ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನ ಮಂತ್ರಿ ಆಗಲಿ: ನಟಿ ತಾರಾ

| Published : Apr 19 2024, 01:02 AM IST

ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನ ಮಂತ್ರಿ ಆಗಲಿ: ನಟಿ ತಾರಾ
Share this Article
  • FB
  • TW
  • Linkdin
  • Email

ಸಾರಾಂಶ

ಬೊಮ್ಮಾಯಿ ಅವರು ಕೇಂದ್ರ ಯೋಜನೆಗಳನ್ನು ಈ ಕ್ಷೇತ್ರಕ್ಕೆ ಹೆಚ್ಚು ತಂದು ಅಭಿವೃದ್ಧಿಪಡಿಸುತ್ತಾರೆ. ನೇರವಾಗಿ ಕೇಂದ್ರದ ಯೋಜನೆಗಳನ್ನು ಮನೆ, ಮನೆಗೆ ಹಾಗೂ ಮಹಿಳೆಯರಿಗೆ ತಲುಪಿಸುತ್ತಾರೆ ಎಂದು ನಟಿ ತಾರಾ ಅನುರಾಧಾ ಹೇಳಿದರು.

ಕನ್ನಡಪ್ರಭ ವಾರ್ತೆ ಹಾವೇರಿ

ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನ ಮಂತ್ರಿ ಆಗಬೇಕು. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಈ ಕ್ಷೇತ್ರದಿಂದ ಆಯ್ಕೆಗೊಂಡು ಕೇಂದ್ರದಲ್ಲಿ ಮಂತ್ರಿ ಆಗಿ ಕೇಂದ್ರದ ಯೋಜನೆಗಳನ್ನು ಇಲ್ಲಿಗೆ ತರುತ್ತಾರೆ. ಹೀಗಾಗಿ ಎಲ್ಲರೂ ಬಿಜೆಪಿಗೆ ಮತ ನೀಡಿ, ಮತ ಹಾಕಿಸಿ ಎಂದು ಬಿಜೆಪಿ ತಾರಾ ಪ್ರಚಾರಕಿ, ನಟಿ ತಾರಾ ಅನುರಾಧಾ ಮನವಿ ಮಾಡಿದರು.

ನಗರದ ಕೊಳ್ಳಿ ಪಾಲಿಟೆಕ್ನಿಕ್ ಕಾಲೇಜ್ ಪಕ್ಕದ ಮೈದಾನದಲ್ಲಿ ಗುರುವಾರ ಏರ್ಪಡಿಸಿದ್ದ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಬೊಮ್ಮಾಯಿ ಅವರು ಕೇಂದ್ರ ಯೋಜನೆಗಳನ್ನು ಈ ಕ್ಷೇತ್ರಕ್ಕೆ ಹೆಚ್ಚು ತಂದು ಅಭಿವೃದ್ಧಿಪಡಿಸುತ್ತಾರೆ. ನೇರವಾಗಿ ಕೇಂದ್ರದ ಯೋಜನೆಗಳನ್ನು ಮನೆ, ಮನೆಗೆ ಹಾಗೂ ಮಹಿಳೆಯರಿಗೆ ತಲುಪಿಸುತ್ತಾರೆ. ಕಾರಣ ಈ ಚುನಾವಣೆಯಲ್ಲಿ ಬೊಮ್ಮಾಯಿ ಅವರನ್ನು ಬೆಂಬಲಿಸಿ ಮೋದಿ ಕೈ ಬಲಪಡಿಸಿ ಎಂದು ಮನವಿ ಮಾಡಿದರು.

ಚೆನ್ನಮ್ಮ ಬೊಮ್ಮಾಯಿ ಮಾತನಾಡಿ, ಮೋದಿ ಎಂದರೆ ಅಭಿವೃದ್ಧಿ, ಅಭಿವೃದ್ಧಿ ಎಂದರೆ ಮೋದಿಯವರು. ಏಲಕ್ಕಿ ಕಂಪನ್ನು ರಾಷ್ಟ್ರ ಮಟ್ಟದಲ್ಲಿ ಹರಡಿಸಲು ಬೊಮ್ಮಾಯಿ ಅವರನ್ನು ಗೆಲ್ಲಿಸಿ. ಮೋದಿ ಅವರು ಇನ್ನಷ್ಟು ಸದೃಢವಾಗಿ ದೇಶವನ್ನು ಮುನ್ನಡೆಸುತ್ತಾರೆ ಎಂದರು.

ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ಸೃಷ್ಟಿ ಪಾಟೀಲ ಮಾತನಾಡಿ, ಪ್ರಧಾನಿ ಮೋದಿಯವರು ಮಹಿಳೆಯರಿಗೆ ಸ್ವಾವಲಂಬಿ ಜೀವನ ನಡೆಸಲು ಅನೇಕ ಯೋಜನೆ ಕೊಟ್ಟಿದ್ದಾರೆ. ಹೀಗಾಗಿ ಮಹಿಳೆಯರು ಈಗ ಎಲ್ಲಾ ಕ್ಷೇತ್ರದಲ್ಲಿ ಮುಂದೆ ಬಂದಿದ್ದಾರೆ ಎಂದರು.

ರಾಜ್ಯ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಹಲವು ಯೋಜನೆಗಳನ್ನು ಸ್ಥಗಿತಗೊಳಿಸಿ ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿದ್ದಾರೆ. ಕಾಂಗ್ರೆಸ್ ಇದು ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಸಿದುಕೊಳ್ಳುವ ತಂತ್ರ ಅನುಸರಿಸುತ್ತಿದೆ ಎಂದು ದೂರಿದರು.

ಪಕ್ಷದ ಮಹಿಳಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ನಿಸ್ಸಿಮಗೌಡ್ರ, ಭಾರತಿ ಜಂಬಗಿ, ಭಾರತಿ ಅಳವಂಡಿ, ಮಂಜುಳಾ ಕರಬಸಮ್ಮನವರ, ಚೆನ್ನಮ್ಮ ಬ್ಯಾಡಗಿ, ಲಲಿತಾ ಗುಂಡೇನಹಳ್ಳಿ ಇತರರು ಇದ್ದರು.

ಮಹಿಳಾ ಸಮಾವೇಶಕ್ಕೆ ಮಳೆ ಅಡ್ಡಿ

ಹಾವೇರಿ ನಗರದ ಕೊಳ್ಳಿ ಪಾಲಿಟೆಕ್ನಿಕ್ ಕಾಲೇಜ್ ಪಕ್ಕದ ಮೈದಾನದಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಮಹಿಳಾ ಸಮಾವೇಶ ಆಯೋಜಿಸಿ ಪೆಂಡಲ್ ಅಳವಡಿಸಲಾಗಿತ್ತು. ಸಂಜೆ ವೇಳೆಗೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಸಂಜೆ 4 ಗಂಟೆ ವೇಳೆಗೆ ಸಮಾವೇಶ ಆರಂಭವಾಯಿತು. 4.20ರ ವೇಳೆಗೆ ಚಿತ್ರನಟಿ ತಾರಾ ಮಾತು ಆರಂಭಿಸುತ್ತಿದ್ದಂತೆ ಮಳೆ ಶುರುವಾಯಿತು. ಕೇವಲ 2 ನಿಮಿಷ ಮಾತನಾಡಿದ ತಾರಾ ವೇದಿಕೆಯಿಂದ ನಿರ್ಗಮಿಸಿದರು. ಸಮಾವೇಶಕ್ಕೆ ಆಗಮಿಸಿದ್ದ ಮಹಿಳೆಯರು ಮಳೆಯಲ್ಲಿ ಸಿಲುಕಿ ತಲೆಯ ಮೇಲೆ ಕುರ್ಚಿ ಹೊತ್ತು ನಿಂತರು. ಮೂಕ್ಕಾಲು ಗಂಟೆ ಧಾರಾಕಾರ ಮಳೆ ಸುರಿಯಿತು. ಮಳೆಯಲ್ಲಿ ನೆನೆದುಕೊಂಡೇ ಕೆಲ ಮಹಿಳೆಯರು ಮನೆಯತ್ತ ಹೆಜ್ಜೆ ಹಾಕಿದರು.ಮಳೆ ಆಗಮನ

ರಾಜ್ಯದಲ್ಲಿ ಮಳೆ ಇಲ್ಲದೇ ಬರ ಬಿದ್ದಿದೆ. ಜನ ಮಳೆ ಇಲ್ಲ, ಎಲ್ಲೆಡೆ ನೀರಿಲ್ಲ, ಬರ ಬಿದ್ದಿದೆ ಎನ್ನುತ್ತಿದ್ದೇವು. ನಾವು ಸಮಾವೇಶ ನಡೆಸಿ ಮತಯಾಚಿಸುವ ಸಂದರ್ಭದಲ್ಲೇ ಮೇಘರಾಜ ಮಳೆ ಸುರಿಸುತ್ತಿರುವುದು ಶುಭ ಸೂಚಕ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಸಮೃದ್ಧ ಮಳೆ ಬರುತ್ತೆ.

- ತಾರಾ, ಚಿತ್ರನಟಿ.