ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿ
ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಖಂಡಿಸಿ ಇಲ್ಲಿನ ನಾಗರಿಕ ಹಿತರಕ್ಷಣಾ ವೇದಿಕೆ, ತಾಲೂಕು ಜಂಗಮ ಸಮಾಜ, ವಿವಿಧ ಮಹಿಳಾ ಸಂಘಟನೆ, ಕನ್ನಡ ಪರ ಸಂಘಟನೆ ಮತ್ತು ಹಿಂದುಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸುವ ಮೂಲಕ ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಪಟ್ಟಣದ ಬುಧವಾರಪೇಟೆದಿಂದ ಆರಂಭವಾದ ಬೃಹತ್ ಪ್ರತಿಭಟನಾ ಮೆರವಣಿಗೆ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರ್ಪಳಿ ನಿರ್ಮಿಸಿ ಜೇವರ್ಗಿ-ಸಂಕೇಶ್ವರ ರಾಜ್ಯ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದರು.ಶೆಟ್ಟರ ಮಠದ ಮರುಳಸಿದ್ದ ಸ್ವಾಮೀಜಿ ಮಾತನಾಡಿ, ಹುಬ್ಬಳ್ಳಿ ಕಾಲೇಜ್ ವಿದ್ಯಾರ್ಥಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವುದು ಅತ್ಯಂತ ಪೈಶಾಚಿಕ ಕೃತ್ಯವಾಗಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ದಿಟ್ಟ ಮಹಿಳೆಯರ ಈ ನಾಡಿನಲ್ಲಿ ಇಂದು ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಶಾಲಾ ಕಾಲೇಜಿನ ಮಕ್ಕಳು ಕೊಲಿಯಾಗುತ್ತಿರುವ ಘಟನೆ ಪಾಲಕರಲ್ಲಿ ಆತಂಕ ತರುತ್ತದೆ. ನೇಹಾಳನ್ನ ಕೊಚ್ಚಿ ಕೊಲೆ ಮಾಡಿದ ಕೊಲೆಗಡುಕನನ್ನು ಸುಮ್ಮನೆ ಬಿಡಬಾರದು. ರಾಜ್ಯದಲ್ಲಿ ಇಂತಹ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿರುವುದರಿಂದ ರಾಜ್ಯ ಸರ್ಕಾರ ಕಠಿಣವಾದ ಕಾನೂನನ್ನು ರೂಪಿಸಬೇಕು ಎಂದು ಒತ್ತಾಯಿಸಿದರು.
ಮಾಜಿ ಶಾಸಕ ಶಹಜಾನ ಡೊಂಗರಗಾಂವ ಮಾತನಾಡಿ, ಚಾಕುವಿನಿಂದ ಇರಿದು ಕೊಲೆ ಮಾಡಿರುವುದು ಅತ್ಯಂತ ಹೀನ ಕೃತ್ಯವಾಗಿದೆ. ಇದು ರಾಜ್ಯದ ಜನತೆಯಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಆತಂಕ ಹುಟ್ಟಿಸಿದ ಘಟನೆಯಾಗಿದೆ. ಕೊಲೆಗಾರನ ವಿರುದ್ಧ ಕಾನೂನಾತ್ಮಕವಾಗಿ ಅತ್ಯಂತ ಕಠಿಣ ಶಿಕ್ಷೆಗೆ ವಿಧಿಸಬೇಕು. ಫಯಾಜ್ ಮಾಡಿರುವ ಹೀನ ಕೃತ್ಯಕ್ಕೆ ಇಡೀ ಮುಸ್ಲಿಂ ಸಮುದಾಯಕ್ಕೆ ಕೆಟ್ಟ ಹೆಸರು ಬರುವಂತಾಗಿದೆ. ಎಲ್ಲ ಸಮುದಾಯದ ಮುಖಂಡರು ಧರ್ಮ ಗುರುಗಳು ಸೂಕ್ತ ಮಾರ್ಗದರ್ಶನ ಮಾಡುವ ಮೂಲಕ ನಮ್ಮ ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರ ಮತ್ತು ಮಾರ್ಗದರ್ಶನ ನೀಡುವುದು ಇಂದಿನ ಅಗತ್ಯವಾಗಿದೆ. ನಮ್ಮ ನಾಡಿನಲ್ಲಿ ಇಂತಹ ಘಟನೆಗಳು ಮರುಕಳಿಸಬಾರದು. ರಾಜ್ಯ ಸರ್ಕಾರ ನಿಷ್ಪಕ್ಷಪಾತದಿಂದ ಈ ಘಟನೆಯ ಬಗ್ಗೆ ತನಿಖೆ ನಡೆಸಿ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.