲರು, ಕನ್ನಡದಲ್ಲಿ ವ್ಯವಹರಿಸಬೇಕು. ಜಿಲ್ಲಾ ವಕೀಲರ ಸಂಘ ರಚನಾತ್ಮಕ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿದೆ ಎಂದು ಶ್ಲಾಘಿಸಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಮಾತನಾಡಿ, ಕನ್ನಡ ಭಾಷೆ ಸರಳ, ಸುಲಭ ಹಾಗೂ ಜನಸಾಮಾನ್ಯರ ಭಾಷೆಯಾಗಿದೆ. ಇತಿಹಾಸ ಪರಂಪರೆ ಇರುವಂತಹ ಶ್ರೇಷ್ಠ ಭಾಷೆಯೂ ಆಗಿದೆ. ಆದ್ದರಿಂದ ನಾವೆಲ್ಲರೂ ನ್ಯಾಯಾಲಯದಲ್ಲಿ ಅತಿ ಹೆಚ್ಚು ಕನ್ನಡ ಭಾಷೆ ಬಳಸಲು ಮುಂದಾಗೋಣ ಎಂದರು.ಜಿಲ್ಲಾ ವಕೀಲರ ಸಂಘ ಅಧ್ಯಕ್ಷ ಎಲ್.ಎಚ್. ಅರುಣ್ ಕುಮಾರ್ ಮಾತನಾಡಿ, ನಾವು ಕನ್ನಡ ಭಾಷೆಗೆ ಪ್ರಥಮ ಆದ್ಯತೆ ನೀಡಬೇಕು. ಭಾಷೆಯ ಸೊಬಗು- ಸೊಗಡನ್ನು ಬಳಸುವುದರ ಮೂಲಕ ಆನಂದಿಸಬೇಕು. ಗ್ರಾಮೀಣ ಕಲೆಗಳು ಬದುಕಿಗೆ ಮೌಲ್ಯಗಳನ್ನು ನೀಡುತ್ತವೆ. ಜಾನಪದ ಕಲೆ, ಕಲಾವಿದರನ್ನು ಪ್ರೋತ್ಸಾಹಿಸಲು ಇಂತಹ ಕಾರ್ಯಕ್ರಮಗಳು ನಿರಂತರ ನಡೆಯಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸ್ಫೂರ್ತಿ ಸಾಂಸ್ಕೃತಿಕ ಸೇವಾ ಸಂಘ ಅಧ್ಯಕ್ಷ ಎನ್.ಎಸ್. ರಾಜು, ಸಂಘದ ಅಧ್ಯಕ್ಷ ಕೆ.ಎಂ. ಅರುಣ್ ಕುಮಾರ್ ಜಿ.ಕೆ.ಬಸವರಾಜ, ಎ.ಎಸ್.ಮಂಜುನಾಥ, ಎಸ್.ಬಸವರಾಜ, ವಿಠೋಬ ರಾವ್ ಇತರರು ಇದ್ದರು.ಗ್ರಾಮೀಣ ಕಲಾವಿದರಾದ ಬಿ.ಹನುಮಂತಾಚಾರಿ, ಬಸವನಗೌಡ ಪಾಟೀಲ್, ಕೆ.ಜಯಣ್ಣ ತಂಡದವರಿಂದ ವೀರಗಾಸೆ, ಭಜನೆ, ಡೊಳ್ಳಿನ ಪದಗಳು ಪ್ರದರ್ಶನಗೊಂಡವು.
- - - -3ಕೆಡಿವಿಜಿ46.ಜೆಪಿಜಿ:ದಾವಣಗೆರೆಯಲ್ಲಿ ಜಿಲ್ಲಾ ವಕೀಲರ ಸಂಘದಿಂದ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಉದ್ಘಾಟಿಸಿದರು.