ಸಾರಾಂಶ
ವಿವಿಧ ಸ್ವಾತಂತ್ರ್ಯ ಹೋರಾಟಗಾರರ ಜಯಂತ್ಯುತ್ಸವ ಸಮಾರಂಭದ ಉದ್ಘಾಟನೆಕನ್ನಡಪ್ರಭ ವಾರ್ತೆ ಕೊಪ್ಪಳ
ಭಾರತೀಯ ಮುಸಲ್ಮಾನರಿಗೆ ಕುರಾನ್ ಮತ್ತು ದೇಶದ ಸಂವಿಧಾನ ಎರಡು ಬಹಳ ಮುಖ್ಯವಾಗಿದ್ದು, ಅದರ ಅಡಿಯಲ್ಲಿ ಬದುಕು ಕಟ್ಟಿಕೊಳ್ಳಬೇಕಾಗಿದೆ. ಏನೇ ಸಮಸ್ಯೆಗಳಿದ್ದರೂ ಕಾನೂನಿನ ಚೌಕಟ್ಟಿನಲ್ಲಿ ನ್ಯಾಯ ಕೇಳಬೇಕು ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹೇಳಿದರು.ಶನಿವಾರ ನಗರದ ಸಾಹಿತ್ಯ ಭವನದಲ್ಲಿ ಕೊಪ್ಪಳ ಮುಸ್ಲಿಂ ಯುವ ಸಮಿತಿ ಏರ್ಪಡಿಸಿದ ಭಾರತ ಕಂಡ ವಿವಿಧ ಸ್ವಾತಂತ್ರ್ಯ ಹೋರಾಟಗಾರರ ಜಯಂತ್ಯುತ್ಸವ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಸೃಷ್ಟಿಕರ್ತನ ಕಾನೂನು ಕುರಾನನಲ್ಲಿದೆ, ಅದನ್ನು ಕೂಡ ನಾವು ಪಾಲಿಸಬೇಕು. ಅದೇ ರೀತಿ ನಾವು ಭಾರತೀಯ ಪ್ರಜೆಗಳಾಗಿದ್ದು ಸಂವಿಧಾನ ಶಿಲ್ಪಿ, ಡಾ. ಬಿ.ಆರ್. ಅಂಬೇಡ್ಕರ್ ಬರೆದ ಸಂವಿಧಾನದಂತೆ ನಾವು ನಮ್ಮ ಬದುಕು ಕಟ್ಟಿ ಕೊಂಡು ರಾಷ್ಟ್ರೀಯ ಭಾವೈಕ್ಯತೆ ಬೆಳಸಿಕೊಂಡು ಜೀವನ ಸಾಗಿಸಬೇಕು. ಯಾವುದೇ ಕಾರಣಕ್ಕೂ ಇತರರಿಗೆ ನಮ್ಮಿಂದ, ನಮ್ಮ ಆಚರಣೆಗಳಿಂದ ಯಾವುದೇ ತೊಂದರೆ ಉಂಟಾಗಬಾರದು. ನಮ್ಮ ಧರ್ಮವನ್ನು ಪ್ರೀತಿಸುವುದರ ಜೊತೆಗೆ ಇತರ ಧರ್ಮವನ್ನು ಗೌರವಿಸುವಂಥ ಕೆಲಸ ಆಗಬೇಕು. ದೇಶದ ಸ್ವತಂತ್ರಕ್ಕಾಗಿ ಹೋರಾಡಿದ ಮಹಾನ್ ನಾಯಕರ ಆದರ್ಶ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.ನಮ್ಮ ನಾಡಿನಲ್ಲಿ ಮತ್ತು ದೇಶದಲ್ಲಿ ಕೋಮುವಾದಿ ಶಕ್ತಿಗಳು ಅಮಾಯಕ ಯುವಕರಲ್ಲಿ ಜಾತಿ ವಿಷಬೀಜ ಬಿತ್ತಿ, ಒಬ್ಬರ ವಿರುದ್ಧ ಒಬ್ಬರಿಗೆ ಎತ್ತಿ ಕಟ್ಟುವ ಕೆಲಸ ಮಾಡುತ್ತಿವೆ. ಸಮಾಜದಲ್ಲಿ ಅನವಶ್ಯಕ ಗೊಂದಲ ಸೃಷ್ಟಿಸುವಂತಹ ಕೆಲಸ ಮಾಡುತ್ತಿದ್ದಾರೆ. ಇಂತವರಿಂದ ಎಚ್ಚರದಿಂದಿರಿ ಎಂದು ಯುವಕರಿಗೆ ಸಲಹೆ ನೀಡಿದರು.ನನ್ನ ಸೋಲಿಗೆ ನಮ್ಮವರೇ ಕಾರಣ:
ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ಸೋಲಿಗೆ ನಮ್ಮ ಪಕ್ಷದ ಕೆಲವರು ಕಾರಣರಾಗಿದ್ದಾರೆ. ಅವರಿಗೆ ಅನ್ಸಾರಿ ಬಗ್ಗೆ ಭಯ ಜಾಸ್ತಿ ಇರುವುದರಿಂದ ಅವರು ಹೀಗೆ ಹಿಂದಿನಿಂದ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಾ ಬಂದಿದ್ದಾರೆ ಎಂದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಮಾತನಾಡಿ, ಈ ಸಮಾಜದ ಋಣ ನಮ್ಮ ಕುಟುಂಬದ ಮೇಲಿದೆ. ಸಮಾಜದ ಏನೇ ಸಮಸ್ಯೆಗಳಿದ್ದರೂ ಅದಕ್ಕೆ ನೇರ ಸ್ಪಂದನೆ ನೀಡಿ, ಅದರ ಇತ್ಯರ್ಥಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಸಂಸದ ಕೆ. ರಾಜಶೇಖರ್ ಹಿಟಾಳ್ ಮಾತನಾಡಿ, ಒಗ್ಗಟ್ಟಿನಲ್ಲಿ ಬಲವಿದೆ, ಇಂದು ಮುಸ್ಲಿಂ ಸಮಾಜ ಪ್ರದರ್ಶಿಸಿದ ಸಮಾಜದ ಸಂಘಟನೆಯ ಒಗ್ಗಟ್ಟು ಮಾದರಿಯಾಗಿದೆ ಎಂದರು.ಮಾಜಿ ಸಂಸದ ಸಂಗಣ್ಣ ಕರಡಿ, ಕಾಡಾ ಅಧ್ಯಕ್ಷ ಹಸನ್ ಸಾಬ್ ಡೋಟಿಹಾಳ, ಜೆಡಿಎಸ್ ಜಿಲ್ಲಾಧ್ಯಕ್ಷ ಸುರೇಶ್ ಭೂಮರಡ್ಡಿ, ನಗರಸಭೆಯ ಅಧ್ಯಕ್ಷ ಅಮ್ಜಾದ್ ಪಟೇಲ್, ಸಮಾಜದ ಮುಖಂಡರಾದ ಕೆ.ಎಂ. ಸಯ್ಯದ್, ಎಂ. ಪಾಷಾ ಕಾಟನ್ ಮಾತನಾಡಿದರು ಮುಸ್ಲಿಂ ಧರ್ಮ ಗುರು ಮೌಲಾನ ಮುಫ್ತಿ ಮೊಹಮ್ಮದ್ ನಜೀರ್ ಅಹಮದ್ ಖಾದ್ರಿ ತಸ್ಕಿನಿ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ಚಿಂತಕ ಹೋರಾಟಗಾರ ಪ್ರೊ. ಎಸ್.ಬಿ. ಚಂದ್ರಶೇಖರ್ ವಿಶೇಷ ಉಪನ್ಯಾಸ ನೀಡಿದರು. ರಾಜಶೇಖರ್ ಅಡೂರ, ಸೋಮಶೇಖರ್ ಹಿಟ್ನಾಳ, ಯಮನೂರಪ್ಪ ನಾಯಕ, ಖತೀಬ್ ಆಸಿಫ್ ಕರ್ಕಿಹಳ್ಳಿ, ಹುಸೇನ್ ಪಿರಾ ಮುಜಾವರ್ ಅನೇಕರು ಇದ್ದರು.