ವಕೀಲರು ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಳ್ಳಲಿ: ಉಪಲೋಕಾಯುಕ್ತ ನ್ಯಾ.ಬಿ. ವೀರಪ್ಪ

| Published : Mar 17 2025, 12:32 AM IST

ವಕೀಲರು ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಳ್ಳಲಿ: ಉಪಲೋಕಾಯುಕ್ತ ನ್ಯಾ.ಬಿ. ವೀರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಸಂವಿಧಾನದ ಪ್ರಮುಖ ನಾಲ್ಕು ಅಂಗಗಳಾದ ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗ ಮತ್ತು ಪತ್ರಿಕಾರಂಗಗಳು ಸಮರ್ಪಕವಾಗಿ ತಮ್ಮ ಕೆಲಸಗಳನ್ನು ನಿರ್ವಹಿಸದಿದ್ದರೇ ಸಾಮಾನ್ಯ ಜನರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕುತ್ತಾರೆ.

ಸಾರ್ವಜನಿಕ ಆಡಳಿತ, ಲೋಕಾಯುಕ್ತ ಕಾಯ್ದೆ-1988ರಡಿ ವಕೀಲರ ಪಾತ್ರದ ಕುರಿತು ಉಪನ್ಯಾಸಕನ್ನಡಪ್ರಭ ವಾರ್ತೆ ಹೊಸಪೇಟೆ

ಸಂವಿಧಾನದ ಪ್ರಮುಖ ನಾಲ್ಕು ಅಂಗಗಳಾದ ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗ ಮತ್ತು ಪತ್ರಿಕಾರಂಗಗಳು ಸಮರ್ಪಕವಾಗಿ ತಮ್ಮ ಕೆಲಸಗಳನ್ನು ನಿರ್ವಹಿಸದಿದ್ದರೇ ಸಾಮಾನ್ಯ ಜನರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕುತ್ತಾರೆ. ವಕೀಲರು ಸಾಮಾಜಿಕ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಮಾಧ್ಯಮ ಪ್ರತಿನಿಧಿಗಳು, ಇವರ ಹೋರಾಟಕ್ಕೆ ಸಾಥ್‌ ನೀಡಬೇಕು ಎಂದು ಉಪಲೋಕಾಯುಕ್ತ ನ್ಯಾ. ಬಿ. ವೀರಪ್ಪ ತಿಳಿಸಿದರು.