ಯುವ ಮುಖಂಡ ಚಿದಾನಂದ ಸವದಿ ಮಾತನಾಡಿ, ವಿದ್ಯಾರ್ಥಿಯನ್ನು ಕಾಲೇಜು ಆವರಣದಲ್ಲಿ ಹತ್ಯೆ ಮಾಡಿರುವ ಕೃತ್ಯ ರಾಜ್ಯದ ಜನತೆಯನ್ನು ಬೆಚ್ಚಿಬಿಳಿಸಿದೆ. ನೇಹಾ ಸಾವಿಗೆ ನ್ಯಾಯ ಸಿಗಬೇಕು. ಈ ನಿಟ್ಟಿನಲ್ಲಿ ಈಗಾಗಲೇ ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ಪ್ರಕರಣವನ್ನು ಸಿಐಡಿಗೆ ಒಪ್ಪಿಸಿದ್ದಾರೆ. ವಿಶೇಷ ನ್ಯಾಯಾಲಯ ಸ್ಥಾಪಿಸಿ ಅಪರಾಧಿಗೆ ಕಠಿಣ ಶಿಕ್ಷೆ ನೀಡುವಲ್ಲಿ ಸರ್ಕಾರ ಮುಂದಾಗಿರುವುದು ನಮ್ಮೆಲ್ಲರಿಗೆ ಸಮಾಧಾನ ತಂದಿದೆ. ಈ ಕೊಲೆ ಪ್ರಕರಣವನ್ನು ಯಾರು ರಾಜಕೀಯವಾಗಿ ಬಳಸಿಕೊಳ್ಳಬಾರದು. ಇಂದು ಅಥಣಿಯಲ್ಲಿ ನಡೆದ ಹೋರಾಟದಲ್ಲಿ ಪಕ್ಷಾತೀತ ಮತ್ತು ಜಾತ್ಯಾತೀತವಾಗಿ ಎಲ್ಲ ಸಮುದಾಯದವರು ಪಾಲ್ಗೊಳ್ಳುವ ಮೂಲಕ ವಿದ್ಯಾರ್ಥಿನಿ ನೇಹಾ ಕುಟುಂಬಕ್ಕೆ ನ್ಯಾಯ ದೊರಕಬೇಕೆಂದು ಹೋರಾಟ ಮಾಡಲಾಗುತ್ತಿದೆ. ಸರ್ಕಾರ ಕೂಡಲೇ ತನಿಖೆಯನ್ನು ಚುರುಕುಗೊಳಿಸಿ ಕೊನೆ ಹಂತಕನಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.
ಜಂಗಮ ಸಮಾಜದ ಮೀನಾಕ್ಷಿ ತೆಲಸಂಗ ಮಾತನಾಡಿ, ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯ, ಕೊಲೆಗಳು ದೇಶಕ್ಕೆ ಮಾರಕ. ಇನ್ನು ಮುಂದೆ ರಾಜ್ಯದಲ್ಲಿ ಇಂತಹ ಘಟನೆಗಳು ಜರುಗದಂತೆ ರಾಜ್ಯ ಸರ್ಕಾರ ಮಹಿಳೆಯರಿಗೆ ರಕ್ಷಣೆ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.ಮುಖಂಡರಾದ ಉಮೇಶರಾವ ಬಂಟೋಡ್ಕರ, ಪ್ರಕಾಶ ಮಹಾಜನ, ಕರವೇ ಅಧ್ಯಕ್ಷ ಅಣ್ಣಾಸಾಬ ತೆಲಸಂಗ, ದಲಿತ ಮುಖಂಡ ಸಿದ್ದಾರ್ಥ ಸಿಂಗೆ, ಯುವ ಮುಖಂಡ ಶಿವಕುಮಾರ ಸವದಿ, ಹಿರಿಯ ಪತ್ರಕರ್ತ ಸಿ.ಎ.ಇಟ್ನಾಳಮಠ ಮಾತನಾಡಿದರು. ನಂತರ ತಹಸೀಲ್ದಾರ್ ಕಾರ್ಯಾಲಯಕ್ಕೆ ತೆರಳಿ ಉಪತಹಸೀಲ್ದಾರ್ ಮಹದೇವ್ ಬಿರಾದಾರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಿವಕುಮಾರ ತೆಲಸಂಗ, ಕಾಡಯ್ಯ ಹಿರೇಮಠ, ಶರಣಯ್ಯ ವಸ್ತ್ರದ, ಜಗದೀಶ ಹಿರೇಮಠ, ಈರಣ್ಣ ಜಗದಾಳ ಮಠ, ಎಂ.ಡಿ.ತೊದಲಬಾಗಿ, ಕಲ್ಲಪ್ಪ ಒಣಜೋಳ, ಸಂಜೀವ ತೆಲಸಂಗ, ಸಂಪತಕುಮಾರ ಶೆಟ್ಟಿ, ಸಂತೋಷ ಸಾವಡಕರ, ಜಗನ್ನಾಥ ಬಾಮನೆ, ಶಿವಪುತ್ರ ಯಾದವಾಡ, ಪ್ರಶಾಂತ ತೋಡಕರ, ಸಿದ್ದು ಮಾಳಿ, ಪಿಂಟು ಹಿರೇಮಠ, ರೋಹಿಣಿ ಯಾದವಾಡ, ಗೀತಾ ತೋರಿ, ರಾಜು ವಾಘಮೋರೆ, ನಟರಾಜ ಹಿರೇಮಠ, ಮುತ್ತುರಾಜ್ ಸೇರಿದಂತೆ ಅನೇಕ ಮುಖಂಡರು, ವಿವಿಧ ಸಂಘಟನೆಯ ಪದಾಧಿಕಾರಿಗಳು ಹೋರಾಟದಲ್ಲಿ ಪಾಲ್ಗೊಂಡಿದ್ದರು.;Resize=(128,128))
;Resize=(128,128))
;Resize=(128,128))