ಮುಜರಾಯಿ ಇಲಾಖೆಯೆ ಪ್ರಸಾದ ವಿತರಣೆ ಮಾಡಲಿ: ರೇವಣ್ಣ

| Published : Mar 12 2024, 02:05 AM IST

ಸಾರಾಂಶ

ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಕಾರಣದಿಂದ ದೇವಾಲಯದ ಆವರಣದಲ್ಲಿ ಪ್ರಸಾದ ವಿತರಣೆಯನ್ನು ಮುಜರಾಯಿ ಇಲಾಖೆಯಿಂದಲೇ ವಿತರಣೆ ವ್ಯವಸ್ಥೆ ಮಾಡಿ, ರಾಜಕೀಯ ಪಕ್ಷಗಳ ವ್ಯಕ್ತಿಗಳು ವಿತರಣೆ ಮಾಡೋದು ಬೇಡ ಎಂದು ಶಾಸಕ ಎಚ್.ಡಿ.ರೇವಣ್ಣ ಸಲಹೆ ನೀಡಿದರು.

ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಶಾಸಕ ಎಚ್‌. ಡಿ ರೇವಣ್ಣ ಸಲಹೆ

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಕಾರಣದಿಂದ ದೇವಾಲಯದ ಆವರಣದಲ್ಲಿ ಪ್ರಸಾದ ವಿತರಣೆಯನ್ನು ಮುಜರಾಯಿ ಇಲಾಖೆಯಿಂದಲೇ ವಿತರಣೆ ವ್ಯವಸ್ಥೆ ಮಾಡಿ, ರಾಜಕೀಯ ಪಕ್ಷಗಳ ವ್ಯಕ್ತಿಗಳು ವಿತರಣೆ ಮಾಡೋದು ಬೇಡ ಎಂದು ಶಾಸಕ ಎಚ್.ಡಿ.ರೇವಣ್ಣ ಸಲಹೆ ನೀಡಿದರು. ಪಟ್ಟಣದ ತಾಲೂಕು ಕಚೇರಿಯಲ್ಲಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಜಾತ್ರಾ ಮಹೋತ್ಸವ ಮಾರ್ಚ್ ೨೪ರಂದು ಜರುಗುವ ಹಿನ್ನಲೆಯಲ್ಲಿ ಆಯೋಜನೆ ಮಾಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಾಸ್ ವ್ಯವಸ್ಥೆ ಮಾಡದೇ ಎಲ್ಲರೂ ಸರದಿಯಲ್ಲಿ ತೆರಳಿ ಪೂಜೆ ಸಲ್ಲಿಸಲು ಅವಕಾಶ ನೀಡಿ. ಈಗಾಗಲೇ ಜಾತ್ರಾ ಮಹೋತ್ಸವದ ಆಚರಣೆ ಪತ್ರಿಕೆಯಲ್ಲಿ ಪೂಜಾ ಕೈಂಕರ್ಯಕ್ಕೆ ಹೆಸರು ನೊಂದಾಯಿಸಿ ಕೊಂಡಿರುವ ವ್ಯಕ್ತಿಗಳು ಆ ದಿನಗಳಲ್ಲಿ ಪೂಜಾ ಮಾಡಿಸಲು ಅಡ್ಡಿಪಡಿಸದಂತೆ ಸಲಹೆ ನೀಡಿದರು. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮಾತನಾಡಿ, ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಕಾರಣದಿಂದ ಜಾತ್ರೆಯ ದಿನದಂದು ರಥದಲ್ಲಿ ಪೂಜೆ ಸಲ್ಲಿಸಲು ರಾಜಕಾರಣಿಗಳಿಗೆ ಅವಕಾಶ ನೀಡಬೇಡಿ. ಆ ರೀತಿ ಅವಕಾಶ ನೀಡುವುದಾದರೇ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಶ್ರೇಯಸ್ ಪಟೇಲರಿಗೂ ಅವಕಾಶ ನೀಡಬೇಕು. ತಪ್ಪಿದ್ದಲ್ಲಿ ಗಲಾಟೆಯಾಗುತ್ತೆ ಎಂದು ಎಚ್ಚರಿಸಿದರು. ತಹಸೀಲ್ದಾರ್ ಪಿ.ಸಿ.ಪ್ರವೀಣ್ ಕುಮಾರ್ ಮಾತನಾಡಿ, ಚುನಾವಣೆ ನೀತಿ ಸಂಹಿತೆ ಜಾರಿಯಾದಲ್ಲಿ ಸರ್ಕಾರದ ಮಾರ್ಗಸೂಚಿಯ ಅನುಸಾರ ಜಾತ್ರಾ ಮಹೋತ್ಸವ ಜರುಗಲಿದ್ದು, ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಅವಕಾಶ ಆಗದಂತೆ ಸಹಕಾರ ನೀಡುವಂತೆ ತಿಳಿಸಿದರು. ತಾಪಂ ಇಒ ಕುಸುಮಾಧರ್, ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಹಿರಿಯ ಅರ್ಚಕ ನಾರಾಯಣ ಭಟ್ಟರು, ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ, ವಿವಿಧ ಇಲಾಖೆಗಳ ಅಧಿಕಾರಿಗಳು, ಪುರಸಭೆ ಮಾಜಿ ಅಧ್ಯಕ್ಷ ಎಚ್.ವಿ.ಪುಟ್ಟರಾಜು, ಕಾಂಗ್ರೆಸ್ ಮುಖಂಡ ಬಾಗಿವಾಳು ಮಂಜೇಗೌಡ, ಸಮಾಜ ಸೇವಕ ಶಂಕರನಾರಾಯಂ ಐತಾಳ್, ಪುರಸಭೆ ಮಾಜಿ ಸದಸ್ಯ ಓಲೆ ಕುಮಾರ, ಇತರರು ಇದ್ದರು.