ಮೂರನೇ ಬಾರಿಗೆ ಮೋದಿ, ನಮ್ಮ ಗುರಿಯಾಗಿರಲಿ: ಶಾಸಕ ಜಿ.ಎಚ್.ತಿಪ್ಪಾರೆಡ್ಡಿ

| Published : Feb 09 2024, 01:49 AM IST

ಮೂರನೇ ಬಾರಿಗೆ ಮೋದಿ, ನಮ್ಮ ಗುರಿಯಾಗಿರಲಿ: ಶಾಸಕ ಜಿ.ಎಚ್.ತಿಪ್ಪಾರೆಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಚಿತ್ರದುರ್ಗದ ತಿರುಮಲ ಕಲ್ಯಾಣ ಮಂಟಪದಲ್ಲಿ ನಡೆದ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಭೆಯನ್ನು ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಕಾರ್ಯಕರ್ತರು, ಮುಖಂಡರ ನಡುವೆ ಏನೇ ಭಿನ್ನಾಭಿಪ್ರಾಯಗಳಿರಲಿ, ಎಲ್ಲವನ್ನು ಸರಿಪಡಿಸೋಣ. ಅಪಸ್ವರ ಬದಿಗೊತ್ತಿ 3ನೇ ಬಾರಿಗೆ ಮೋದಿ ಎಂಬ ದಿಕ್ಕಿನೆಡೆಗೆ ನಮ್ಮ ಗುರಿ ಸ್ಪಷ್ಟವಾಗಿರಲಿ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.

ಚಿತ್ರದುರ್ಗ ಹೊರವಲಯ ಮಾಳಪ್ಪನಹಟ್ಟಿ ತಿರುಮಲ ಕಲ್ಯಾಣ ಮಂಟಪದಲ್ಲಿ ಭಾರತೀಯ ಜನತಾ ಪಾರ್ಟಿಯಿಂದ ಗುರುವಾರ ನಡೆದ ಜಿಲ್ಲಾ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಪಾರ್ಲಿಮೆಂಟ್ ಚುನಾವಣೆಯಲ್ಲಿ ಪಕ್ಷ ಯಾರಿಗೆ ಟಿಕೆಟ್ ಕೊಡಲಿ ಕಾರ್ಯಕರ್ತರು ಶ್ರಮವಹಿಸಿ ಅಭ್ಯರ್ಥಿ ಗೆಲ್ಲಿಸಿಕೊಂಡಾಗ ಮಾತ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಲು ಸಾಧ್ಯ ಎಂದರು.

ಲೋಕಸಭೆ ಚುನಾವಣೆ ಕೇವಲ ಪಕ್ಷ, ದೇಶಕ್ಕೆ ಸಂಬಂಧಿಸಿದ್ದಲ್ಲ. ಇಡಿ ವಿಶ್ವವೇ ಭಾರತದತ್ತ ಕಣ್ಣಿಟ್ಟಿದೆ. ಪ್ರಪಂಚದ ಹಿತಕ್ಕಾಗಿ ಮೋದಿ 3ನೇ ಬಾರಿಗೆ ದೇಶದ ಪ್ರಧಾನಿಯಾಗಲೇಬೇಕು. ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟಿಸಿ ಐದು ನೂರು ವರ್ಷಗಳ ಭಾರತೀಯರ ಕನಸನ್ನು ಸಾಕಾರಗೊಳಿಸಿದ್ದಾರೆ. ರಾಮಮಂದಿರ ಕಟ್ಟುವುದು ಜನಸಂಘದ ಸ್ಲೋಗನ್ ಆಗಿತ್ತು. ಜಮ್ಮು-ಮತ್ತು ಕಾಶ್ಮೀರ ಹಿಂದಿನಿಂದಲೂ ಅನುಭವಿಸಿಕೊಂಡು ಬರುತ್ತಿದ್ದ ಆರ್ಟಿಕಲ್ 370ಯನ್ನು ಪ್ರಧಾನಿ ಮೋದಿ ರದ್ದುಗೊಳಿಸಿ ದಿಟ್ಟತನ ತೋರಿದ್ದಾರೆ ಎಂದರು.

