ಸಾರಾಂಶ
ಕನ್ನಡ ಸಾಹಿತ್ಯ ಸಮ್ಮೇಳನಗಳು ಸಾಹಿತ್ಯ, ಸಂಂಸ್ಕೃತಿ, ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಡುವಲ್ಲಿ ಕಾರ್ಯಪ್ರವೃತ್ತವಾಗಿ ಕೆಲಸ ಮಾಡಬೇಕು ಎಂದು ಬೀಳಗಿ ಶಾಸಕ ಜೆ.ಟಿ.ಪಾಟೀಲ ಹೇಳಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ (ರಾಮ ಮನಗೂಳಿ ವೇದಿಕೆ)
ಕನ್ನಡ ಸಾಹಿತ್ಯ ಸಮ್ಮೇಳನಗಳು ಸಾಹಿತ್ಯ, ಸಂಂಸ್ಕೃತಿ, ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಡುವಲ್ಲಿ ಕಾರ್ಯಪ್ರವೃತ್ತವಾಗಿ ಕೆಲಸ ಮಾಡಬೇಕು ಎಂದು ಬೀಳಗಿ ಶಾಸಕ ಜೆ.ಟಿ.ಪಾಟೀಲ ಹೇಳಿದರು.ನವನಗರ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿರುವ ಬಾಗಲಕೋಟೆ ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನದ 2ನೇ ದಿನದ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಂಪರೆ ಮತ್ತು ಜನಪರ ನಿಲುವುಗಳು ಎಂಬ ವಿಷಯ ಕುರಿತ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಹಿತಿಗಳು ಮೌಲ್ಯಯುತವಾದ ಸಾಹಿತ್ಯ ರಚನೆ ಮಾಡಬೇಕು. ಜನಸಾಮಾನ್ಯರು ಓದುವ ಹವ್ಯಾಸ ಬೆಳೆಸುವಂತಿರಬೇಕು. ಜೊತೆಗೆ ಜಿಲ್ಲೆಯಲ್ಲಿ ಅನೇಕ ಸಮಸ್ಯೆಗಳಿರುತ್ತವೆ ಅವುಗಳನ್ನು ತಮ್ಮ ಬರಹದ ಮೂಲಕ ಸರ್ಕಾರದ ಗಮನ ಸೆಳೆಯುವ ಕೆಲಸವಾಗಬೇಕಿದೆ ಎಂದರು.ಕೃಷ್ಣಾ ಮೇಲ್ದಂಡೆ ಯೋಜನೆ ಇದು ಸಂಪೂರ್ಣವಾಗಿ ಅನುಷ್ಠಾನವಾಗಿಲ್ಲ. ಈ ಯೋಜನೆಯ ಆರಂಭದಲ್ಲಿ ₹230 ಕೋಟಿ ಯೋಜನಾವೆಚ್ಚ ಇತ್ತು. ಆದರೆ, ಇಂದು ಲಕ್ಷಾಂತರ ಕೋಟಿ ಅನುದಾನ ನೀಡಿದರೂ ಇದುವರೆಗೂ ಪೂರ್ಣಗೊಂಡಿಲ್ಲ. ಇಂತಹ ಸಮಸ್ಯೆಗಳ ಗಮನ ಸೆಳೆಯುವುದು ಇಂದು ತುರ್ತಾಗಬೇಕಾಗಿದೆ ಎಂದು ತಿಳಿಸಿದರು.ವಿಶ್ರಾಂತ ಪ್ರಾಚಾರ್ಯ ಡಾ.ಎಸ್.ಬಿ.ಮಾಟೊಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಗೋಷ್ಠಿಯಲ್ಲಿ ಮೌಲ್ಯಯುತವಾದ ವಿಷಯ ಮಂಡನೆ ಮಾಡಿದ್ದಾರೆ. ಸಾಹಿತಿಗಳಿಗೆ ಭಾಷಾ ಜ್ಞಾನವಿರಬೇಕು. ಒಳಗೂ, ಹೊರಗೂ ಸ್ವಚ್ಚ ಇರಬೇಕು. ಸಂಖ್ಯೆಗಿಂತ ಸತ್ವ ಇರಬೇಕು. ಆಸ್ವಾದ ಮಾಡುವಂತಹ ಮನೋಗುಣ ಹೊಂದಿರಬೇಕು ಎಂದು ತಿಳಿಸಿದರು.ಸಾಹಿತಿ ಎಂ.ಜಿ.ದಾಸರ ಅವರು ತತ್ವಪದ ಹಾಗೂ ಕೀರ್ತನೆಗಳು, ಸಾಹಿತಿ ಶಿವಾನಂದ ಪೂಜಾರಿ ವಚನ ಸಾಹಿತ್ಯ, ಕಸಾಪ ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ಸಜ್ಜನ ಜನಪದ ಸಾಹಿತ್ಯ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.ವಿ.ಜಿ.ಗೋವಿಂದರಪ್ಪನವರ, ಸಿ.ಎನ್.ಬಾಳಕ್ಕನವರ, ಅರ್ಜುನರಡ್ಡಿ ಹಂಚಿನಾಳ ಇದ್ದರು. ಡಾ.ಚಂದ್ರಶೇಖರ ಕಾಳನ್ನವರ ನಿರೂಪಿಸಿದರು. ಯೋಗೇಶ ಲಮಾಣಿ ಸ್ವಾಗತಿಸಿದರು. ಎ.ಎಂ.ಮೋಮಿನ ವಂದಿಸಿದರು.