ನಗರದ ನ್ಯಾಯಾಲಯ ಆವರಣದಲ್ಲಿನ ಜಿಲ್ಲಾ ವಕೀಲರ ಸಂಘದ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಆಡಳಿತ ಮತ್ತು ಲೋಕಾಯುಕ್ತ ಕಾಯ್ದೆ-1988ರಡಿಯಲ್ಲಿ ವಕೀಲರ ಪಾತ್ರದ ಕುರಿತು ಏರ್ಪಡಿಸಿದ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ದೇಶಕ್ಕೆ ಸ್ವಾತಂತ್ರ‍್ಯ ತರುವಲ್ಲಿ ವಕೀಲರ ಪಾತ್ರ ಮಹತ್ವದ್ದಾಗಿದೆ. ವಕೀಲ ವೃತ್ತಿಯಲ್ಲಿದ್ದ ಮಹಾತ್ಮಾ ಗಾಂಧೀಜಿ, ಸರ್ದಾರ್ ವಲ್ಲಭಾಯಿ ಪಟೇಲ್, ಬಾಬಾ ಸಾಹೇಬ್ ಅಂಬೇಡ್ಕರ್‌ ಅವರ ಹೋರಾಟದ ಫಲದಿಂದಲೇ ಸ್ವಾತಂತ್ರ‍್ಯ ಸಿಗಲು ಸಾಧ್ಯವಾಗಿದೆ. ಸ್ವಾತಂತ್ರ‍್ಯ ಹೋರಾಟದಲ್ಲಿ ಕೇವಲ ಪುರುಷರಷ್ಟೇ ಅಲ್ಲ, ವೀರವನಿತೆಯರಾದ ಕಿತ್ತೂರು ರಾಣಿ ಚೆನ್ನಮ್ಮ, ಝಾನ್ಸಿರಾಣಿ ಲಕ್ಷ್ಮೀದೇವಿ, ಒನಕೆ ಓಬವ್ವರಂತಹ ಮಹಿಳೆಯರು ತ್ಯಾಗ, ಬಲಿದಾನಗಳಿಂದ ಇಂದು ನಾವುಗಳು ಸ್ವಾತಂತ್ರ‍್ಯವನ್ನು ಅನುಭವಿಸುತ್ತಿದ್ದೇವೆ. ಸ್ವಾತಂತ್ರ‍್ಯ ನಂತರ ಎಲ್ಲಾ ಅಂಗಗಳು ಸರಿಯಾಗಿ ಕೆಲಸ ಮಾಡಬೇಕಾದರೇ ವಕೀಲರ ಪಾತ್ರ ಮುಖ್ಯವಾಗಿದೆ. ಶಾಸಕಾಂಗದಿಂದ ಒಂದು ಶಾಸನ ರಚಿಸುವ ಮುನ್ನ ವಕೀಲರ ಅಭಿಪ್ರಾಯ ಪಡೆದು ಕಾಯ್ದೆ ರೂಪಿಸುತ್ತಾರೆ. ಸ್ವಾತಂತ್ರ‍್ಯ ಪೂರ್ವದಲ್ಲಿ ವಕೀಲರು ಸ್ಥಳೀಯ ಸಮಸ್ಯೆಗಳ ವಿರುದ್ಧ ಸಂಘಟನೆ ಕಟ್ಟಿಕೊಂಡು ಸಾಮಾಜಿಕ ನ್ಯಾಯಕ್ಕೆ ಹೋರಾಟಕ್ಕಿಳಿಯುತ್ತಿದ್ದರು. ಸ್ವಾತಂತ್ರ‍್ಯದ ಬಳಿಕ ಸ್ವಾರ್ಥಕ್ಕೆ ಮೀಸಲಾಗಿಬಿಟ್ಟಿದ್ದೇವೆ. ವಕೀಲ ವೃತ್ತಿಗೆ ತುಂಬಾ ಪಾವಿತ್ರ‍್ಯತೆ ಇದೆ. ಮಹಿಳಾ ವಕೀಲರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು.