ಗ್ರಾಮ ಚಲೋ ಅಭಿಯಾನದ ಮೂಲಕ ಪಕ್ಷದ ಕಾರ್ಯಕರ್ತರು ಪ್ರತಿ ಹಳ್ಳಿಗೆ ಹೋಗಿ ಮನೆ ಮನೆಗೆ ಕೇಂದ್ರ ಸರ್ಕಾರದ ಸಾಧನೆ ಮುಟ್ಟಿಸಬೇಕು. ಕೇಂದ್ರ ರಾಜ್ಯಕ್ಕೆ ಅನ್ಯಾಯ ಮಾಡಿದೆ ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರದ ಕಡೆ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ಚುನಾವಣೆಗೋಸ್ಕರ ಕಾಂಗ್ರೆಸ್‍ನವರು ಅಕ್ಕಿ ಕೊಟ್ಟಿದ್ದಾರೆಯೇ ವಿನಃ ಬಡತನ ನಿವಾರಣೆಗಲ್ಲ. ನೋಂದಣಿ ಶುಲ್ಕ ಹಾಗೂ ಮದ್ಯದ ಮೇಲಿನ ತೆರಿಗೆ ಹೆಚ್ಚಿಸಿ ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಸಿದುಕೊಳ್ಳುವಂತ ಕೆಲಸ ಕಾಂಗ್ರೆಸ್‍ನವರದು ಎಂದು ವ್ಯಂಗ್ಯವಾಡಿದರು.

ಪ್ರಧಾನಿ ನರೇಂದ್ರಮೋದಿ 80 ಕೋಟಿ ಜನರಿಗೆ ಉಚಿತ ಅಕ್ಕಿ ನೀಡುತ್ತಿದ್ದಾರೆ. ಎಲ್ಲೆ ಯುದ್ದ ಸಮಸ್ಯೆಯಾದರೂ ಮೋದಿಯವರ ಮಧ್ಯಸ್ಥಿಕೆ ವಹಿಸಲು ಬೇರೆ ಬೇರೆ ರಾಷ್ಟ್ರದವರು ಕರೆಯುತ್ತಿರುವುದನ್ನು ನೋಡಿದರೆ ಅವರ ವ್ಯಕ್ತಿತ್ವ ಎಂತಹದು ಎನ್ನುವುದು ಗೊತ್ತಾಗುತ್ತದೆ. ಜೆಡಿಎಸ್ ಬಿಜೆಪಿ ಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವುದರಿಂದ ಚಳ್ಳಕೆರೆ, ಹಿರಿಯೂರು ಮತ್ತಿತರೆ ಕಡೆ ಬಿಜೆಪಿಗೆ ಬಲ ಬಂದಂತಾಗಿದೆ. ರಾಜ್ಯದಲ್ಲಿ 28ಕ್ಕೆ 28 ಸ್ಥಾನ ನಮ್ಮ ಪಕ್ಷ ಗೆಲ್ಲಬೇಕು. 2 ಲಕ್ಷ ಮತಗಳ ಅಂತರದಿಂದ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಗೆಲ್ಲಿಸಿಕೊಳ್ಳಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಮಾಜಿ ಶಾಸಕ ತಿಪ್ಪೇಸ್ವಾಮಿ ಮಾತನಾಡಿ, ವಿಶ್ವಕಂಡ ಆದರ್ಶ ಪುರುಷ ಮೋದಿಗೆ ದೈವಶಕ್ತಿಯಿದೆ. ಕಾಂಗ್ರೆಸ್‍ನವರು ಎಲೆಕ್ಷನ್ ಗಿಮಿಕ್ ಮಾಡುತ್ತಿದ್ದಾರೆ. ಮೂರನೇ ಬಾರಿಗೆ ಮೋದಿ ದೇಶದ ಪ್ರಧಾನಿಯಾಗಲೇಬೇಕು. ಅನೇಕ ಸಾಧು ಸಂತರು ನಡೆಸಿದ ಹೋರಾಟದ ಫಲವಾಗಿ ಅಯೋಧ್ಯೆಯಲ್ಲಿ ಪ್ರಧಾನಿ ರಾಮಮಂದಿರ ಉದ್ಘಾಟಿಸಿದ್ದಾರೆ. ಕೇಂದ್ರದ ಸಾಧನೆ ಪ್ರತಿಯೊಬ್ಬರಿಗೂ ತಿಳಿಸಿ ಪಕ್ಷ ಬಹುಮತಗಳಿಂದ ಗೆಲ್ಲುವಂತೆ ಪ್ರಾಮಾಣಿಕವಾಗಿ ಕೆಲಸ ಮಾಡಿ ಎಂದರು.

