ತಾಯಂದಿರು ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ಕಲಿಸಲಿ

| Published : Mar 29 2024, 12:55 AM IST

ಸಾರಾಂಶ

ಎಲ್ಲ ತಾಯಂದಿರು ತಮ್ಮ ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ಕಲಿಸುವ ಕಾರ್ಯ ಮಾಡಬೇಕು. ಜತೆಗೆ ಸಂಸ್ಕಾರ ನೀಡುವ ದೇವಸ್ಥಾನಗಳ ಪ್ರಗತಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು.

ಹುಬ್ಬಳ್ಳಿ:

ಎಲ್ಲ ತಾಯಂದಿರು ತಮ್ಮ ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ಕಲಿಸುವ ಕಾರ್ಯ ಮಾಡಬೇಕು. ಜತೆಗೆ ಸಂಸ್ಕಾರ ನೀಡುವ ದೇವಸ್ಥಾನಗಳ ಪ್ರಗತಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದರು.

ಅವರು ಗುರುವಾರ ಉಣಕಲ್ಲ ಗ್ರಾಮದ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಸದ್ಗುರು ಸಿದ್ಧೇಶ್ವರ ಸ್ವಾಮಿಗಳ 103ನೇ ಪುಣ್ಯಾರಾಧನೆ ಅಂಗವಾಗಿ ಯುಗಾದಿ ಮಹೋತ್ಸವ, ರಥೋತ್ಸವ, ಪ್ರವಚನ ಕಾರ್ಯಕ್ರಮ ಹಾಗೂ ₹3 ಕೋಟಿ ವೆಚ್ಚದ ನಿಯೋಜಿತ ಬೃಹತ್ ಶಿಲಾ ಮಂಟಪ ಕಟ್ಟಡದ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಉತ್ತರ ಕರ್ನಾಟಕದ ಅದರಲ್ಲೂ ಹುಬ್ಬಳ್ಳಿ-ಧಾರವಾಡದ ಜನತೆ ದೇವರಲ್ಲಿ‌ ಶ್ರದ್ಧಾ, ಭಕ್ತಿ, ಗೌರವ ಉಳ್ಳವರು. ಅದಕ್ಕಾಗಿಯೇ ಈ ಭಾಗದಲ್ಲಿ ಶ್ರೀ ಕ್ಷೇತ್ರದಿಂದ ಬಹಳಷ್ಟು ಶೈಕ್ಷಣಿಕ ಸಾಧನೆ ಸಾಧ್ಯವಾಯಿತು. ಸಂತ ಮಹಾಂತರನ್ನು ಪೂಜ್ಯ ಮನೋಭಾವದಿಂದ ಕಾಣುವ ಸಂಪ್ರದಾಯ ಇಲ್ಲಿಯ‌ ವಿಶೇಷವಾಗಿದ್ದು, ಇದರಿಂದ ನಮ್ಮ ಸಂಸ್ಕೃತಿಯ ಪುನರುತ್ಥಾನ‌‌ ಸಾಧ್ಯ ಎಂದರು.

ನಾಡಿನ ಮಠಗಳು ಶಿಕ್ಷಣ ಹಾಗೂ ಧಾರ್ಮಿಕ ಕಲೆ ಪರಂಪರೆಯ ನಿಟ್ಟಿನಲ್ಲಿ ಅಭೂತಪೂರ್ವ ಸೇವೆ ಸಲ್ಲಿಸಿದ್ದು ಕೊಡುಗೈ ದಾನಿಗಳಾದ ಭಕ್ತರ ಸಹಕಾರದಿಂದ ಸಾಧ್ಯವಾಯಿತು. ಅದರಂತೆ ಭಕ್ತರ ಸಹಕಾರದಿಂದ ಈ ಸಿದ್ಧೇಶ್ವರ ಶ್ರೀಗಳ ಬೃಹತ್ ಶಿಲಾ ಮಂಟಪ ತ್ವರಿತ ಗತಿಯಲ್ಲಿ ಪೂರ್ಣಗೊಂಡು ಸಿದ್ದೇಶ್ವರರ ಸೇವೆ ಅಣಿಯಾಗಲಿ ಎಂದರು.

