ಮೋದಿ ಕ್ಷಮೆ ಕೋರಿದಂತೆ ಶಾಸಕ ಸುನೀಲ್ ಕುಮಾರ್ ಕ್ಷಮೆ ಕೋರಲಿ: ಬ್ಲಾಕ್‌ ಕಾಂಗ್ರೆಸ್‌ ಆಗ್ರಹ

| Published : Sep 01 2024, 02:03 AM IST / Updated: Sep 01 2024, 11:55 AM IST

ಸಾರಾಂಶ

ಶಿವಾಜಿ ಪ್ರತಿಮೆಯನ್ನು ಉದ್ಘಾಟಿಸಿದ ಪ್ರಧಾನಿ ತಪ್ಪೊಪ್ಪಿಕೊಂಡು ಮರಾಠಿಗರ ಕ್ಷಮೆಯಾಚಿಸಿದ್ದಾರೆ. ಶಾಸಕರಿಗೆ ಪ್ರಧಾನಿಗಳ ಮೇಲೆ ಕಿಂಚಿತ್ತು ಗೌರವವಿದ್ದರೆ, ಅವರಂತೆ ಇವರೂ ಕ್ಷಮೆಯಾಚಿಸಲಿ ಎಂದು ಬ್ಲಾಕ್ ಕಾಂಗ್ರೆಸ್ ವಕ್ತಾರ ಶುಭದರಾವ್ ಆಗ್ರಹಿಸಿದ್ದಾರೆ.

 ಕಾರ್ಕಳ :  ಮಹಾರಾಷ್ಟ್ರದಲ್ಲಿ ಶಿವಾಜಿ ಪ್ರತಿಮೆ ಕುಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿಯವರು ಮರಾಠಿಗರ ಕ್ಷಮೆ ಕೋರಿದಂತೆ ಪರಶುರಾಮನ ಪ್ರತಿಮೆ ವಿಚಾರವಾಗಿ ಶಾಸಕ ಸುನೀಲ್ ಕುಮಾರ್ ನಾಡಿನ ಜನತೆಯ ಕ್ಷಮೆಯಾಚಿಸಲಿ ಎಂದು ಕಾರ್ಕಳ ಕಾಂಗ್ರೆಸ್ ಆಗ್ರಹಿಸಿದೆ.

ಲೋಕಸಭಾ ಚುನಾವಣಾ ಪೂರ್ವದಲ್ಲಿ ಮಹಾರಾಷ್ಟ್ರದಲ್ಲಿ ಉದ್ಘಾಟನೆಗೊಂಡ ಶಿವಾಜಿ ಪ್ರತಿಮೆ ಕುಸಿದ ಪ್ರಕರಣ ಕಾರ್ಕಳದ ಪರಶುರಾಮನ ಕಂಚಿನ ಪ್ರತಿಮೆ ಪ್ರಕರಣವನ್ನೇ ಹೋಲುತ್ತದೆ. ಇಲ್ಲಿಯೂ ವಿಧಾನಸಭಾ ಚುನಾವಣೆಯ ಉದ್ದೇಶದಿಂದ ಕಾಮಗಾರಿ ಪೂರ್ಣವಾಗುವ ಮೊದಲೇ ತುರಾತುರಿಯಲ್ಲಿ ಉದ್ಘಾಟಿಸಲಾಯಿತು. ಅಲ್ಲಿ ಪ್ರಕರಣವನ್ನು ತನಿಖೆಗೆ ಒಪ್ಪಿಸಲಾಗಿ ಒಬ್ಬನ ಬಂಧನವಾಗಿದೆ. ಇಲ್ಲಿಯೂ ಸಿಐಡಿ ತನಿಖೆಗೆ ಆದೇಶ ನೀಡಲಾಗಿದ್ದು, ಒಬ್ಬ ಅಧಿಕಾರಿಯ ಅಮಾನತು ಆಗಿದೆ. ಶಿವಾಜಿ ಪ್ರತಿಮೆಯನ್ನು ಉದ್ಘಾಟಿಸಿದ ಪ್ರಧಾನಿ ತಪ್ಪೊಪ್ಪಿಕೊಂಡು ಮರಾಠಿಗರ ಕ್ಷಮೆಯಾಚಿಸಿದ್ದಾರೆ. ಶಾಸಕರಿಗೆ ಪ್ರಧಾನಿಗಳ ಮೇಲೆ ಕಿಂಚಿತ್ತು ಗೌರವವಿದ್ದರೆ, ಅವರಂತೆ ಇವರೂ ಕ್ಷಮೆಯಾಚಿಸಲಿ ಎಂದು ಬ್ಲಾಕ್ ಕಾಂಗ್ರೆಸ್ ವಕ್ತಾರ ಶುಭದರಾವ್ ಆಗ್ರಹಿಸಿದ್ದಾರೆ

ಶಾಸಕರ ಒಂದು ತಪ್ಪಿನಿಂದ ಕ್ಷೇತ್ರದ ಬಹಳಷ್ಟು ಜನ ಅನುಭನಿಸುವಂತಾಯಿತು. ಪಕ್ಷದ ಪಧಾದಿಕಾರಿಗಳಿಗೆ ಇಷ್ಟವಿಲ್ಲದಿದ್ದರೂ ಸಮರ್ಥಿಸುವುದು ಅನಿವಾರ್ಯವಾಯಿತು. ಅಂದೇ ಈ ಬಗ್ಗೆ ಸ್ಪಷ್ಟನೆ ನೀಡಿ ಒಪ್ಪಿಕೊಂಡಿದ್ದರೆ, ಎಲ್ಲ ರಾದ್ಧಾಂತಗಳನ್ನು ತಡೆಯಬಹುದಿತ್ತು ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನೂ ಕಾಲ ಮಿಂಚಿಲ್ಲ ಪ್ರದಾನಿ ಮೋದಿಯವರನ್ನು ಮಾದರಿಯಾಗಿಸಿ ಇವರೂ ನಾಡಿನ ಜನತೆಯಲ್ಲಿ ಕ್ಷಮೆಯಾಚಿಸುವಂತೆ ಆಗ್ರಹಿಸುತ್ತೇನೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ವಕ್ತಾರ ಶುಭದರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.