ಸಾರಾಂಶ
ಶಿರಾ : ದೇಶದ ಸುರಕ್ಷತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು. ಈ ನಿಟ್ಟಿನಲ್ಲಿ ರಾಜ್ಯದ ೨೮ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಬೇಕು ಎಂದು ಎಂದು ಚಿತ್ರದುರ್ಗ ಲೋಕಸಭಾ ಎನ್.ಡಿ.ಎ. ಅಭ್ಯರ್ಥಿ ಗೋವಿಂದ ಕಾರಜೋಳ ಹೇಳಿದರು. ಅವರು ನಗರದ ಸೋಮೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ಏರ್ಪಡಿಸಿದ್ದ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ಸಮನ್ವಯ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ದೇಶದ ಸಮಗ್ರತೆ ಹಾಗೂ ಭದ್ರತೆ ನರೇಂದ್ರ ಮೋದಿಯರಿಂದ ಮಾತ್ರ ಸಾಧ್ಯ. ಮೋದಿಯವರ ಕೈಬಲಪಡಿಸಲು ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಎಲ್ಲರೂ ಒಗ್ಗೂಡಿ ನನ್ನನ್ನು ಗೆಲ್ಲಿಸಿ ಎಂದ ಅವರು. ರಾಹುಲ್ ಗಾಂಧಿ ಅವರು ಪ್ರಧಾನಿ ಆಗಲು ಹೊರಟರೆ ಒಬ್ಬ ಬಿಕ್ಷುಕನು ಸಹ ಒಪ್ಪುವುದಿಲ್ಲ. ಕಾಂಗ್ರೆಸ್‌ನಲ್ಲಿ ಪ್ರಧಾನಿ ಅಭ್ಯರ್ಥಿಯೇ ಇಲ್ಲ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲು ಹೊರಟರೆ ಇಂಡಿಯಾ ಒಕ್ಕೂಟವೇ ಚಿದ್ರವಾಗುತ್ತಿದೆ ಎಂದರು.
ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಅವರು ಮಾತನಾಡಿ, ವಿಶ್ವವೇ ಮೆಚ್ಚಿನ ನಾಯಕ ನರೇಂದ್ರ ಮೋದಿ. ಅವರ ನಾಯಕತ್ವದಲ್ಲಿ ದೇಶ ಸುಭದ್ರವಾಗಿರುತ್ತದೆ. ನಾನು ಕೇಂದ್ರ ಸಚಿವನಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಭದ್ರ ಯೋಜನೆಯನ್ನು ಕೇಂದ್ರದ ಯೋಜನೆಯಿಂದ ಘೋಷಣೆ ಮಾಡಲು ಶ್ರಮಿಸಿದ್ದೇನೆ. ಮುಂದಿನ ದಿನಗಳಲ್ಲಿ ನಾನು ರಾಜ್ಯದ ರಾಜಕಾರಣದಲ್ಲಿ ಸಕ್ರಿಯನಾಗುವ ಬಯಕೆಯಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ ಎಂದರು.
ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಮಾತನಾಡಿ, ರಾಜ್ಯ ಕಂಡ ಮುತ್ಸದ್ದಿ ರಾಜಕಾರಣಿ ಗೋವಿಂದ ಕಾರಜೋಳ ಅವರು ನೀರಾವರಿ ಸಚಿವರಾಗಿದ್ದಾಗ ಹಲವಾರು ಜನಪರ ಕಾರ್ಯ ಮಾಡಿದ್ದಾರೆ. ಈ ಬಾರಿ ಬಿಜೆಪಿ ಜೆಡಿಎಸ್ ಮೈತ್ರಿಯಾಗಿರುವ ಹಿನ್ನೆಲೆಯಲ್ಲಿ ದೇಶದ ಜಗ ಮೆಚ್ಚಿದ ಪ್ರಧಾನಿ ಮೋದಿ ಜನ ಮೆಚ್ಚಿದ ಪ್ರಧಾನಿ ದೇವೇಗೌಡ ಅವರು ಒಂದಾಗಿ ದೇಶದ ಅಭಿವೃದ್ಧಿ ಮಾಡುತ್ತಾರೆ ಎಂದರು.
ಮಾಜಿ ಶಾಸಕ ಡಾ ಸಿಎಂ ರಾಜೇಶ್ ಗೌಡ ಮಾತನಾಡಿ, ಭಾರತ ದೇಶ ವಿಶ್ವ ಮಟ್ಟದಲ್ಲಿ ರಾರಾಜಿಸಬೇಕು ಎಂದರೆ ನರೇಂದ್ರ ಮೋದಿಯವರು ಪ್ರಧಾನಿಯಾಗಬೇಕು. ಭಾರತ ದೇಶ ಶಾಂತಿ ನೆಮ್ಮದಿಯಿಂದ ಇರಲು ಮೋದಿ ಪ್ರಧಾನಿ ಆಗಬೇಕು. ದೇಶದ ಏಳಿಗೆಗೆ ಬಿಜೆಪಿ ಅಧಿಕಾರಕ್ಕೆ ಬರಬೇಕು. ಈ ನಿಟ್ಟಿನಲ್ಲಿ ಬಿಜೆಪಿ ಕಾರ್ಯಕರ್ತರು ಅತ್ಯಂತ ಉತ್ಸಾಹ ದಿಂದ ಕೆಲಸ ಮಾಡುತ್ತಿದ್ದಾರೆ.
