ಸಾರಾಂಶ
ಕನ್ನಡಪ್ರಭ ವಾರ್ತೆ ತಾಳಗುಪ್ಪ
ನಮ್ಮ ಪ್ರತಿನಿಧಿಗಳು ಅಭಿವೃದ್ಧಿ ಪರ ಚಿಂತಕರಾಗಿರಬೇಕು ಎಂದು ಒಬಿಸಿ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಶೇಖರ ಗಾಳಿಪುರ ಹೇಳಿದರು.ಗ್ರಾಮದಲ್ಲಿ ಚುನಾವಣಾ ಪೂರ್ವಭಾವಿಯಾಗಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ಸಂಸದ ಬಿ.ವೈ. ರಾಘವೇಂದ್ರ ಜಿಲ್ಲೆ ಕಂಡ ಅತ್ಯುನ್ನತ ಸಂಸದರಾಗಿದ್ದು, ಅವರ ಅಧಿಕಾರಾವಧಿಯಲ್ಲಿ ಜಿಲ್ಲೆ ಅಭಿವೃದ್ಧಿ ಕಂಡಿದೆ. ರಾಷ್ಟ್ರಹಿತ ದೃಷ್ಟಿಯಿಂದ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡುವ ಹೊಣೆ ಜನರಿಗಿದೆ. ಈ ಹಿನ್ನಲೆಯಲ್ಲಿ ನಾವು ರಾಘವೇಂದ್ರರನ್ನು ಆಯ್ಕೆ ಮಾಡಬೇಕು ಎಂದರು.ಕಾಂಗ್ರೆಸ್ ಅಭ್ಯರ್ಥಿ ಕುರಿತು ಬಂಗಾರಪ್ಪನವರ ಮಗಳು ಎಂಬ ನಾಮ ಫಲಕ ಹಾಕಿಕೊಂಡು ಮತದಾರರಲ್ಲಿ ಜಾತಿ ಹೆಸರು ಹೇಳಿಕೊಂಡು ಹಿಂದುಳಿದ ವರ್ಗವನ್ನು ದಾರಿತಪ್ಪಿಸಿ ಮತ ಪಡೆಯುವ ಯತ್ನ ನಡೆಸಿರುವ ಕಾಂಗ್ರೆಸ್ ಅಭ್ಯರ್ಥಿ ಗೀತಾ ಅವರು ಬೆಂಗಳೂರಿನಲ್ಲಿ ಐಷರಾಮಿ ಜೀವನ ರೂಢಿಸಿಕೊಂಡವರು. ಅವರಿಗೆ ಮಲೆನಾಡಿನ ಪರಿಚಯ ಇಲ್ಲ. ಜಿಲ್ಲೆಯ ಸಂಕೀರ್ಣ ಸಮಸ್ಯೆಯ ಅರಿವಿಲ್ಲ. ಕೃಷಿ ಕ್ಷೇತ್ರದ ಪರಿಚಯವಿಲ್ಲ. ಯಾವುದೇ ಜನಪರ ಚಳುವಳಿಯಲ್ಲಿ ಭಾಗವಹಿಸಿಲ್ಲ. ಶರಾವತಿ ಸಂತ್ರಸ್ತರ ಸಮಸ್ಯೆ ಬಗ್ಗೆ ತನ್ನನ್ನು ಗೆಲ್ಲಿಸಿದರೆ ಮಧು ಅದನ್ನು ಬಗೆಹರಿಸುತ್ತಾರೆ ಎನ್ನುತ್ತಾರೆ. ಇದರಿಂದ ಗೀತಾರಿಗೆ ಸ್ವಂತಿಕೆ ಇಲ್ಲ ಎಂಬುದನ್ನು ಎತ್ತಿ ತೋರಿಸುತ್ತದೆ ಎಂದರು.ಬಿಜೆಪಿಯ ಒಬಿಸಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ಕಳೆದ 10 ವರ್ಷಗಳ ಆಳ್ವಿಕೆಯಲ್ಲಿ ರಾಷ್ಟ್ರವನ್ನುಅಭಿವೃದ್ಧಿ ಪಥದಲ್ಲಿ ನಡೆಸಿದ, ವಿಶ್ವಮಾನ್ಯಗೊಳಿಸಿದ ನರೇಂದ್ರ ಮೋದಿಯವರ ಸರ್ಕಾರಿ ಸಾಧನೆಯನ್ನು ವಿವರಿಸಿ, ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕಾದ ಅಗತ್ಯವನ್ನು ಮನವರಿಕೆ ಮಾಡಿಕೊಡಬೇಕು. ಜಾತಿಯ ವಿಷ ವರ್ತುಲದಲ್ಲಿ ಸಿಲುಕಿ ಹಿಂದುಳಿದ ವರ್ಗದ ಮತಗಳು ವಿಭಜನೆಯಾಗದಂತೆ ಎಚ್ಚರ ವಹಿಸಬೇಕು ಎಂದರು.ವಕೀಲ ಉಲ್ಲಾಸ್, ಬ್ಯಾಕೋಡು ಲಕ್ಷ್ಮೀನಾರಾಯಣ,ಮಾರುತಿ,ಬೈರಪ್ಪ ಸೈದೂರು, ಸುರೇಂದ್ರ ಆಲಳ್ಳಿ,ದಯಾನಂದ, ಉದಯ ಮತ್ತಿತರರು ಹಾಜರಿದ್ದರು.