ಎಸ್ಸಿ, ಎಸ್ಟಿ ಗೆ ಸೇರಿದ ಹನ್ನೊಂದು ಸಾವಿರ ಕೋಟಿ ರು.ಗಳನ್ನು ಕಾಂಗ್ರೆಸ್ ಬೇರೆ ಬೇರೆ ಉದ್ದೇಶಗಳಿಗೆ ಬಳಸಿಕೊಂಡಿದೆ. ಕಾಂಗ್ರೆಸ್ ರಾಜ್ಯವನ್ನು ದಿವಾಳಿ ಮಾಡಿ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದೆ. ನಮ್ಮ ದೇಶ, ರಾಜ್ಯಕ್ಕೆ ಮಾರಕವಾಗಿರುವ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ತೊಲಗಿಸಬೇಕಾಗಿರುವುದರಿಂದ ತಳಮಟ್ಟದಿಂದ ಜಾಗೃತಿಯಾಗಿ ಎಂದು ಕಾರ್ಯಕರ್ತರನ್ನು ಎಚ್ಚರಿಸಿದರು.

ಬಿಜೆಪಿ ರಾಜ್ಯ ಕಾರ್ಯದರ್ಶಿ ಮುನಿರಾಜ್ ಮಾತನಾಡಿ, ಮೋದಿ ರಾಮಮಂದಿರ ನಿರ್ಮಾಣ ಮಾಡಿರುವುದರಿಂದ ಇಡಿ ವಿಶ್ವ ಭಾರತವನ್ನು ನೋಡುತ್ತಿದೆ. ಬಿ.ವೈ.ವಿಜಯೇಂದ್ರ ಪಕ್ಷದ ರಾಜ್ಯಾಧ್ಯಕ್ಷರಾಗಿ ಕೇವಲ 70 ದಿನಗಳಲ್ಲಿ ಹತ್ತು ಸಾವಿರ ಕಿಮೀ ತಿರುಗಾಡಿದ್ದಾರೆ. ಗುಂಪುಗಾರಿಕೆಯಿಂದ ದೂರ ಉಳಿದು ಮೋದಿಯನ್ನು 3ನೇ ಬಾರಿಗೆ ದೇಶದ ಪ್ರಧಾನಿಯನ್ನಾಗಿ ಮಾಡುವ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ .

ಬೂತ್ ಮತ್ತು ಶಕ್ತಿ ಕೇಂದ್ರಕ್ಕೆ ಹೋಗಿ ಪ್ರಧಾನಿಯವರ ಸಾಧನೆ ಪ್ರತಿ ಮನೆ ಮನೆಗೆ ತಲುಪಿಸಿ ಮತ್ತೊಮ್ಮೆ ದೇಶದ ಪ್ರಧಾನಿಯನ್ನಾಗಿ ಮಾಡಿ ಶ್ರೀಕೃಷ್ಣನ ಮಂದಿರ ನಿರ್ಮಿಸೋಣವೆಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಮಾಜಿ ಸಂಸದ ಜನಾರ್ಧನಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪತ್‍ಕುಮಾರ್, ಜಿ.ಟಿ.ಸುರೇಶ್ ಸಿದ್ದಾಪುರ, ಮಾಜಿ ಅಧ್ಯಕ್ಷ ಜಿ.ಎಂ.ಸುರೇಶ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಅನಿಲ್‍ಕುಮಾರ್, ಬಾಳೆಕಾಯಿ ರಾಂದಾಸ್ ವೇದಿಕೆಯಲ್ಲಿದ್ದರು.