ಕ್ರಿಮಿನಲ್ ಹಿನ್ನೆಲೆಯ ಶಾಸಕ ಮುನಿರತ್ನರನ್ನು ಪಕ್ಷದಿಂದ ಅಮಾನತು ಮಾಡಲಿ

| Published : Sep 22 2024, 01:47 AM IST

ಕ್ರಿಮಿನಲ್ ಹಿನ್ನೆಲೆಯ ಶಾಸಕ ಮುನಿರತ್ನರನ್ನು ಪಕ್ಷದಿಂದ ಅಮಾನತು ಮಾಡಲಿ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರಿನ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಬಿಬಿಎಂಪಿ ಗುತ್ತಿಗೆದಾರರನ್ನು ಹಣಕ್ಕಾಗಿ ಪೀಡಿಸಿ, ತೊಂದರೆ ಕೊಟ್ಟು ಅವರ ತಾಯಿ ಮತ್ತು ಪತ್ನಿಯ ಬಗ್ಗೆ ತುಚ್ಛವಾಗಿ ಪದಬಳಕೆ ಮಾಡುವ ಮೂಲಕ ಸ್ತ್ರೀ ಕುಲಕ್ಕೆ ಅವಮಾನ ಮಾಡಿರುತ್ತಾರೆ. ಹಣಕ್ಕಾಗಿ ಅವರು ಎಂತಹ ಕೀಳು ಮಟ್ಟಕ್ಕಾದರೂ ಇಳಿಯಲು ಸಿದ್ಧರಿರುತ್ತಾರೆ ಎಂಬುದನ್ನು ಸಾಬೀತು ಮಾಡಿದ್ದಾರೆ ಶಾಸಕ ಮುನಿರತ್ನರನ್ನು ಪಕ್ಷದಿಂದ ಅಮಾನತು ಮಾಡಲಿ ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಕ್ರಿಮಿನಲ್ ಹಿನ್ನೆಲೆಯುಳ್ಳ ಶಾಸಕ ಮುನಿರತ್ನ ವಿರುದ್ಧ ಕ್ರಮ ಕೈಗೊಂಡು ಶಾಸಕ ಸ್ಥಾನದಿಂದ ಕಿತ್ತೊಗೆಯಬೇಕು ಮತ್ತು ಅವರನ್ನು ಪಕ್ಷದಿಂದ ಅಮಾನತು ಮಾಡುವಂತೆ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಬೆಂಗಳೂರಿನ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಬಿಬಿಎಂಪಿ ಗುತ್ತಿಗೆದಾರರನ್ನು ಹಣಕ್ಕಾಗಿ ಪೀಡಿಸಿ, ತೊಂದರೆ ಕೊಟ್ಟು ಅವರ ತಾಯಿ ಮತ್ತು ಪತ್ನಿಯ ಬಗ್ಗೆ ತುಚ್ಛವಾಗಿ ಪದಬಳಕೆ ಮಾಡುವ ಮೂಲಕ ಸ್ತ್ರೀ ಕುಲಕ್ಕೆ ಅವಮಾನ ಮಾಡಿರುತ್ತಾರೆ. ಹಣಕ್ಕಾಗಿ ಅವರು ಎಂತಹ ಕೀಳು ಮಟ್ಟಕ್ಕಾದರೂ ಇಳಿಯಲು ಸಿದ್ಧರಿರುತ್ತಾರೆ ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದರು.

