ಸಾರಾಂಶ
ಬಳ್ಳಾರಿಯಲ್ಲಿ ವೈದ್ಯ ಬರಹಗಾರರ 6ನೇ ರಾಜ್ಯ ಸಮ್ಮೇಳನಕ್ಕೆ ಚಾಲನೆ
ವೈದ್ಯ ವೃತ್ತಿಯ ವ್ಯಾಪಾರೀಕರಣ-ಅಮಾನುಷಕರಣಕ್ಕೆ ಸಾಹಿತ್ಯ ಮದ್ದಾಗಲಿಕನ್ನಡಪ್ರಭ ವಾರ್ತೆ ಬಳ್ಳಾರಿ
ಭಾರತೀಯ ವೈದ್ಯಕೀಯ ಸಂಘ ಹಾಗೂ ಕನ್ನಡ ವೈದ್ಯ ಬರಹಗಾರರ ಸಮಿತಿ ಸಹಯೋಗದಲ್ಲಿ ಇಲ್ಲಿನ ಡಾ. ರಾಜ್‌ಕುಮಾರ್ ರಸ್ತೆಯ ಬಸವರಾಜೇಶ್ವರಿ ಪಬ್ಲಿಕ್ ಶಾಲೆ ಮತ್ತು ಕಾಲೇಜು (ಬಿಪಿಎಸ್‌ಸಿ) ಶಾಲೆ ಸಭಾಂಗಣದಲ್ಲಿ ವೈದ್ಯ ಬರಹಗಾರರ 6ನೇ ರಾಜ್ಯ ಸಮ್ಮೇಳನಕ್ಕೆ ಚಾಲನೆ ದೊರೆಯಿತು.ಉದ್ಘಾಟಿಸಿ ಮಾತನಾಡಿದ ಹಿರಿಯ ಲೇಖಕ ಪ್ರೊ. ರಹಮತ್ ತರೀಕೆರೆ ಅವರು ಬಿಡುವಿಲ್ಲದ ವೈದ್ಯವೃತ್ತಿಯ ನಡುವೆ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ನಾಡಿನ ಅನೇಕ ವೈದ್ಯರ ಸಾಹಿತ್ಯಾಸಕ್ತಿಯ ಅಭಿರುಚಿಯನ್ನು ಶ್ಲಾಘಿಸಿದರು.
ಖಾಸಗಿ ಆಸ್ಪತ್ರೆಗಳಲ್ಲಿ ತತ್ವ, ಇಚ್ಛೆಗೆ ವಿರುದ್ಧವಾಗಿ ದುಡಿದು ಮಾನಸಿಕವಾಗಿ ಕುಗ್ಗಿಹೋಗಿರುವ ವೈದ್ಯರು, ಯಂತ್ರಗಳಾಗುತ್ತಿರುವ ಈ ಸಂದರ್ಭದಲ್ಲಿ ಸಾಹಿತ್ಯ ಅವರಿಗೆ ಚಿಕಿತ್ಸಕವಾಗಲಿ. ವೈದ್ಯ ವೃತ್ತಿಯ ವ್ಯಾಪಾರೀಕರಣ ಮತ್ತು ಅಮಾನುಷಕರಣಕ್ಕೆ ಸಾಹಿತ್ಯ ಮದ್ದಾಗಲಿ. ಅನೇಕರು ಇತ್ತೀಚೆಗೆ ಮಾತಿನ ಮೂಲಕ ವೈದ್ಯ ಸಾಹಿತ್ಯವನ್ನು ಪ್ರಸಾರ ಮಾಡುತ್ತಿದ್ದಾರೆ. ಹೊಸ ಜಗತ್ತಿನಲ್ಲಿ ಇದು ಪ್ರಾಮುಖ್ಯತೆ ಪಡೆಯುತ್ತಿದೆ. ಇದು ಕನ್ನಡದ ಅಭಿವ್ಯಕ್ತಿ ಶಕ್ತಿಯನ್ನು ಹೆಚ್ಚಿಸುತ್ತಿದೆ. ಇಂಥ ಕೆಲಸಗಳು ಎಂಜಿನಿಯರಿಂಗ್ ಕ್ಷೇತ್ರದಲ್ಲೂ ಆಗಲಿ ಎಂದು ಆಶಿಸಿದರು.ರೋಗ ಗುಣಪಡಿಸುವ ವೈದ್ಯರು ವ್ಯಾಪಾರೀಕರಣ ನೀತಿಯಿಂದಾಗಿ ರೋಗಗ್ರಸ್ತ ವ್ಯವಸ್ಥೆಗೆ ಒಳಗಾಗುತ್ತಿರುವುದು ವಿಷಾದನೀಯ. ಏತನ್ಮಧ್ಯೆ ನಾಡಿನ ಅನೇಕ ವೈದ್ಯರು ವ್ಯಾಪಾರೀಕರಣ ಮನೋಭಾವದಿಂದ ಹೊರ ಬಂದು ಸಾಹಿತ್ಯ ಮತ್ತಿತರ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಗಮನಾರ್ಹ ಸಂಗತಿಯೂ ಆಗಿದೆ. ವೈದ್ಯ ವೃತ್ತಿಯಲ್ಲಿರುವ ಬರಹಗಾರರು ಒಂದೆಡೆ ಸೇರಿ ಸಮ್ಮೇಳನಗಳನ್ನು ಆಯೋಜಿಸುವುದರಿಂದ ಸಾಹಿತ್ಯ ಬೆಳವಣಿಗೆ ನೆಲೆಯಲ್ಲಿ ಹೆಚ್ಚು ಪೂರಕವಾಗಲಿದೆ ಎಂದರು. ಸಾಮಾಜಿಕ ಆರೋಗ್ಯಕ್ಕೆ ವೈದ್ಯ ಸಾಹಿತ್ಯ ಸೇತುವೆಯಾಗಬೇಕು. ಸಮಾಜ ಬಹುತ್ವದಲ್ಲಿ ಬದುಕಬೇಕು. ಸಮ್ಮೇಳನಾಧ್ಯಕ್ಷರಾಗಿರುವ ಅರವಿಂದ ಪಟೇಲರ ಮನಸ್ಸಿನಲ್ಲಿ ಇಂಥ ಬಹುತ್ವ ಇದೆ. ಪಟೇಲ್ ತಮ್ಮ ಸಂಗಡಿಗರೊಂದಿಗೆ ಸೇರಿ ಬಳ್ಳಾರಿಯನ್ನು ಸಾಹಿತ್ಯಕ ಹಾಗೂ ಸಾಮಾಜಿಕವಾಗಿ ಜೀವಂತವಾಗಿಟ್ಟಿದ್ದಾರೆ ಎಂದು ತರೀಕೆರೆ ತಿಳಿಸಿದರು.
ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡಾ. ನಾ.ಸೋಮೇಶ್ವರ, ವೈದ್ಯ ಬರಹಗಾರರ ಸಂಘ ಸೀಮಿತ ಪ್ರಮಾಣದಲ್ಲಿ ಚಟುವಟಿಕೆ ನಡೆಸುತ್ತಿದೆ. 2 ತಿಂಗಳಿಗೊಮ್ಮೆ ‘ವೈದ್ಯ ಸಂಪದ’ ತರುತ್ತಿದೆ. ಕಳೆದ ವರ್ಷ ಕವನ, ಕಥಾ ಸಂಕಲನ ತಂದೆವು. ಈ ವರ್ಷವೂ ತರಲಿದ್ದೇವೆ. ಇಷ್ಟಕ್ಕೇ ನಮ್ಮ ಕೆಲಸ ನಿಲ್ಲಬಾರದು. ಕನಿಷ್ಠ 50 ವೈದ್ಯರು ತಲಾ ಒಂದು ₹1ಲಕ್ಷ ದೇಣಿಗೆ ನೀಡಿ, ₹50 ಲಕ್ಷ ಇಡುಗಂಟು ಸಂಗ್ರಹಿಸಿ, ಅದರ ಮೂಲಕ ವೈದ್ಯಕೀಯ ಕೃತಿ ಹೊರತರಬೇಕು. ಇದಕ್ಕೆ ನಾನು ₹1 ಲಕ್ಷ ನೀಡಲು ಸಿದ್ಧ ಎಂದರಲ್ಲದೆ, ವೈದ್ಯ ಬರಹಗಾರರ ರಾಜ್ಯ ಸಮ್ಮೇಳನವು ಬರೀ ವೈದ್ಯರಿಗೆ ಸೀಮಿತಗೊಳಿಸಿಕೊಳ್ಳುವುದು ಸರಿಯಲ್ಲ. ಸಾರ್ವಜನಿಕರಿಗೂ ಮುಕ್ತವಾಗಬೇಕು. ಇಂತಹ ಸಮ್ಮೇಳನಗಳಲ್ಲಿ ವೈದ್ಯರು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸುವಂತಾಗಬೇಕು. ವೈದ್ಯ ವಿದ್ಯಾರ್ಥಿಗಳು ಸಮ್ಮೇಳನಗಳಲ್ಲಿ ತೊಡಗಿಸಿಕೊಳ್ಳಲು ಹಿರಿಯ ವೈದ್ಯರಾದವರು ಪ್ರೇರೇಪಿಸಬೇಕು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಸಮ್ಮೇಳನದ ಧ್ವಜನವನ್ನು ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಡಾ. ನಾ.ಸೋಮೇಶ್ವರ ಅರವಿಂದ ಪಟೇಲ್ ಅವರಿಗೆ ಹಸ್ತಾಂತರ ಮಾಡಿದರು. ಭಾರತೀಯ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷ ಡಾ. ವಿ.ವಿ.ಚಿನಿವಾಲರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕ ವೈದ್ಯಕೀಯ ಪರಿಷತ್ತಿನ ಅಧ್ಯಕ್ಷ ಡಾ. ವೈ.ಸಿ. ಯೋಗಾನಂದ ರೆಡ್ಡಿ, ಕನ್ನಡ ವೈದ್ಯ ಬರಹಗಾರರ ಉಪ ಸಮಿತಿ ಅಧ್ಯಕ್ಷ ಡಾ. ಗಡ್ಡಿ ದಿವಾಕರ, ಬಿಪಿಎಸ್‌ಸಿ ಶಾಲೆಯ ಮುಖ್ಯಸ್ಥ ಡಾ. ಎಸ್.ಜೆ.ವಿ. ಮಹಿಪಾಲ್, ಸಮ್ಮೇಳನದ ಸಂಘಟನಾ ಸಮಿತಿಯ ಡಾ. ಮಾಣಿಕ್‌ರಾವ್ ಕುಲಕರ್ಣಿ, ಡಾ. ಪರಸಪ್ಪ ಬಂದ್ರಕಳ್ಳಿ, ಡಾ. ದಿವ್ಯಾ, ಡಾ. ಸುಮಾಗುಡಿ, ಡಾ. ವಿ.ಸೂರಿ ರಾಜು ಮತ್ತಿತರರಿದ್ದರು. ಸಮ್ಮೇಳನ ಮುನ್ನ ನಗರದಲ್ಲಿ ಕನ್ನಡ ಭುವನೇಶ್ವರಿ ಮೆರವಣಿಗೆ ನಡೆಯಿತು. ರಘುವೀರ್ ಆರ್ಥೋ ಸೆಂಟರ್‌ನಿಂದ ಶುರುಗೊಂಡ ಮೆರವಣಿಗೆ ಸಮಾರಂಭ ವೇದಿಕೆಯ ಡಾ. ಬೆಸಗರಹಳ್ಳಿ ರಾಮಣ್ಣ ಮಹಾದ್ವಾರದವರೆಗೆ ಸಾಗಿ ಬಂತು.