ಶ್ರೀ ಕ್ಷೇತ್ರದ ಗ್ರಾಮೀಣಾಭಿವೃದ್ಧಿ ಯೋಜನೆ ನಾಡಿನ ಮಹಿಳೆಯರಲ್ಲಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಶಕ್ತಿ ಪ್ರೋತ್ಸಾಹಿಸುವ ಕೆಲಸ ಮಾಡಿದೆ. ಇನ್ನು‌ ವ್ಯಸನಮುಕ್ತ ಕಾರ್ಯಕ್ರಮ ಮದ್ಯ ವ್ಯಸನಿಗಳನ್ನು ಮುಕ್ತಗೊಳಿಸಲು ಶ್ರಮಿಸಿದೆ. ಗುರುಗಳು ಚಾರಿತ್ರ್ಯಿಕ ಮನೋಭಾವ ಹೊಂದಿದ್ದರೆ ಭಕ್ತರು ಅವರತ್ತ ವಾಲುತ್ತಾರೆ. ಅವರ ಮಾತನ್ನು ಕೇಳುತ್ತಾರೆ. ಅಂತಹ ದಿವ್ಯ ಪರಂಪರೆ ನಮ್ಮದಾಗಬೇಕು ಎಂದರು.

ಗದಗ ತೋಂಟದಾರ್ಯ ಮಠದ ಡಾ. ಸಿದ್ದರಾಮ ಶ್ರೀಗಳು ಸಿದ್ದೇಶ್ವರ ಜಾತ್ರಾಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, 103 ವರ್ಷಗಳ ಹಿಂದೆ ನಮ್ಮನ್ನಗಲಿದ ಹಠಯೋಗಿ ಸಿದ್ದಪ್ಪಜ್ಜ ಇಂದಿಗೂ ನಮ್ಮಮನದಲ್ಲಿ ಸ್ಥಿರವಾಗಿ ನಿಂತಿರುವುದು ಅವರಲ್ಲಿರುವ ಯೋಗ ಸಿದ್ಧಿಯ ಪ್ರತೀಕವಾಗಿದೆ. ಮಹಾತ್ಮರಾದವರು ಪರಮಾತ್ಮನ ಅನುಸಂಧಾನ ಮಾಡುತ್ತಾರೆ. ಸಿದ್ಧಪ್ಪಜ್ಜನವರು ಹಠಯೋಗಿಯಾಗಿದ್ದು, ತಮ್ಮ ಯೋಗದ ಬಲದಿಂದಲೇ ಜನರ ರಕ್ಷಣೆ ಮಾಡಿದವರು. ಯೋಗ ಸಾಧಿಸಿದವನಿಗೆ ಅನೇಕ ಸಿದ್ಧಿಗಳು ಪ್ರಾಪ್ತಿಯಾಗಲಿವೆ. ಸಿದ್ಧಪ್ಪಜ್ಜನವರು ಹಠಯೋಗಿಗಳಾಗಿ ಜನಕಲ್ಯಾಣ ಮಾಡಿದ್ದಾರೆ ಎಂಬುದಕ್ಕೆ ಇಂದಿನ ಕಾರ್ಯಕ್ರಮವೇ ನಿದರ್ಶನ ಎಂದರು.

10 ದಿನಗಳ‌ ಕಾಲ ನಿತ್ಯ ಪ್ರವಚನ ನೀಡಲಿರುವ ಹುಕ್ಕೇರಿಯ ಚರಂತೇಶ್ವರಮಠದ ಶರಣುಬಸವ ದೇವರು‌ ಮಾತನಾಡಿ, ಉಣಕಲ್ಲ ಸಿದ್ದಪ್ಪಜ್ಜ ಆಂಧ್ರಪ್ರದೇಶದ ಹಳ್ಳಿಯಿಂದ ಬಂದು ಉಳವಿಯ ಹೆದ್ದಾರಿ ಉಣಕಲ್ಲ ಗ್ರಾಮದಲ್ಲಿ ನೆಲೆನಿಂತು ದೇಶಿ ಸಂಸ್ಕೃತಿಯನ್ನು ಭಕ್ತಸಮೂಹಕ್ಕೆ ಸಾರಿ ಹೇಳಿದರು ಎಂದರು.

ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ, ಪಾಲಿಕೆಯ ಸದಸ್ಯ ರಾಜಣ್ಣ ಕೊರವಿ, ಪ್ರೊ. ಕೆ.ಎಸ್‌. ಕೌಜಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ವೇಳೆ ದೇವಸ್ಥಾನ ಕಟ್ಟಡಕ್ಕೆ ದೇಣಿಗೆ ನೀಡಿದ ಹಲವರನ್ನು ಸನ್ಮಾನಿಸಲಾಯಿತು. ರಾಮಣ್ಣ ಪದ್ಮಣ್ಣವರ, ರಾಮಚಂದ್ರ ಜಾಧವ, ರಮೇಶ ಕೊರವಿ, ರಾಜು ಪಾಟೀಲ ಸೇರಿದಂತೆ ಹಲವರಿದ್ದರು. ಎಸ್.ಐ. ನೇಕಾರ ಕಾರ್ಯಕ್ರಮ ನಿರೂಪಿಸಿದರು.