ಸಚಿವ ಪಾಟೀಲ ರೈತರ ಕ್ಷಮೆ ಕೇಳಲಿ- ಆರ್‌.ಎಸ್‌.ಪಾಟೀಲ

| Published : Dec 28 2023, 01:47 AM IST

ಸಚಿವ ಪಾಟೀಲ ರೈತರ ಕ್ಷಮೆ ಕೇಳಲಿ- ಆರ್‌.ಎಸ್‌.ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ರೈತರ ವಿರುದ್ಧ ಮಾತನಾಡಿರುವ ಸಚಿವ ಶಿವಾನಂದ ಪಾಟೀಲ ಅವರು ಕ್ಷಮೆಯಾಚಿಸುವಂತೆ ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ) ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಬರಗಾಲದಿಂದ ರೈತರು ಸಂಕಷ್ಟಕ್ಕೆ ಸಿಲುಕಿರುವ ಸಮಯದಲ್ಲಿ ಸಚಿವ ಶಿವಾನಂದ ಪಾಟೀಲ ಅವರು ರೈತರಿಗೆ ಅವಮಾನ ಆಗುವಂತಹ ಹೇಳಿಕೆ ನೀಡಿದ್ದು ಅವರ ಘನತೆಗೆ ಶೋಭೆ ತರುವಂತದಲ್ಲ. ಕೂಡಲೇ ಸಚಿವರು ಬಹಿರಂಗವಾಗಿ ರೈತರಿಗೆ ಕ್ಷಮೆಯಾಚಿಸಬೇಕೆಂದು ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ) ಆಗ್ರಹಿಸಿದರು.

ಬುಧವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಶಿವಾನಂದ ಪಾಟೀಲ ಅವರು, ಮೂಲತಃ ಕೃಷಿಕ ಕುಟುಂಬದಿಂದಲೇ ಬಂದವರು. ರೈತರಿಗೆ ಸಂಬಂಧಿಸಿದ ಬಹುದೊಡ್ಡ ಸಂಸ್ಥೆ ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾಗಿ ೨೫ ವರ್ಷಗಳಿಂದ ಕೆಲಸ ನಿರ್ವಹಿಸಿದವರಾಗಿದ್ದಾರೆ. ಪಿಕೆಪಿಎಸ್ ಮೂಲಕ ರೈತರಿಗೆ ಸಾಲ ಸೂಲದಿಂದ ಹಿಡಿದು ರೈತರ ಬಗ್ಗೆ ಸಾಕಷ್ಟು ಅರಿತುಕೊಂಡವರು. ಅಂತವರು ರೈತರಿಗೆ ನೀರು ಫ್ರೀ ಇದೆ, ಕರೆಂಟ್ ಫ್ರೀ ಇದೆ. ರೈತರಿಗೆ ಎಲ್ಲ ಸಬ್ಸಿಡಿ ಸಿಗುತ್ತಿವೆ. ಮೇಲೆ ಮೇಲೆ ಬರಗಾಲ ಬರಲಿ ಎಂದು ಅಪೇಕ್ಷೆ ಪಡುತ್ತಾರೆ. ಇದರಿಂದ ಸಾಲ ಮನ್ನಾ ಆಗುತ್ತದೆ ಎಂದು ಹೇಳಿಕೆ ನೀಡಿರುವುದು ಅವರ ಘನತೆಗೆ ಶೋಭೆ ತರುವಂತದಲ್ಲ ಎಂದರು.

ರೈತರು ಬರಗಾಲ ಬರಲಿ ಎಂದು ಬಯಸುವುದಿಲ್ಲ ಸರಿಯಾಗಿ ನೀರು ಸಿಕ್ಕರೆ ಸರ್ಕಾರಕ್ಕೆ ಸಾಲ ಕೊಡುವ ಶಕ್ತಿ ರೈತರಲ್ಲಿದೆ. ಇದನ್ನು ಅರಿತುಕೊಂಡು ಮಾತನಾಡಬೇಕು ಸರ್ಕಾರದಿಂದ ಸಾಲಮನ್ನಾ ಮಾಡಿದರೆ ಬಿಡಿಕಾಸು ಕೊಡಬಹುದು. ಆದರೆ ಭೂಮಿ ತಾಯಿ ಬೆಳೆದರೆ ರೈತರು ಸಂಪತ್ಬರಿತರಾಗುತ್ತಾರೆ. ಸರ್ಕಾರದ ಬಿಡಿಕಾಸಿನ ಮೇಲೆ ಯಾವ ರೈತರ ಜೀವನವು ನಿಂತಿಲ್ಲ. ಇಡೀ ಜಿಲ್ಲೆಯಲ್ಲಿ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಕುಡಿಯುವ ನೀರಿನ ತೊಂದರೆ ತಪ್ಪಿಸಲು ಎಲ್ಲ ಕೆರೆಗಳಿಗೂ ನೀರು ಹರಿಸಿ ತುಂಬಲಾಗಿದೆ. ಆದರೆ ತಾವು ತಮ್ಮ ಸರ್ಕಾರದಲ್ಲಿ ಸಚಿವರಾಗಿದ್ದೀರಿ, ನೀರಾವರಿ ಯೋಜನೆಗಳನ್ನು ಜಾರಿಗೆ ತಂದು ರೈತರ ಜಮೀನುಗಳಿಗೆ ನೀರು ಕೊಡುವಂತಹ ಕೆಲಸ ಮಾಡಲಿ, ಎಲ್ಲೋ ಒಂದು ಕಡೆಗೆ ಕಾಲುವೆಗೆ ನೀರು ಹರಿಬಿಟ್ಟರೆ ಜಮೀನಿಗೆ ನೀರು ಹರಿದಂತಾಗುವುದಿಲ್ಲ. ರೈತರ ಬಗ್ಗೆ ಸಾಕಷ್ಟು ಅರಿತುಕೊಂಡು ತಿಳಿದುಕೊಂಡಿರುವ ಸಚಿವ ಶಿವಾನಂದ ಪಾಟೀಲ ಅವರು ಇದರ ಬಗ್ಗೆ ಲಕ್ಷ ಕೊಡಬೇಕೆಂದ ಹೇಳಿದರು.