ಇತ್ತೀಚೆಗೆ ಕಂಪನಿಗಳ ಆರಂಭದಿಂದ ಬಹುತೇಕ ವಕೀಲರು ವಕಾಲತ್ತು ಬಿಟ್ಟು ಕಂಪನಿಗಳಿಗೆ ಕಾನೂನು ಸಲಹೆಗಾರರಾಗಿ ಕೆಲಸ ಮಾಡಲು ಉತ್ಸುಕರಾಗಿದ್ದಾರೆ. ಅನ್ಯಾಯಕ್ಕೊಳಗಾದ ಜನರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿ ಅದರ ತೃಪ್ತಿಯೇ ಬೇರೆ ಇರುತ್ತದೆ. ನ್ಯಾಯ ಪಡೆದ ಕುಟುಂಬ ನಮ್ಮನ್ನು ದೇವರಂತೆ ಕಾಣುತ್ತಾರೆ, ಇಂತಹ ಗೌರವ ಕಂಪನಿಗಳಿಂದ ಕೊಡಲು ಸಾಧ್ಯವೇ? ಹಾಗಾಗಿ ಯುವಜನತೆ ವಕಾಲತ್ತು ಮಾಡಲು ಹೆಚ್ಚಿನ ಆಸಕ್ತಿ ವಹಿಸಬೇಕಿದೆ. ಎಲ್‌ಎಲ್‌ಬಿ ಮುಗಿಸಿದ ವಕೀಲರು ನ್ಯಾಯಾಂಗದ ಸೈನಿಕರಿದ್ದಂತೆ. ಸೈನ್ಯಕ್ಕೆ ಬಲ ಬೇಕಾದರೆ ಎಲ್ಲರೂ ವಕಾಲತ್ತು ಮಾಡುವುದಕ್ಕೆ ಆಸಕ್ತಿ ವಹಿಸಬೇಕಿದೆ ಎಂದರು.ಶಾಸಕಾಂಗ, ಕಾರ್ಯಾಂಗದ ವೈಖರಿಗೆ ಜನರ ಅಸಮಾಧಾನವಿದೆ. ಪತ್ರಿಕಾರಂಗ ನಿರ್ದಾಕ್ಷಿಣ್ಯವಾಗಿ ವರದಿ ಮಾಡುವುದನ್ನು ಮರೆತಿದ್ದಾರೆ. ಟಿಆರ್‌ಪಿಗಾಗಿ ಕೆಲಸ ಮಾಡದೇ ಸಾಮಾಜಿಕ ಸಂಕಷ್ಟಗಳಿಗೆ ಆದ್ಯತೆ ನೀಡಿ ಆಡಳಿತ ವರ್ಗಕ್ಕೆ ಚುರುಕು ಮುಟ್ಟಿಸುವಂತೆ ಕಾರ್ಯನಿರ್ವಹಿಸಬೇಕಿದೆ. ಅಂತಿಮವಾಗಿ ನ್ಯಾಯಾಂಗದ ಮೇಲೆ ಜನರು ವಿಶ್ವಾಸವಿಟ್ಟಿದ್ದಾರೆ. ಕಾನೂನಿನ ಅರಿವಿಲ್ಲದ ವಿದ್ಯಾವಂತರು ಸಮಾಜಕ್ಕೆ ಮಾರಕವಾಗಿದ್ದಾರೆ. ನ್ಯಾಯಾಂಗದಿಂದ ಜನರ ಸಂಕಷ್ಟಗಳಿಗೆ ನ್ಯಾಯ ಸಿಗಬೇಕಾದರೇ ಗ್ರಾಮೀಣ ಜನರಿಗೆ ಕಾನೂನಿನ ಅರಿವು ಮೂಡಿಸುವಲ್ಲಿ ವಕೀಲರು ಶ್ರಮಿಸಬೇಕಿದೆ. ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚೆಚ್ಚು ಕಾನೂನು ಅರಿವು, ನೆರವು ಕಾರ್ಯಕ್ರಮಗಳನ್ನು ಮಾಡಿ ಕಾನೂನು ಜ್ಞಾನವನ್ನು ಹೆಚ್ಚಿಸಬೇಕಿದೆ ಎಂದರು.

ನ್ಯಾಯಾಧೀಶರಾದ ಅಬ್ದುಲ್ ರೆಹಮಾನ್ ಎ. ನಂದಗಡಿ, ಲೋಕಾಯುಕ್ತ ಅಪರ ನಿಬಂಧಕ ಕೆ.ಎಂ. ರಾಜಶೇಖರ್, ಪೃಥ್ವಿರಾಜ್ ವರ್ಣೇಕರ್, ಅರವಿಂದ್, ರಾಜೇಶ್ ಹೊಸಮನಿ, ವಕೀಲರ ಸಂಘದ ಅಧ್ಯಕ್ಷ ಕೆ. ಪ್ರಹ್ಲಾದ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಮೂರ್ತಿ, ಬಳ್ಳಾರಿ ಲೋಕಾಯುಕ್ತ ಎಸ್ಪಿ ಸಿದ್ದರಾಜು, ನ್ಯಾಯಾಧೀಶರಾದ ರಮೇಶ್ ಬಾಬು, ಹೇಮಾಲತಾ ಹುಲ್ಲೂರು, ಪ್ರಶಾಂತ್ ನಾಗಲಾಪುರ, ಅಶೋಕ್ ಆರ್., ಸಂಜೀವ ಕುಮಾರ್ ಮತ್ತಿತರರಿದ್ದರು. ವಕೀಲರಾದ ಕರುಣಾನಿಧಿ, ಎಚ್‌.ಪಿ. ಕಲ್ಲಂಭಟ್‌ ನಿರ್ವಹಿಸಿದರು.