ಗೋವಿಂದ ಕಾರಜೋಳ ಅವರು ಕೋವಿಡ್ ಇದ್ದ ಸಂದರ್ಭದಲ್ಲೂ ಸೇವೆ ಮಾಡಿದ್ದಾರೆ. ಸವಾಲು ಎದುರಿಸುವ ಆತ್ಮವಿ ಶ್ವಾಸ ಅವರಲ್ಲಿದೆ. ಲೋಕೋಪಯೋಗಿ ಸಚಿವರಾಗಿದ್ದ ಸಂದರ್ಭದಲ್ಲಿ ಶಿರಾ ತಾಲೂಕಿಗೆ 100 ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ. ಮದಲೂರು ಕೆರೆಗೆ ನೀರು ಹರಿಸಲು ಸಹಕಾರ ನೀಡಿದ್ದಾರೆ. ಆದ್ದರಿಂದ ಗೋವಿಂದ ಕಾರಜೋಳ ಅವರಿಗೆ ಹೆಚ್ಚಿನ ಲೀಡ್ ಕೊಟ್ಟು ಗೆಲ್ಲಿಸಿ ಎಂದರು.
ಜೆಡಿಎಸ್ ರಾಜ್ಯ ಪರಿಷತ್ ಸದಸ್ಯ ಆರ್.ಉಗ್ರೇಶ್ ಮಾತನಾಡಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಜೆಡಿಎಸ್ ಪಕ್ಷದ ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದು, ಚಿತ್ರದುರ್ಗ ಲೋಕಸಭಾ ಎನ್.ಡಿ.ಎ.ಅಭ್ಯರ್ಥಿ ಗೋವಿಂದ ಕಾರಜೋಳ ಅವರು ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲಿಸಲು ಜೆಡಿಎಸ್ ಬಿಜೆಪಿ ಕಾರ್ಯಕರ್ತರು ನಾವೆಲ್ಲರೂ ಒಟ್ಟಾಗೆ ಕೆಲಸ ಮಾಡುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ನವೀನ್, ಕೆ.ಎ.ತಿಪ್ಪೇಸ್ವಾಮಿ, ಶಾಸಕ ಸುರೇಶ್ ಗೌಡ, ರೇಷ್ಮೆ ನಿಗಮದ ಮಾಜಿ ಅಧ್ಯಕ್ಷ ಎಸ್ ಆರ್ ಗೌಡ, ತೆಂಗು ನಿಗಮದ ಮಾಜಿ ಅಧ್ಯಕ್ಷ ಬಿ.ಕೆ.ಮಂಜುನಾಥ್, ಮಧುಗಿರಿ ವಿಭಾಗದ ಬಿಜೆಪಿ ಅಧ್ಯಕ್ಷ ಭೀಮನಕುಂಟೆ ಹನುಮೇಗೌಡ, ಪ್ರಧಾನ ಕಾರ್ಯದರ್ಶಿಗಳಾದ ಆರ್.ಕೆ.ಶ್ರೀನಿವಾಸ್, ಯಂಜಲಗೆರೆ ಮೂರ್ತಿ, ಮಾಗೋಡು ಪ್ರತಾಪ್, ಶಿರಾ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಚಿಕ್ಕಣ್ಣ, ನಗರ ಅಧ್ಯಕ್ಷ ಗಿರಿಧರ್, ಜೆಡಿಎಸ್ ಅಧ್ಯಕ್ಷ ಸತ್ಯಪ್ರಕಾಶ್, ಮಾಜಿ ಶಾಸಕ ತಿಮ್ಮರಾಯಪ್ಪ, ಕಾಡುಗೊಲ್ಲ ನಿಗಮದ ಮಾಜಿ ಅಧ್ಯಕ್ಷ ಚಂಗಾವರ ಮಾರಣ್ಣ, ಮಾಜಿ ಬಿಜೆಪಿ ಅಧ್ಯಕ್ಷ ಮಾಲಿ ಮರಿಯಪ್ಪ, ಮಾಜಿ ಜಿ.ಪಂ. ಉಪಾಧ್ಯಕ್ಷ ಮುದಿಮಡು ರಂಗಶಾಮಯ್ಯ, ಮಾಜಿ ನಗರಸಭಾ ಸದಸ್ಯ ಪ್ರಕಾಶ್ ಮುದ್ದುರಾಜ್, ಸಂತೇಪೇಟೆ ನಟರಾಜ್, ಮುಖಂಡರಾದ ಮದಲೂರು ಮೂರ್ತಿ ಮಾಸ್ಟರ್, ವಿಜಯರಾಜ್, ಎಸ್.ಎಸ್.ನಾಗಭೂಷಣ್, ಸುನಿಲ್ ಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.