ನ್ಯಾಯವಾದಿಗಳು ನ್ಯಾಯದ ರಕ್ಷಕರಾಗಿರಲಿ

| Published : Jul 18 2025, 12:45 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ನ್ಯಾಯವಾದಿಗಳು ನ್ಯಾಯದ ರಕ್ಷಕರಾಗಿರಬೇಕು. ದುರ್ಬಲರ, ಧ್ವನಿಯಿಲ್ಲದವರ ಧ್ವನಿಯಾಗಿರಬೇಕು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹರೀಶ್.ಎ. ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ನ್ಯಾಯವಾದಿಗಳು ನ್ಯಾಯದ ರಕ್ಷಕರಾಗಿರಬೇಕು. ದುರ್ಬಲರ, ಧ್ವನಿಯಿಲ್ಲದವರ ಧ್ವನಿಯಾಗಿರಬೇಕು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹರೀಶ್.ಎ. ಹೇಳಿದರು.

ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಕಾನೂನು ಶಾಲೆಯಲ್ಲಿ ನಡೆದ ಮೊದಲ ವಾರ್ಷಿಕೋತ್ಸವದಲ್ಲಿ ಮಾತನಾಡಿ, ಕಾನೂನು ವೃತ್ತಿಯು ಬಲವಾದ ನೀತಿಶಾಸ್ತ್ರವಾಗಿದ್ದು, ನಿರಂತರ ಕಲಿಕೆ ಮತ್ತು ಆಳವಾದ ಕರ್ತವ್ಯ ಪ್ರಜ್ಞೆಯನ್ನು ಬಯಸುತ್ತದೆ. ಕಾನೂನು ವಿದ್ಯಾರ್ಥಿಗಳು ಕಾನೂನಿನ ನಿಬಂಧನೆಗಳನ್ನು ಕಲಿಯುವುದಲ್ಲದೆ, ನಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಬಲಪಡಿಸುವ ಮೌಲ್ಯಗಳ ಪ್ರಕಾರ ಬದುಕಲು ಕಲಿಯಬೇಕು ಎಂದು ಅವರು ಹೇಳಿದರು.

ಡೀಮ್ಡ್ ವಿವಿ ಕುಲಪತಿ ಡಾ.ಅರುಣ ಇನಾಮದಾರ ಮಾತನಾಡಿ, ವಿದ್ಯಾರ್ಥಿಗಳು ನಿರಂತರ ಅಧ್ಯಯನ ಮತ್ತು ಸತತ ಪ್ರಯತ್ನದಿಂದ ಯಶಸ್ಸು ಸಾಧಿಸಬೇಕು. ಪ್ರಯತ್ನಗಳು ಮಾತ್ರ ಫಲಿತಾಂಶಗಳನ್ನು ನೀಡುತ್ತವೆ. ಅಲ್ಲದೇ, ವಿದ್ಯಾರ್ಥಿಗಳು ಹೊಸ ಕಾನೂನುಗಳ ಬಗ್ಗೆ ತಿಳಿದಕೊಂಡು ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದು ಹೇಳಿದರು.

ವಿವಿ ಸಮಕುಲಾಧಿಪತಿ ಡಾ.ವೈ.ಎಂ.ಜಯರಾಜ ಮಾತನಾಡಿ, ಸಮಾಜ ಬದಲಾದಂತೆ ಕಾನೂನುಗಳು ಅದಕ್ಕೆ ತಕ್ಕಂತೆ ಬದಲಾಗುತ್ತವೆ. ವಿದ್ಯಾರ್ಥಿಗಳು ಬದಲಾಗುತ್ತಿರುವ ಕಾನೂನುಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಹೇಳಿದ ಅವರು, ನಾನಾ ತತ್ವಜ್ಞಾನಿಗಳ ಸಿದ್ಧಾಂತಗಳು ಮತ್ತು ಮಾನವ ಹಕ್ಕುಗಳ ಬಗ್ಗೆ ವಿವರಿಸಿದರು.

ಈ ವೇಳೆ ಡೀಮ್ಡ್ ವಿವಿ ಕುಲಸಚಿವ ಡಾ.ಆರ್‌.ವಿ.ಕುಲಕರ್ಣಿ, ಉಪಕುಲಸಚಿವ ಸತೀಶ ಪಾಟೀಲ, ಹಣಕಾಸು ಅಧಿಕಾರಿ ಬಿ.ಎಸ್.ಪಾಟೀಲ, ಬಿ.ಎಲ್.ಡಿ.ಇ ಸಂಸ್ಥೆಯ ಕಾನೂನು ಸಲಹೆಗಾರ ಸುರೇಶ ಹಕ್ಕಿ, ವಿದ್ಯಾರ್ಥಿ ಸಂಘದ ಸಂಯೋಜಕ ಶೇಷಾದ್ರಿ.ಕೆ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾನೂನು ಶಾಲೆಯ ಪ್ರಾಚಾರ್ಯ ಡಾ.ರಘುವೀರ ಕುಲಕರ್ಣಿ ಸ್ವಾಗತಿಸಿದರು. ಉಪನ್ಯಾಸಕಿ ಲಾವಣ್ಯ ಪರಿಚಯಿಸಿದರು. ಪಲ್ಲವಿ ನಿರೂಪಿಸಿದರು.