ನರೇಂದ್ರ ಮೋದಿ ದೇಶದ ರೈತರ ಸಾಲಮನ್ನಾ ಮಾಡಲಿ

| Published : Jun 08 2024, 12:35 AM IST

ಸಾರಾಂಶ

ಪ್ರಧಾನಿಯಾಗಿ ಮೂರನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲಿರುವ ನರೇಂದ್ರ ಮೋದಿ ದೇಶಾದ್ಯಂತ ರೈತರ ಸಾಲಮನ್ನಾ ಮಾಡಬೇಕು.

ಕಂಪ್ಲಿ: ರೈತರಿಂದ ಖರೀದಿ ಮಾಡಿದ ಜೋಳದ ಹಣವನ್ನು ರೈತರಿಗೆ ಪಾವತಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಗೋಡಿಹಾಳ ತಿಳಿಸಿದರು.

ಪಟ್ಟಣದ ಸಂಗಾತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ಗುರುವಾರ ನಡೆದ ಸಂಘದ ಸದಸ್ಯರ ಸಭೆಯಲ್ಲಿ ಮಾತನಾಡಿದರು.

ಪ್ರಧಾನಿಯಾಗಿ ಮೂರನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲಿರುವ ನರೇಂದ್ರ ಮೋದಿ ದೇಶಾದ್ಯಂತ ರೈತರ ಸಾಲಮನ್ನಾ ಮಾಡಬೇಕು. ರಾಷ್ಟ್ರೀಕೃತ ಬ್ಯಾಂಕ್ ಮತ್ತು ಮೈಕ್ರೋ ಫೈನಾನ್ಸ್ ಮತ್ತು ಸರ್ಕಾರಿ ಹಣಕಾಸಿನ ಸಂಸ್ಥೆಗಳು ರೈತರಿಗೆ ನೋಟಿಸ್‌ ನೀಡುವುದು, ಸಾಲ ವಸೂಲಾತಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು. ರಾಜ್ಯ ಸರ್ಕಾರ ರೈತರಿಗೆ ಉತ್ತಮ ಗುಣಮಟ್ಟದ ಬೀಜಗಳನ್ನು ವಿತರಿಸಬೇಕು. ಹೆಚ್ಚಿನ ದರಕ್ಕೆ ಮಾರಾಟ ಮಾಡದಂತೆ ತಡೆಗಟ್ಟಬೇಕು. ಕಳಪೆ ಬೀಜ ಮತ್ತು ಕ್ರಿಮಿನಾಶಕ ಮಾರಾಟ ಮಾಡುವುದನ್ನು ತಡೆಗಟ್ಟಬೇಕು. ಸರ್ಕಾರಿ ಶಾಲೆಗಳಲ್ಲಿನ ಮಕ್ಕಳಿಗೆ ಅನುಗುಣವಾಗಿ ವಿಷಯವಾರು ಶಿಕ್ಷಕರನ್ನು ಭರ್ತಿ ಮಾಡಬೇಕು. ಶಾಲಾ ಮಕ್ಕಳಿಗೆ ಸರಿಯಾದ ಸಮಯಕ್ಕೆ ಬಸ್ಸಿನ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಯಚೂರು ಜಿಲ್ಲಾಧ್ಯಕ್ಷ ಶಿವರಾಜ್ ಮಾಲಾರದಿನ್ನಿ, ತಾಲೂಕು ಅಧ್ಯಕ್ಷ ಸಿ.ಎ. ಚನ್ನಪ್ಪ, ಸಿಂಧನೂರು ತಾಲೂಕು ಅಧ್ಯಕ್ಷ ಹುಲುಗಯ್ಯ, ಉಪಾಧ್ಯಕ್ಷ ರುದ್ರಪ್ಪ, ಗೌರವ ಅಧ್ಯಕ್ಷ ಸಿ.ರಾಮ್ಮಪ್ಪ, ಮೂಲೆಮನೆ ಮಂಜುನಾಥ್, ಮುಖಂಡರಾದ ಮಾಧವ, ಮಹದೇವಪ್ಪ, ಎನ್.ವೆಂಕಟೇಶ್ ಸೇರಿದಂತೆ ಇದ್ದರು.