ಕೊಪ್ಪಳ ಸಮೀಪದ ಬೆಟಗೇರಿ ಗ್ರಾಮದ ಶ್ರೀ ದುರ್ಗಾದೇವಿ ದೇವಸ್ಥಾನದ ಆವರಣದಲ್ಲಿ ಸೋಮವಾರ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರ ಸಭೆ ನಡೆಯಿತು.

ಕೊಪ್ಪಳ: ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿಗೆ ಸಾಹಿತಿಗಳೇ ಅಧ್ಯಕ್ಷರಾಗಬೇಕು ಎಂದು ಮುಖಂಡ ಮುತ್ತಯ್ಯಸ್ವಾಮಿ ಹಿರೇಮಠ ಹೇಳಿದರು.

ಸಮೀಪದ ಬೆಟಗೇರಿ ಗ್ರಾಮದ ಶ್ರೀ ದುರ್ಗಾದೇವಿ ದೇವಸ್ಥಾನದ ಆವರಣದಲ್ಲಿ ಸೋಮವಾರ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ಸಾಹಿತಿ ಬಸವರಾಜ ಬಿನ್ನಾಳ ಸೂಕ್ತ ಅಭ್ಯರ್ಥಿಯಾಗಿದ್ದಾರೆ. ಅವರು ಈಗಾಗಲೇ ಹಲವು ನಾಟಕಗಳನ್ನು ರಚಿಸಿದ್ದು, ರಂಗಭೂಮಿ ಕಲಾವಿದರಾಗಿ ಹಾಗೂ ಸಾಹಿತ್ಯ ಪರಿಷತ್ತಿನ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇಂತಹ ಸಾಹಿತಿಗಳು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಬೇಕು ಎಂದು ಅಭಿಪ್ರಾಯಪಟ್ಟರು.

ಅಭ್ಯರ್ಥಿ ಬಸವರಾಜ ಬಿನ್ನಾಳ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿಗೆ ಸಾಹಿತಿಗಳೇ ಅಧ್ಯಕ್ಷರಾಗಬೇಕು ಎಂಬ ಕೂಗು ಬಹುದಿನಗಳಿಂದ ಇತ್ತು. ಆ ಕೂಗಿಗೆ ಈಗ ನ್ಯಾಯ ಸಿಗುವ ನಿರೀಕ್ಷೆಯಿದೆ. ಕಳೆದ 30 ವರ್ಷಗಳಿಂದ ಅಕ್ಷರ ಲೋಕದಲ್ಲಿ ತೊಡಗಿಸಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಯುವ ಬರಹಗಾರರನ್ನು ಗುರುತಿಸಿ ಸಾಹಿತ್ಯದ ವೇದಿಕೆಗೆ ಕರೆತರುವುದು ನನ್ನ ಜವಾಬ್ದಾರಿಯಾಗಿದೆ ಎಂದರು.

ಕಾವ್ಯ ಕಮ್ಮಟ, ಕಥಾ ಕಮ್ಮಟ ಸೇರಿದಂತೆ ವಿವಿಧ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಯುವ ಸಾಹಿತಿಗಳಿಗೆ ಪ್ರೋತ್ಸಾಹ ನೀಡುವುದು ನನ್ನ ಗುರಿ. ಗ್ರಾಮದ ಆಜೀವ ಸದಸ್ಯರೆಲ್ಲರೂ ಬೆಂಬಲಿಸಿದರೆ ಸಾಹಿತ್ಯ ಪರಿಷತ್ತಿಗೆ ಹೊಸ ರೂಪ ನೀಡೋಣ. ತಾಯಿ ಭುವನೇಶ್ವರಿಯ ಸೇವೆ ಮಾಡಲು ತಾವೆಲ್ಲರೂ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.

ಮಲ್ಲಿಕಾರ್ಜುನ ಯತ್ನಳ್ಳಿ, ಮಲ್ಲಪ್ಪ ಮತ್ತೂರು, ಲಕ್ಷ್ಮಣ ಹಿರೇಮನಿ, ತಾಲೂಕು ಕಸಾಪ ಅಧ್ಯಕ್ಷ ರಾಮಚಂದ್ರಗೌಡ ಗೊಂಡಬಾಳ ಹಾಗೂ ಹೋಬಳಿ ಅಧ್ಯಕ್ಷ ಸುರೇಶ ಸಂಗರಡ್ಡಿ ಮಾತನಾಡಿದರು.

ಗವಿಸಿದ್ದಪ್ಪ ಬಾರಕೇರ, ವೀರೇಶ ಲಕ್ಷಾಣಿ, ಶರಣಪ್ಪ ಮಡಿವಾಳ, ವೆಂಕಣ್ಣ ಕೊರಣ್ಣವರ, ಬಸವರಾಜ ನಾಗರೆಡ್ಡಿ, ಶರಣಪ್ಪ ಮತ್ತೂರು, ಏಳುಕೋಟೇಶ ಕೋಮಲಾಪುರ, ಮರಿಯಪ್ಪ ನಾಗರೆಡ್ಡಿ, ಸುನೀಲ ಜೋಶಿ, ಸುರೇಶ ಅರಿಕೇರಿ, ಚನ್ನಬಸಪ್ಪ ವಕಳದ, ಅಶೋಕ ಮಾದಿನೂರ, ವಿರೂಪಾಕ್ಷಪ್ಪ ಮರಡಿ, ಕಳಕಪ್ಪ ಕುಂಬಾರ, ಪೀರಸಾಬ್ ದಫೇದಾರ ಉಪಸ್ಥಿತರಿದ್ದರು.