"ಬಾಯಿಯಲ್ಲಿ ಮಂತ್ರ ಕೈಯಲ್ಲಿ ದೊಣ್ಣೆ " ಎಂಬ ಧ್ಯೇಯವನ್ನು ಹೊಂದಿರುವ ಬಿಜೆಪಿ ಮುಖಂಡರು ಮಹಿಳೆಯರ ಬಗ್ಗೆ ಅಗೌರವ ತೋರುವ ಮೂಲಕ ಸಮಾಜದಲ್ಲಿ ಮಹಿಳೆಯರನ್ನು ನಿಂದಿಸಿ, ಅವಮಾನ ಮಾಡಿ, ಸಮಾಜದಲ್ಲಿ ತಲೆ ಎತ್ತಿ ಸ್ವಾಭಿಮಾನದಿಂದ ಬದುಕಲು ಸಾಧ್ಯವಾಗದ ಪರಿಸ್ಥಿತಿ ತಂದಿರುತ್ತಾರೆ. ಈಗಾಗಲೇ ಮುನಿರತ್ನ ಇವರು ಒಕ್ಕಲಿಗರು ಮತ್ತು ಪರಿಶಿಷ್ಟ ಜಾತಿ ಈ ಎರಡು ಸಮುದಾಯಗಳ ಬಗ್ಗೆ ಅವಹೇಳನಕಾರಿ ಶಬ್ದಗಳನ್ನು ಉಪಯೋಗಿಸಿ ಜಾತಿ ನಿಂದನೆ ಮಾಡಿರುತ್ತಾರೆ. ಬಿಜೆಪಿಯವರು ಹಾಕಿರುವುದು ಮುಖವಾಡ, ನಿಜವಾದ ಮನಸ್ಥಿತಿ ಏನು ಎಂಬುದನ್ನು ಮುನಿರತ್ನ ಇವರು ತನ್ನ ನಿಜವಾದ ವರಸೆ ತೋರುವ ಮೂಲಕ ಇದನ್ನು ಸಾಬೀತು ಮಾಡಿದ್ದಾರೆ. ಇಡೀ ಮಾನವ ಕುಲಕ್ಕೆ ಮಸಿ ಬಳಿಯುವ ರೀತಿ ಬಿಜೆಪಿ ಮುಖಂಡರು ನಡೆದುಕೊಳ್ಳುತ್ತಿದ್ದಾರೆ. ಒಕ್ಕಲಿಗರ ಮಹಾ ಸಂಸ್ಥಾನ ಮಠದ ಸ್ವಾಮೀಜಿಗಳಾದ ನಿರ್ಮಲಾನಂದನಾಥ ಸ್ವಾಮೀಜಿಯವರು ಮತ್ತು ಕಾಂಗ್ರೆಸ್ ಪಕ್ಷದ ಒಕ್ಕಲಿಗ ಮುಖಂಡರು ಈಗಾಗಲೇ ಮುನಿರತ್ನ ರವರ ನಡೆಯನ್ನು ಒಕ್ಕೋರಲಿನಿಂದ ಖಂಡಿಸಿರುತ್ತಾರೆ. ಆದರೆ ಒಕ್ಕಲಿಗ ಜನಾಂಗದ ಆರ್‌.ಅಶೋಕ್, ಸಿ.ಟಿ.ರವಿ, ಅಶ್ವತ್ಥ್‌ ನಾರಾಯಣ್ ಮತ್ತು ಎಚ್.ಡಿ. ಕುಮಾರಸ್ವಾಮಿ ಹಾಗೂ ಬಾಯಿ ಬಡುಕ ಪ್ರತಾಪ್ ಸಿಂಹ ರವರು ಕೂಡ ಮುನಿರತ್ನ ಇವರ ಹೇಳಿಕೆಯನ್ನು ಖಂಡಿಸದೆ ಅವರ ಪರ ನಿಂತಿರುವುದು ಮತ್ತು ಅವರನ್ನು ವಹಿಸಿಕೊಂಡು ಮಾತನಾಡಿರುವುದು ನಾಚಿಕೆಗೇಡಿನ ಸಂಗತಿಯಾಗಿರುತ್ತದೆ. ಒಕ್ಕಲಿಗರ ಮತ್ತು ಪರಿಶಿಷ್ಟ ಜಾತಿಯ ಸಮುದಾಯದ ಸ್ವಾಭಿಮಾನವನ್ನು ಕೆದಕಿರುವ ಭ್ರಷ್ಟ ಮುನಿರತ್ನ ವಿರುದ್ಧ ಧ್ವನಿ ಎತ್ತದ ಬಿಜೆಪಿ ಮುಖಂಡರು ಕೇವಲ ತಮ್ಮ ಬೇಳೆ ಬೇಯಿಸಿಕೊಳ್ಳುವ ಸಲುವಾಗಿ ಬಿಜೆಪಿ ಕೈಮಾಂಡ್ ಮುಂದೆ ಮುಂಡಿಯೂರಿ ಅಧಿಕಾರಕ್ಕಾಗಿ ಅಂಟಿಕೊಂಡಂತಿದೆ.

ಒಂದು ವೇಳೆ ಜೆಡಿಎಸ್. ಮತ್ತು ಬಿಜೆಪಿ ಮುಖಂಡರಿಗೆ ಆತ್ಮ ಗೌರವ ಮತ್ತು ಆತ್ಮ ಸಾಕ್ಷಿ ಇದ್ದಿದ್ದೆ ಆದರೆ ಕ್ರಿಮಿನಲ್ ಹಿನ್ನಲೆವುಳ್ಳ ಇವರ ವಿರುದ್ಧ ಕ್ರಮ ಕೈಗೊಂಡು ಶಾಸಕ ಸ್ಥಾನದಿಂದ ಕಿತ್ತೊಗೆಯುವಂತೆ ಮತ್ತು ಅವರನ್ನು ಪಕ್ಷದಿಂದ ಅಮಾನತು ಮಾಡುವಂತೆ ವರಿಷ್ಠರಲ್ಲಿ ಒತ್ತಾಯ ಮಾಡಲಿ. ಇಲ್ಲದಿದ್ದರೆ ನಮಗೆ ಬಿಜೆಪಿ ಹೈಕಮಾಂಡ್ ವಿರುದ್ಧ ನಿಲ್ಲಲು ಶಕ್ತಿ ಇಲ್ಲ ಮತ್ತು ಮುನಿರತ್ನ ವಿರುದ್ಧ ಮಾತನಾಡುವ ಅರ್ಹತೆ ಮತ್ತು ಯೋಗ್ಯತೆ ನಮಗಿಲ್ಲ ಎಂದು ಸಾರ್ವಜನಿಕವಾಗಿ ಸ್ವಾಭಿಮಾನಿ ಒಕ್ಕಲಿಗರ ಮುಂದೆ ಒಪ್ಪಿಕೊಳ್ಳಲು ಸಿದ್ಧರಿರುವರೇ ಎಂದು ಪ್ರಶ್ನೆ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ರಂಗಸ್ವಾಮಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ದೇವರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಘು ದಾಸರಕೊಪ್ಪಲು, ಪಕ್ಷದ ಹಿರಿಯ ಮುಖಂಡ ತುಳಸಿ, ಹರೀಶ್ ರಂಗೋಲಿಹಳ್ಳ, ಇತರರು ಉಪಸ್ಥಿತರಿದ್ದರು.